Advertisement
ರಾಜಭವನದ ಗಾಜಿನ ಮನೆಯಲ್ಲಿ ಬುಧವಾರ ಇಳಿಸಂಜೆ ಕಂಡು ಬಂದ ಚಿತ್ರಣವಿದು. ಪೊಲೀಸ್ ಇಲಾಖೆಯಲ್ಲಿ ದಕ್ಷತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ, ಶ್ಲಾಘನೀಯ ಸೇವಾ ಪದಕ, ಕೇಂದ್ರ ಗೃಹ ಇಲಾಖೆಯಿಂದ ಶ್ರೇಷ್ಠ ತರಬೇತಿ ಪದಕಗಳನ್ನು ನೀಡಿ ಗೌರವಿಸಲಾಯಿತು.
Related Articles
Advertisement
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಪೊಲೀಸ್ ಇಲಾಖೆ ಎಂದೂ ತಮ್ಮ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಸಂಘಟಿತ ಅಪರಾಧಿಗಳು, ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಕಾರ್ಯನಿರ್ವಹಿಸಿ. ಪ್ರಾಮಾಣಿಕತೆ, ದಕ್ಷತೆಯಿಂದ ಸೇವೆ ಸಲ್ಲಿಸುವ ಅಧಿಕಾರಿಗಳಿಗೆ ಸರ್ಕಾರದ ಬೆಂಬಲ ಸದಾ ಇರಲಿದೆ ಎಂದು ಭರವಸೆ ನೀಡಿದರು.
ಅವಿಸ್ಮರಣೀಯ ಸೇವೆಗೆ ಪದಕಗಳನ್ನು ಪಡೆದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದ ಮುಖ್ಯಮಂತ್ರಿಗಳು, ಪೊಲೀಸರ ಯಶಸ್ವಿನಲ್ಲಿ ಕುಟುಂಬದ ಬೆಂಬಲವೂ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು, ಎಡಿಜಿಪಿಗಳಾದ ಭಾಸ್ಕರ್ ರಾವ್, ಕಮಲ್ ಪಂಥ್, ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಜತೆಗೆ ಬಿಜೆಪಿ ಶಾಸಕ ಆರ್.ಅಶೋಕ, ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ಅನರ್ಹ ಶಾಸಕ ಆರ್.ಶಂಕರ್ ಹಾಜರಿದ್ದರು.
ಜೈಕಾರ ಪಾಕಿಸ್ತಾನಕ್ಕೆ ಕೇಳಬೇಕು: ಅಭಿನಂದನಾ ಭಾಷಣದ ಕೊನೆಯಲ್ಲಿ ಭೋಲೋ ಭಾರತ್ ಮಾತಾಕಿ ಎಂದ ರಾಜ್ಯಪಾಲರು, ಸಭೀಕರ ಜೈ ಕಾರದ ಬಳಿಕ ಇಲ್ಲಿ ಎಲ್ಲರೂ ಪೊಲೀಸರೇ ಇದ್ದೀರಿ. ನಿಮ್ಮ ಜೈ ಕಾರ ಎಷ್ಟು ಜೋರಾಗಿರಬೇಕು ಗೊತ್ತೇ… ನೀವು ಒಮ್ಮೆ ಜೈಕಾರ ಹಾಕಿದರೆ ಅದು ಶತ್ರುವಿನ ಎದೆಯಲ್ಲಿ ನಡುಕ ಹುಟ್ಟಿಸುವಂತಿರಬೇಕು ಎಂದು ಹುರಿದುಂಬಿಸಿದರು. ಅಲ್ಲದೆ, ಭಾರತ ಮಾತೆಗೆ ಹಾಕುವ ಜೈಕಾರ ಪಾಕಿಸ್ತಾನಕ್ಕೆ ಕೇಳಬೇಕು ಎಂದರು.