ಹೊಸದಿಲ್ಲಿ : ಭಾರತೀಯ ಜನತಾ ಪಕ್ಷದ ರಾಷ್ಟ್ರಪತಿ ಹುದ್ದೆ ಅಭ್ಯರ್ಥಿಯಾಗಿರುವ ರಾಮನಾಥ ಕೋವಿಂದ್ ಅವರಿಂದು ಶುಕ್ರವಾರ ಭಾರತದ 15ನೇ ರಾಷ್ಟ್ರಪತಿ ಚುನಾವಣಾರ್ಥ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಚುನಾವಣೆ ಜುಲೈ 17ರಂದು ನಡೆಯಲಿದೆ.
ಹಾಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಜುಲೈ 25ರಂದು ತಮ್ಮ ಅಧಿಕಾರಾವದಿ ಮುಗಿಸಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಇದೇ ಆಗಸ್ಟ್‌ನಲ್ಲಿ ತಮ್ಮ ಎರಡನೇ ಕಾರ್ಯಾವಧಿಯನ್ನು ಮುಗಿಸಲಿದ್ದಾರೆ.
ರಾಷ್ಟ್ರಪತಿಯನ್ನು ರಾಷ್ಟ್ರ ಮತ್ತು ರಾಜ್ಯ ಶಾಸಕರನ್ನು ಒಳಗೊಂಡ ಚುನಾವಣಾ ವರಿಷ್ಠ ಸಮೂಹವು ಆಯ್ಕೆ ಮಾಡಲಿದೆ.
ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಅವರ ಎದುರಾಳಿಯಗಿ ದಲಿತ ಸಮುದಾಯದ ಮೀರಾ ಕುಮಾರ್ ಅವರನ್ನು ವಿರೋಧ ಪಕ್ಷಗಳು ಕಣಕ್ಕೆ ಇಳಿಸಿವೆ. ಮೀರಾ ಕುಮಾರ್ ಅವರು ಲೋಕಸಭೆಯ ಮಾಜಿ ಸ್ಪೀಕರ್.
ರಾಮನಾಥ ಕೋವಿಂದ್ ಅವರ ಕಿರು ಪರಿಚಯ ಇಂತಿದೆ : ಜನನ 1945ರ ಅಕ್ಟೋಬರ್ 1; ಉತ್ತರ ಪ್ರದೇಶದ ಕಾನ್ಪುರದ ಗ್ರಾಮದಲ್ಲಿ; ಭಾರತೀಯ ಜನತಾ ಪಕ್ಷದ ರಾಜಕಾರಣಿಯಾಗಿದ್ದರು; ಯಾವುದೇ ವಿವಾದಕ್ಕೆ ಗುರಿಯಾಗದೆ ಕ್ಲೀನ್ ಇಮೇಜ್ ಹೊಂದಿದ್ದಾರೆ. 1994-2000 ಮತ್ತು 2000-2006 ಈ ಎರಡು ಅವಧಿಗೆ ಇವರು ಉತ್ತರ ಪ್ರದೇಶದಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದರು. ಸಿವಿಲ್ ಸರ್ವಿಸ್ ಪರೀಕ್ಷೆ ಪಾಸಾಗಿದ್ದಾರೆ. ಬಿಜೆಪಿ ದಲಿತ್ ಮೋರ್ಚಾದ ಅಧ್ಯಕ್ಷರಾಗಿದ್ದರು (1998-2002).