Advertisement

ರಾಷ್ಟ್ರಪತಿ ಚುನಾವಣೆ –“ಅಮುಖ್ಯ’, “ಅವಿಶಿಷ್ಟ’ಘಟನೆ?

07:23 AM Jul 19, 2017 | |

ರಾಮನಾಥ್‌ ಕೋವಿಂದ್‌ ಅವರಿಗಿಂತ ಹೆಚ್ಚು ಹುರುಪಿನಿಂದ ಪ್ರಚಾರಕಾರ್ಯ ನಡೆಸಿದರು ಮೀರಾ ಕುಮಾರ್‌. ಕೋವಿಂದ್‌ ಅವರು ತಾವು ಪಕ್ಷಾತೀತ ಅಭ್ಯರ್ಥಿಯೆಂದು ಹೇಳಿಕೊಂಡರೆ, ಮೀರಾಕುಮಾರ್‌ ತಮ್ಮ ಅಭ್ಯರ್ಥಿತನವನ್ನು ಪ್ರತಿಪಾದಿಸಿಕೊಳ್ಳಲು ರಾಜಕೀಯ ಭಾಷೆಯನ್ನೇ ನೆಚ್ಚಿಕೊಂಡರು. ಈ ಚುನಾವಣೆಯನ್ನು “ದಲಿತ ವರ್ಸಸ್‌ ದಲಿತ’ ಎಂದು ಬಣ್ಣಿಸಲಾಗುತ್ತಿದೆಯೆಂಬ ಬೇಸರವನ್ನೂ ಅವರು ವ್ಯಕ್ತಪಡಿಸಿದರು. 

Advertisement

ಇನ್ನೊಂದು ರಾಷ್ಟ್ರಪತಿ ಹುದ್ದೆಯ ಚುನಾವಣೆಯೂ ಮುಗಿಯಿತು. ಇದರ ಫ‌ಲಿತಾಂಶ ಹೆಚ್ಚು ಕಡಿಮೆ ಎಲ್ಲರೂ ಊಹಿಸಿದಂತೆಯೇ ಇರುವುದೇನೋ. ಇದುವರೆಗೆ ನಡೆದಿರುವ ರಾಷ್ಟ್ರಪತಿ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಹೇಳುವುದಾದರೆ ಆಡಳಿತಾರೂಢ ಎನ್‌ಡಿಎಯ ಅಭ್ಯರ್ಥಿ ರಾಮನಾಥ್‌ ಕೋವಿಂದ್‌ ವಿಜಯ ಪತಾಕೆಯನ್ನು ಹಾರಿಸಲಿದ್ದಾರೆ.

ಹಿಂದಿನ ರಾಷ್ಟ್ರಪತಿ ಚುನಾವಣೆಗಳ ಮೇಲೊಮ್ಮೆ ಕಣ್ಣು ಹಾಯಿಸಿದರೆ, ಎರಡು ಚುನಾವಣೆಗಳನ್ನು ಹೊರತುಪಡಿಸಿದರೆ ಬಹುತೇಕ ಎಲ್ಲ ಚುನಾವಣೆಗಳೂ ನಿರಾಶೆ ಹುಟ್ಟಿಸುವಷ್ಟು “ಅರೋಚಕ’ ಅಥವಾ “ಅವಿಶಿಷ್ಟ’ವೆನಿಸುವ ಘಟನೆಗಳೇ ಅಗಿದ್ದವೆನ್ನಬಹುದು. ಈ ಬಾರಿಯ ರಾಷ್ಟ್ರಪತಿ ಚುನಾವಣೆ ಇಂಥದೇ ಅಮುಖ್ಯವೆಂಬಂಥ ಘಟನೆಯೆನಿಸೀತೇ ಇಲ್ಲವೇ ಎಂಬುದನ್ನು ನೋಡಲು ಫ‌ಲಿತಾಂಶ ಪ್ರಕಟನೆಯ ದಿನವಾದ ಜು.20ರವರೆಗೆ ಕಾಯಬೇಕಾಗಿದೆ. ಯಾರಿಗೆ ಗೊತ್ತು, ನಮ್ಮ ಕೆಲ ಸಂಸದರು ಹಾಗೂ ಶಾಸಕರು ಮತದಾನದ ದಿನವಾದ ಜು.17ರಂದು ತಮ್ಮ ಆತ್ಮಸಾಕ್ಷಿಗನುಗುಣವಾಗಿ ಮತ ಚಲಾಯಿಸಿದ್ದಿರಲೂಬಹುದು. ವಿಪಕ್ಷೀಯರ ಅಭ್ಯರ್ಥಿ ಮೀರಾ ಕುಮಾರ್‌ ಅವರು ಮತದಾರ ಸಮುದಾಯಕ್ಕೆ ಇಂಥ ಮನವಿಯನ್ನೇ ಮಾಡಿಕೊಂಡಿದ್ದರು. ಆತ್ಮಸಾಕ್ಷಿಯ ಮತ ಚಲಾವಣೆ- ಎಂಬ ಮಾತು ಬಂದಾಗ 1969ರ ಜುಲೈ- ಆಗಸ್ಟ್‌ನಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ವಿ.ವಿ.ಗಿರಿ ಅವರಿಗೆ “ಆತ್ಮಸಾಕ್ಷಿ’ಯ ಮತವನ್ನು ಹಾಕುವಂತೆ ಮನವಿ ಮಾಡಿಕೊಂಡಿದ್ದುದು ನೆನಪಾಗುತ್ತದೆ. ವಿ.ವಿ.ಗಿರಿಯವರ ವಿರುದ್ಧ ನಿಂತಿದ್ದವರು ನೀಲಂ ಸಂಜೀವ ರೆಡ್ಡಿ.

