ಹೊಸದಿಲ್ಲಿ : ಜು.17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿ, ವಿರೋಧ ಪಕ್ಷಗಳ ರಾಷ್ಟ್ರಪತಿ ಹುದ್ದೆ ಅಭ್ಯರ್ಥಿಯಾಗಿರುವ ಮೀರಾ ಕುಮಾರ್ ಅವರಿಂದು ಬುಧವಾರ ತಮ್ಮ ನಾಮಪತ್ರ ಸಲ್ಲಿಸಿದರು.
ಮೀರಾ ಕುಮಾರ್ ಅವರು ಎನ್‌ಡಿ ಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರನ್ನು ಚುನಾವಣೆಯಲ್ಲಿ ಎದುರಿಸಲಿದ್ದಾರೆ. ಜು.20ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಮೀರಾ ಕುಮಾರ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ,ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಟಿಂಸಿ ಸಂಸದ ಡೆರೆಕ್ ಓ ಬ್ರೈನ್, ಜೆಡಿಯು ನಾಯಕ ಶರದ್ ಯಾದವ್ ಮತ್ತು ಇತರ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಈ ಸಂದರ್ಭವನ್ನು ಕಾರಣಾಂತರಗಳಿಂದ ತಪ್ಪಿಸಿಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವಿಟರ್ ಮೂಲಕ ಮೀರಾ ಕುಮಾರ್ ಅವರನ್ನು ಪ್ರಶಂಸಿಸಿ ಆಕೆಯ ರಾಷ್ಟ್ರಪತಿ ಉಮೇದ್ವಾರಿಕೆಯನ್ನು ಬೆಂಬಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಮುನ್ನ ಮೀರಾ ಕುಮಾರ್ ಅವರು ರಾಜಘಾಟ್‌ಗೆ ತೆರಳಿ ಅಲ್ಲಿ ರಾಷ್ಟ್ರ ಪಿತ ಮಹಾತ್ಮಾ ಗಾಂಧೀಜಿ ಗೆ ಪುಷ್ಪಾಂಜಲಿ ಅರ್ಪಿಸಿದರು.