ದಾವಣಗೆರೆ: ಲಿಂಗಾಯತ ಸ್ವತಂತ್ರ ಧರ್ಮ ಎಂಬುದರ ಬಗ್ಗೆ ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಯವರಿಗೆ ಸ್ಪಷ್ಟತೆ ಇಲ್ಲ. ಲಿಂಗಾಯತ ಧರ್ಮದ ಬಗ್ಗೆ ಸ್ಪಷ್ಟತೆ ನೀಡಲು ಕರೆದರೆ ನಾವು ಅವರ ಬಳಿ ಹೋಗಲು ಸಿದ್ಧ ಎಂದು ಜಿಲ್ಲೆಯ ಲಿಂಗಾಯತ ಸಂಘಟನೆಗಳ ಪ್ರಮುಖರು ಹೇಳಿದರು.
ಲಿಂಗಾಯತರೆಲ್ಲ ಹಿಂದೂಗಳು ಎಂಬ ವಚನಾನಂದ ಸ್ವಾಮೀಜಿ ಹೇಳಿಕೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತರು ಹಿಂದೂಗಳು ಎನ್ನುವ ಮೂಲಕ ವಚನಾನಂದ ಸ್ವಾಮೀಜಿಯವರು ಸಮಾಜದಲ್ಲಿ ಗೊಂದಲ ಮೂಡಿಸಿದ್ದಾರೆ. ಅವರು ಇನ್ನು ಮುಂದೆ ಈ ರೀತಿಯ ಹೇಳಿಕೆ ನೀಡಬಾರದು. ಧರ್ಮದ ಬಗ್ಗೆ ಇನ್ನಷ್ಟು ಅರಿತು, ಅರ್ಥ ಮಾಡಿಕೊಳ್ಳಬೇಕು ಎಂದರು.
ಲಿಂಗಾಯತ ಸ್ವತಂತ್ರ ಧರ್ಮ ಎನ್ನುವುದನ್ನು ಬಸವಾದಿ ಶರಣರು ಸ್ಪಷ್ಟಪಡಿಸಿದ್ದರೂ ಕೆಲವರು ಇದನ್ನು ಒಪ್ಪಿಕೊಳ್ಳುವ ಮನಸ್ಸಿಲ್ಲದೆ ತಮಗೆ ತೋಚಿದಂತೆ ವಿಶ್ಲೇಷಣೆ ಮಾಡುವ ಹುನ್ನಾರ ನಡೆಸಿದ್ದಾರೆ ಎಂದರು.
ಲಿಂಗಾಯತ ಸ್ವತಂತ್ರ ಧರ್ಮ ಎನ್ನುವ ಮಾತು ಕೇಳುತ್ತಲೇ ಹಲವರ ತಲೆಯಲ್ಲಿ ಬೆಂಕಿ ಬಿದ್ದಂತಾಗುತ್ತದೆ. ಹಾಗಾಗಿ ಅವರು ಏನೇನೋ ಬಡಬಡಿಸುತ್ತಾರೆ. ಲಿಂಗಾಯತ ಸ್ವತಂತ್ರ ಧರ್ಮ ಎಂದು ಪ್ರತಿಪಾದಿಸುವುದು ರಾಷ್ಟ್ರದ ಐಕ್ಯತೆಗೆ ಧಕ್ಕೆ, ರಾಷ್ಟ್ರ ದ್ರೋಹ, ಧರ್ಮ ದ್ರೋಹ ಎಂದು ಕೆಲವು ಬುದ್ಧಿವಂತರು ಹಳಹಳಿಸುತ್ತಿದ್ದಾರೆ. ಹಿಂದೂ ಪದ ಪ್ರದೇಶ ವಾಚಕವಾಗಿ ಬಳಕೆಯಾದಲ್ಲಿ ಇಲ್ಲಿರುವ ಎಲ್ಲ ಧರ್ಮದವರಂತೆ ಲಿಂಗಾಯತರೂ ಹಿಂದುಗಳೇ ಆಗಿದ್ದಾರೆ. ಆದರೆ, ಹಿಂದೂ ಪದ ಧರ್ಮ ಎಂಬ ಅರ್ಥದಲ್ಲಿ ಬಳಕೆಯಾಗುವುದಾದರೆ ಲಿಂಗಾಯತರು ಹಿಂದೂಗಳಲ್ಲ ಎಂದರು.
ಹಿಂದೂ ಹಾಗೂ ಲಿಂಗಾಯತ ಎರಡೂ ಧರ್ಮಗಳ ತಾತ್ವಿಕ ವಿಚಾರಗಳಲ್ಲಿ ಅಜಗಜ ವ್ಯತ್ಯಾಸವಿದೆ. ಇದನ್ನು ಗಮನಿಸಿಯೇ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಶನದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಎಂದು ನಿರ್ಣಯ ಕೈಗೊಳ್ಳಲಾಗಿದೆ. ಲಿಂಗಾಯತ ಸ್ವತಂತ್ರ ಧರ್ಮ. ಬಸವಣ್ಣನವರೇ ಧರ್ಮದ ಸಂಸ್ಥಾಪಕರು. ವಚನ ಸಾಹಿತ್ಯವೇ ಧರ್ಮ ಗ್ರಂಥ. ಇಷ್ಟಲಿಂಗ ಪೂಜೆಯೇ ಧರ್ಮದ ಲಾಂಛನ ಎಂದು ಹೇಳಿದಾಕ್ಷಣ ನಾವು ದೇಶದ್ರೋಹಿಗಳಾಗಲು, ಹಿಂದೂ ವಿರೋಧಿಗಳಾಗಲು ಸಾಧ್ಯವಿಲ್ಲ. ಇನ್ನಾದರೂ ಲಿಂಗಾಯತ ಧರ್ಮದ ಬಗ್ಗೆ ಸಂಪೂರ್ಣವಾಗಿ ಅರಿಯದವರು ಅರಿತುಕೊಳ್ಳಲಿ ಎಂದರು.
ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಅವರಗೆರೆ ರುದ್ರಮುನಿ, ಜಿಲ್ಲಾ ಉಪಾಧ್ಯಕ್ಷೆ ಮಧುಮತಿ ಗಿರೀಶ್, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ರುದ್ರಗೌಡರು, ಬಸವಬಳಗದ ಸದಸ್ಯ ಮಹಾಂತೇಶ ಅಂಗಡಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ್ದರು.