ಇಂದಿನ ವಿರೋಧ ಪಕ್ಷಗಳ ಅಭ್ಯರ್ಥಿ ಮೀರಾ ಅವರಿಗೆ ಒಂದು ಸಂಗತಿ ಬಹುಶಃ ಮರೆತು ಹೋಗಿದೆ. 1969ರಲ್ಲಿ ಇಂದಿರಾಗಾಂಧಿ ಮೊದಲಿಗೆ ಪ್ರಸ್ತಾವಿಸಿದ್ದ ಹೆಸರು, ಮೀರಾಕುಮಾರ್‌ ಅವರ ತಂದೆ ಬಾಬೂ ಜಗಜ್ಜೀವನರಾಮ್‌. ಆದರೆ ಆಗ ಉಪರಾಷ್ಟ್ರಪತಿಯಾಗಿದ್ದ ವಿ.ವಿ. ಗಿರಿ ಇದಕ್ಕೆ ಪ್ರತಿಭಟನೆ ವ್ಯಕ್ತಪಡಿಸಿದರು. ಪಕ್ಷವು ಉಪರಾಷ್ಟ್ರಪತಿಯನ್ನೇ ರಾಷ್ಟ್ರಪತಿಯನ್ನಾಗಿ ಆಯುವ ಪರಂಪರೆಯನ್ನು ಮುಂದುವರಿಸಬೇಕೆಂದು ವಿ.ವಿ.ಗಿರಿಯವರ ವಾದವಾಗಿತ್ತು. ಈ ಹಿಂದೆ 1962ರಲ್ಲಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಹಾಗೂ 1967ರಲ್ಲಿ ಡಾ| ಜಕೀರ್‌ ಹುಸೇನ್‌ ಇವರುಗಳ ಆಯ್ಕೆ ಹೀಗೆಯೇ ಆಗಿತ್ತು. ಗಿರಿಯವರ ಈ ವಾದದ ದೆಸೆಯಿಂದ ಸಂಜೀವ ರೆಡ್ಡಿಯವರೆದುರು ನಿಂತಿದ್ದ ಗಿರಿಯವರನ್ನು ಬೆಂಬಲಿಸದೆ ಇಂದಿರಾ ಗಾಂಧಿಗೆ ಬೇರೆ ಮಾರ್ಗವೇ ಇಲ್ಲ ಎಂಬಂತಾಯಿತು. ಸ್ವಾರಸ್ಯವೆಂದರೆ ಆ ಬಾರಿಯ ಚುನಾವಣೆಯಲ್ಲಿ ಗಿರಿ ಹಾಗೂ ರೆಡ್ಡಿ ಇಬ್ಬರೂ ಪಕ್ಷೇತರರಾಗಿ ಸ್ಪರ್ಧಿಸಿದ್ದರು.

