Advertisement

ಹಳ್ಳಿಗಳಲ್ಲಿ ಸುದ್ದಿಯ ಬೆಳಕು ಹರಡಿಸುವವರು

09:09 PM Sep 03, 2021 | Team Udayavani |

ಗ್ರಾಮೀಣ ಪ್ರದೇಶಗಳಲ್ಲಿ ಬೆಳ್ಳಂಬೆಳಗ್ಗೆ ದಿನಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವುದೆಂದರೆ ದೊಡ್ಡ ಸಾಹಸವೇ ಆಗಿದೆ. ಎಷ್ಟೋ ಕಡೆಗೆ ಇಂದಿಗೂ ಸರಿಯಾದ ರಸ್ತೆ, ದಾರಿಗಳಿಲ್ಲ. ಇಂತಹ ದುರ್ಗಮ ಪ್ರದೇಶಗಳಿಗೆ ಹಲವಾರು ಮಂದಿ ಪತ್ರಿಕಾ ವಿತರಕರು ಹಲವು ವರ್ಷಗಳಿಂದ ದಣಿವರಿಯದೆ, ಮಳೆ-ಗಾಳಿ ಎನ್ನದೆ ಸೂರ್ಯ ಮೂಡುವುದಕ್ಕೂ ಮೊದಲು ಸುದ್ದಿಯ ಬೆಳಕನ್ನು ಹರಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಇಬ್ಬರು ಪತ್ರಿಕಾ ವಿತರಕರ ಯಶೋಗಾಥೆ ಇಲ್ಲಿದೆ.

Advertisement

ಮೂರು ಗಂಟೆಯಲ್ಲಿ 40 ಕಿ.ಮೀ. ಸುತ್ತಿ ಪತ್ರಿಕೆ ವಿತರಣೆ
ಉಡುಪಿ: ಮುಂಜಾನೆ 4ರಿಂದ 7 ಗಂಟೆಯವರೆಗೆ ಪತ್ರಿಕಾ ವಿತರಣೆ. ಈ ಮೂರು ಗಂಟೆಯ ಅವಧಿಯಲ್ಲಿ ಒಟ್ಟು 40ರಿಂದ 50 ಕಿ.ಮೀ.ಗಳಷ್ಟು ಪ್ರಯಾಣ. ಇದು ಕಳೆದ 25 ವರ್ಷಗಳಿಂದ ಪತ್ರಿಕೆ ವಿತರಣೆ ಮಾಡುತ್ತಿರುವ ಸದಾಶಿವ ಎನ್‌.ಶೆಟ್ಟಿ ಕಳತ್ತೂರು ಅವರ ಜೀವನಶೈಲಿ.

25 ವರ್ಷಗಳ ಹಿಂದೆ ಆರಂಭದಲ್ಲಿ ಸೈಕಲ್‌ ಮೂಲಕ ಇವರ ಪತ್ರಿಕಾ ವಿತರಣೆ ಕಾಯಕ ಆರಂಭಗೊಂಡಿತ್ತು. ಕಳತ್ತೂರಿ ನಿಂದ ಶಿರ್ವಕ್ಕೆ ಆಗಮಿಸಿ ಮೂರು ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದ ಇವರು ಈಗ 75ರಿಂದ 80ರಷ್ಟು ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದಾರೆ.

ಆ ಸಂದರ್ಭದಲ್ಲಿ ಜನರೇ ಪತ್ರಿಕೆ ಹಾಕಿಸುವಂತೆ ತಿಳಿಸುತ್ತಿದ್ದರು. ಮಗನ ಮೂಲಕ ಗೆಳೆಯರ ಮನೆಗಳಿಗೆ ತೆರಳಿ ಹಾಗೂ ಶಾಲೆಗಳಿಗೆ ಪತ್ರಿಕೆ ಗಳನ್ನು ಹಾಕುವ ಮೂಲಕ ವಿತರಣೆ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಮಳೆಗಾಲ ದಲ್ಲಿ ಪತ್ರಿಕೆ ವಿತರಣೆ ಬಹಳಷ್ಟು ಕಷ್ಟಕರವಾಗುತ್ತಿತ್ತು ಎನ್ನುತ್ತಾರೆ ಅವರು.

ಮೂಲತಃ ಕೃಷಿ ಕುಟುಂಬದಿಂದ ಬಂದ ಅವರು ಮನೆ-ಮನೆಗೆ ಪತ್ರಿಕಾ ವಿತರಣೆ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಶ್ರಮಜೀವಿ. ಗ್ರಾಮೀಣ ಪ್ರದೇಶದಲ್ಲಿ ದೂರದೂರದ ಮನೆಗಳಿಗೆ ಸೈಕಲ್‌ ತುಳಿದು ಆಯಾಸವಾದರೂ ಲೆಕ್ಕಿಸದೆ ಪತ್ರಿಕೆ ವಿತರಣೆ ಮಾಡುತ್ತಿದ್ದಾರೆ. ಈಗಲೂ ಪತ್ರಿಕೆ ವಿತರಣೆ ಕಾಯಕವನ್ನು ಮುಂದುವರಿಸಿಕೊಂಡು ಪ್ರಾಮಾಣಿಕ ಸೇವೆಯಿಂದ ಜನಪ್ರಿಯರಾಗಿದ್ದಾರೆ.