ದಲಿತ v/s ದಲಿತ ಚುನಾವಣೆ
ಈ ಬಾರಿಯ ಚುನಾವಣೆಯಲ್ಲಿ ರಾಮನಾಥ್‌ ಕೋವಿಂದ್‌ ಅವರಿಗಿಂತ ಹೆಚ್ಚು ಹುರುಪು ಹುಮ್ಮಸ್ಸುಗಳಿಂದ ಪ್ರಚಾರಕಾರ್ಯ ನಡೆಸಿದವರು ಮೀರಾಕುಮಾರ್‌. ಕೋವಿಂದ್‌ ಅವರು ತಾನು ಪಕ್ಷಾತೀತ ಅಭ್ಯರ್ಥಿಯೆಂದು ಹೇಳಿಕೊಂಡರೆ, ಮೀರಾಕುಮಾರ್‌ ಅವರು ತಮ್ಮ ಅಭ್ಯರ್ಥಿತನವನ್ನು ಪ್ರತಿಪಾದಿಸಿಕೊಳ್ಳಲು ರಾಜಕೀಯ ಭಾಷೆಯನ್ನೇ ನೆಚ್ಚಿಕೊಂಡರು. ಈ ಚುನಾವಣೆಯನ್ನು “ದಲಿತ ವರ್ಸಸ್‌ ದಲಿತ’ ಎಂದು ಬಣ್ಣಿಸಲಾಗುತ್ತಿದೆಯೆಂಬ ಬೇಸರವನ್ನೂ ಅವರು ವ್ಯಕ್ತಪಡಿಸಿದರು. ಈ ಹಿಂದೆ ನಡೆದಿರುವ ರಾಷ್ಟ್ರಪತಿ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಜಾತಿಯ ಉಲ್ಲೇಖ ಕೇಳಿಬಂದಿರಲಿಲ್ಲ. ಕೇವಲ ಅಭ್ಯರ್ಥಿಗಳ ಸಾಮರ್ಥ್ಯ, ಯೋಗ್ಯತೆ ಹಾಗೂ ಸಾಧನೆಗಳಿಗಷ್ಟೇ ಒತ್ತು ನೀಡಲಾಗುತ್ತಿತ್ತು. ಈ ಚುನಾವಣೆ ಇಬ್ಬರು ವ್ಯಕ್ತಿಗಳ ಮಧ್ಯೆ ಅಲ್ಲ, ಎರಡು ಸಿದ್ಧಾಂತಗಳ ನಡುವಿನ ಹೋರಾಟ- ಇದು ಮೀರಾ ಕುಮಾರ್‌ ಒತ್ತಿ ಹೇಳಿದ ಮಾತು. ಬಹುತೇಕ ರಾಜಕಾರಣಿಯಂತೆಯೇ ಮಾತನಾಡುತ್ತ ಹೋದ ಮೀರಾಕುಮಾರ್‌, ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಚೆನ್ನಾಗಿಯೇ ಟೀಕಿಸಿದರು; ಸರಕಾರ ದೇಶದಲ್ಲಿ ಕೋಮುವಾದ ಹಾಗೂ ಜಾತಿವಾದಗಳನ್ನು ಬೆಳೆಸುತ್ತಿದೆ ಎಂದು ದೂರಿದರು. ಕಾಂಗ್ರೆಸ್‌ ಪಕ್ಷ ತನ್ನನ್ನು ಈ ಹುದ್ದೆಯ ಅಭ್ಯರ್ಥಿಯನ್ನಾಗಿಸಿದ್ದು ಎಲ್ಲಕ್ಕಿಂತ ಮುಖ್ಯವಾಗಿ ಜಾತಿಯ ಕಾರಣದಿಂದಲೇ ಹೊರತು ಅರ್ಹತೆಯ ಆಧಾರದಿಂದ ಅಲ್ಲ ಎಂಬ ಸತ್ಯವನ್ನು ಮರೆಮಾಚುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ.

Advertisement

ರಾಮನಾಥ್‌ ಕೋವಿಂದ್‌ ಅವರ ಅತ್ಯುತ್ತಮ ಪ್ರಚಾರ ಭಾಷಣವೆಂದರೆ ಅವರು ಆಂಧ್ರದಲ್ಲಿ ಶಾಸಕರನ್ನುದ್ದೇಶಿಸಿ ಮಾಡಿದ ಭಾಷಣ. ಬಿಹಾರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ತಾನು ಪಕ್ಷಾತೀತನಾಗಿ ಕರ್ತವ್ಯ ನಿರ್ವಹಿಸಿದೆ ಎಂದು ಸ್ಪಷ್ಟಪಡಿಸಿದ ಈ ಸುಪ್ರೀಂ ಕೋರ್ಟಿನ ಹಿಂದಿನ ವಕೀಲ, ಒಂದು ವೇಳೆ ತಾನು ಈ ಹುದ್ದೆಗೆ ಆಯ್ಕೆಯಾದರೆ, ಓರ್ವ ನೈಜ “ಸಂವಿಧಾನವಾದಿ’ ರಾಷ್ಟ್ರಪತಿಯಾಗಿ ನಡೆದುಕೊಳ್ಳುವೆ ಎಂದರು. “ನನ್ನ ಪಾಲಿಗೆ ಸಂವಿಧಾನವೇ ಭಗವದ್ಗೀತೆ, ರಾಮಾಯಣ, ಕುರಾನ್‌ ಮತ್ತು ಬೈಬಲ್‌; ರಾಷ್ಟ್ರಪತಿಯೊಬ್ಬರಿಗೆ ಇದೇ ಮಾರ್ಗದರ್ಶಿ ಪಥ’ ಎಂದು ಅವರು ಈ ಭಾಷಣದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಭಾರತೀಯ ಸಂವಿಧಾನದ ಸರ್ವೋನ್ನತಿಕೆಯಲ್ಲಿ ತನಗೆ ನಂಬಿಕೆಯಿದೆ; ರಾಷ್ಟ್ರಪತಿ ಹುದ್ದೆಯನ್ನು ಪಕ್ಷಪಾತದ ರಾಜಕೀಯಕ್ಕಿಂತ ಮೇಲಿನ ಸ್ತರದಲ್ಲಿ ನಿಲ್ಲಿಸುವೆ ಎಂದರು. ಈ ಹಿಂದೆ ಆಗಿ ಹೋಗಿರುವ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದ್‌, ಎಸ್‌. ರಾಧಾಕೃಷ್ಣನ್‌, ಜಾಕೀರ್‌ ಹುಸೇನ್‌, ಸಂಜೀವ ರೆಡ್ಡಿ ಹಾಗೂ ಅಬ್ದುಲ್‌ ಕಲಾಂ ಅವರನ್ನೂ ಈ ಭಾಷಣದಲ್ಲಿ ನೆನಸಿಕೊಂಡರು. ಅವರ ಈ ಲಿಖೀತ ಭಾಷಣದಲ್ಲಿ ಮಾಜಿ ರಾಷ್ಟ್ರಪತಿ ಕೆ. ಆರ್‌. ನಾರಾಯಣನ್‌ ಅವರ ಹೆಸರು ಉಲ್ಲೇಖಗೊಳ್ಳಲಿಲ್ಲ.