Advertisement

ಇದನ್ನೂ ಓದಿ:ಪ್ರಧಾನಿ ಮೋದಿ ಮನೆಯಂಗಳದಲ್ಲಿ ಕೇರಳದ ಪುಟಾಣಿ ಉಡುಗೊರೆಯಾಗಿ ನೀಡಿದ ಪೇರಳೆ ಗಿಡ

ದೋಣಿ ಮೂಲಕ ಸಾಗಿ ಪತ್ರಿಕೆ ವಿತರಿಸಿದ್ದೆವು
ಉಡುಪಿ: ಪಡುಕರೆಗೆ ಸೇತುವೆ ವ್ಯವಸ್ಥೆಯಿಲ್ಲದ ಕಾಲದಲ್ಲಿ ಪತ್ರಿಕೆ ವಿತರಕ ಸತೀಶ್‌ ಕುಮಾರ್‌ ಅವರು ಸುಮಾರು 15 ವರ್ಷಗಳ ಕಾಲ ಸಮುದ್ರದ ಅಳಿವೆಬಾಗಿಲಿನ ಮೂಲಕ ದೋಣಿಯಲ್ಲಿ ಪಡುಕೆರೆ ದ್ವೀಪದಲ್ಲಿರುವ ಮನೆಗಳಿಗೆ ವರ್ಷದ 365 ದಿನವೂ ನಿಗದಿತ ಸಮಯದೊಳಗೆ ಉದಯವಾಣಿ ಪತ್ರಿಕೆಯನ್ನು ತಲುಪಿಸುವ ಕೆಲಸ ಮಾಡಿದ್ದಾರೆ.


ಮಲ್ಪೆಯ ನಿವಾಸಿ ಸತೀಶ್‌ ಕುಮಾರ್‌ (49) ಕಳೆದ 23 ವರ್ಷಗಳಿಂದ ಉದಯವಾಣಿ ಪತ್ರಿಕೆಯನ್ನು ವಿತರಿಸುತ್ತಿದ್ದಾರೆ. ಪ್ರಾರಂಭದಲ್ಲಿ ಪತ್ರಿಕೆ ವಿತರಣೆ ಮಾಡುತ್ತಿದ್ದವರು ಅನಂತರ ಪತ್ರಿಕೆ ವಿತರಣೆ ಏಜೆನ್ಸಿಯನ್ನು ಪಡೆದುಕೊಂಡಿದ್ದಾರೆ. ಪಡುಕರೆ ಸೇರಿದಂತೆ ವಿವಿಧ ಭಾಗದಲ್ಲಿ 300ಕ್ಕೂ ಅಧಿಕ ಪ್ರತಿಗಳನ್ನು ನಿರಂತರವಾಗಿ ವಿತರಿಸುತ್ತಿದ್ದಾರೆ.

ಮಲ್ಪೆಯಿಂದ ಪಡುಕರೆ ಸೇತುವೆ ನಿರ್ಮಾಣವಾಗಿ 8 ವರ್ಷ ಗಳಾಗಿವೆ. ಅದಕ್ಕೂ ಮೊದಲು ಮಲ್ಪೆಯಿಂದ ಪಡುಕರೆಯನ್ನು ಸಂಪರ್ಕಿಸಲು ದೋಣಿಯನ್ನು ಬಳಸಬೇಕಾಗಿತ್ತು. ಸತೀಶ್‌ ಅವರು ಸುಮಾರು 15 ವರ್ಷಗಳ ಕಾಲ ತಮ್ಮ ಸೈಕಲ್‌ ಹಾಗೂ ಪೇಪರ್‌ ಪ್ರತಿಗಳನ್ನು ದೋಣಿಯಲ್ಲಿ ಹಾಕಿಸಿಕೊಂಡು ನದಿ ದಾಟಿ ಓದುಗರಿಗೆ ಪತ್ರಿಕೆ ವಿತರಿಸಿದ್ದಾರೆ. ಸಮುದ್ರದಲ್ಲಿ ವಾಯುಭಾರ ಕುಸಿತ, ಅಲೆಗಳ ಅಬ್ಬರಗಳು ಹೆಚ್ಚಿರುವ ಸಂದರ್ಭದಲ್ಲಿಯೂ ದೋಣಿಯ ಮೂಲಕ ತೆರಳಿ ದ್ವೀಪದ ಜನರಿಗೆ ಪತ್ರಿಕೆ ವಿತರಿಸಿದ್ದಾರೆ.

ಪಡುಕರೆಗೆ ಸೇತುವೆ ಸಂಪರ್ಕ ನಿರ್ಮಿಸಿದ ಬಳಿಕ ಆಟೋ ರಿಕ್ಷಾದ ಮೂಲಕ ತೆರಳಿ ಮನೆ ಮನೆಗೆ ಪೇಪರ್‌ ವಿತರಿಸುತ್ತಿದ್ದಾರೆ. ಸೇತುವೆ ವ್ಯವಸ್ಥೆಯಿಲ್ಲದ ಕಾಲದಲ್ಲಿ ಪತ್ರಿಕೆ ವಿತರಿಸುವ ಸಂದರ್ಭದಲ್ಲಿ ಕೊಂಚ ಕಷ್ಟವಾಗುತ್ತಿತ್ತು. ಆದರೂ ಪತ್ರಿಕೆಯನ್ನು ನಿತ್ಯವೂ ಜನರ ಮನೆಗೆ ತಲುಪಿಸಿದ್ದೇನೆ ಎಂದು ಸತೀಶ್‌ ಕುಮಾರ್‌ ಹೆಮ್ಮೆಯಿಂದ ತಿಳಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next