ಇದುವರೆಗೆ ನಡೆದಿರುವ ರಾಷ್ಟ್ರಪತಿ ಚುನಾವಣೆಗಳ ಪೈಕಿ ತೀವ್ರ ಸ್ಪರ್ಧೆ ಕಂಡುಬಂದಿದ್ದುದು ಎರಡೇ ಎರಡು ಚುನಾವಣೆಗಳಲ್ಲಿ- 1967 ಹಾಗೂ 1969. 1967ರಲ್ಲಿ ಮಾರ್ಚ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಡಾ| ಜಾಕೀರ್‌ ಹುಸೇನ್‌ ಅವರು, ಆಗಷ್ಟೇ ಭಾರತದ ಶ್ರೇಷ್ಠ ನ್ಯಾಯಾಧೀಶ ಹುದ್ದೆಯಿಂದ ಕೆಳಗಿಳಿದು ರಾಷ್ಟ್ರಪತಿ ಚುನಾವಣೆಗೆ ನಿಂತಿದ್ದ ನ್ಯಾ| ಕೋಕಾ ಸುಬ್ಬರಾವ್‌ ಅವರನ್ನು ಸೋಲಿಸಿದ್ದರು. ನ್ಯಾ| ರಾವ್‌ ಅವರು ವಿರೋಧ ಪಕ್ಷಗಳ, ಅದರಲ್ಲೂ ಮುಖ್ಯವಾಗಿ ಸ್ವತಂತ್ರಪಾರ್ಟಿ ಹಾಗೂ ಜನಸಂಘದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅವರಿಗೆ ಗಣನೀಯ ಪ್ರಮಾಣ ಮತಗಳು ಕೂಡ ಸಿಕ್ಕಿದ್ದವು. 1967ರವರೆಗೂ ನಮ್ಮ ಎಲ್ಲ ರಾಷ್ಟ್ರಪತಿ ಚುನಾವಣೆಗಳೂ ಏಕಮುಖ ಪ್ರಕ್ರಿಯೆಗಳಾಗಿದ್ದವು. ಭಾರತದ ಶ್ರೇಷ್ಠ ನ್ಯಾಯಾಧೀಶ ಹುದ್ದೆಯಲ್ಲಿದ್ದುಕೊಂಡೇ ವಿರೋಧ ಪಕ್ಷಗಳ ನಾಯಕರ ಜತೆ ಅವರು ಮಾತುಕತೆ ನಡೆಸಿದ್ದು, ತೀವ್ರ ಟೀಕೆಗೆ ಗುರಿಯಾಯಿತು. ಕೋಕಾ ಸುಬ್ಟಾರಾವ್‌ ಅವರ ಅಂದಿನ ಈ ನಡೆಯ ಬಗ್ಗೆ ಬೆಂಗಳೂರಿನ ಅಡ್ವಕೇಟ್‌ ಹಾಗೂ ಲೇಖಕ ವಿ. ಸುಧೀಶ್‌ ಪೈ ಹೀಗೆ ಬರೆದಿದ್ದಾರೆ- “”ಇದು ಮಾನವ ಸ್ವಭಾವದ ದೌರ್ಬಲ್ಯವನ್ನು ತೋರಿಸುವ ನಡವಳಿಕೆಯಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಟೀಕೆಗಳು ಕೇಳಿ ಬಂದಿದ್ದರೆ, ಅದು ನ್ಯಾಯವಾದ ವಿರೋಧವೇ ಆಗಿತ್ತು. ಸ್ಥಾಪಿತ ಪರಂಪರೆಗೆ ಹಾನಿ ತಂದೊಡ್ಡುವಂಥ ಗಂಭೀರ ಪ್ರಮಾಣ ಇದಾಗಿತ್ತು”. ಆದರೆ ನ್ಯಾ| ಸುಬ್ಟಾರಾವ್‌ 50 ವರ್ಷಗಳಷ್ಟು ಹಿಂದೆಯೇ ತೆಗೆದುಕೊಂಡ ನಿರ್ಧಾರ, ಭಾರತೀಯ ಸಂವಿಧಾನದಲ್ಲಿ ಉಲ್ಲೇಖೀತವಾಗಿರುವ ಮೂಲಭೂತ ಹಕ್ಕುಗಳ ಉನ್ನತಿಕೆಯನ್ನು ಕುರಿತಂತೆ ಅವರಲ್ಲಿದ್ದ ಅಚಲ ನಂಬಿಕೆಯ ಬುನಾದಿಯಿಂದ ಉದ್ಭವಿಸಿದ್ದ ನಿಲುವಾಗಿತ್ತು ಎಂಬುದನ್ನು ನಾನಿಲ್ಲಿ ಹೇಳಬಯಸುತ್ತೇನೆ. ಕೋರ್ಟುಗಳ ಕೆಲವು ಅಸಮರ್ಪಕ ಹಾಗೂ ದುರುದ್ದೇಶಪೂರಿತ ತೀರ್ಪುಗಳಿಂದಾಗಿ ನಮ್ಮ ಮೂಲಭೂತ ಹಕ್ಕುಗಳ ನೈತಿಕ ಮೌಲ್ಯ ಕುಸಿಯಲಾರಂಭಿಸಿದೆಯೆಂಬ ಭಾವನೆ ಅವರಲ್ಲಿ ಮೂಡತೊಡಗಿತ್ತು. ಕಾಂಗ್ರೆಸ್‌ನೊಳಗಡೆಯ ಹೆಚ್ಚಿನವರು ಹಾಗೂ ವಿರೋಧ ಪಕ್ಷಗಳ ಕೆಲ ಸದಸ್ಯರು ಕೂಡ, ಮೂಲಭೂತ ಹಕ್ಕುಗಳ ಮೇಲೆ ವಿಶ್ವಾಸವಿಡುವ ಬದಲಿಗೆ ಸರಕಾರಿ ನೀತಿ ಪ್ರಣೀತ ಮಾರ್ಗದರ್ಶಿ ಸೂತ್ರಗಳ ಮೇಲೆಯೇ ವಿಶ್ವಾಸವಿರಿಸುತ್ತಿದ್ದ ದಿನಗಳಾಗಿದ್ದವು ಅವು! ಮೂಲಭೂತ ಹಕ್ಕುಗಳು ಅನುಲ್ಲಂಘನೀಯವಾಗಿರಬೇಕು (ಅವುಗಳನ್ನು ತಿದ್ದುಪಡಿ ಮಾಡಕೂಡದು) ಎಂಬ ನ್ಯಾ| ಸುಬ್ಟಾರಾವ್‌ ಅವರ ನಿಲುವು ಅವರು ಸೇವಾವಧಿಯ ಕೊನೆಯಲ್ಲಿ ನೀಡಿದ್ದ ತೀರ್ಪೊಂದರಲ್ಲಿ ಸ್ಪಷ್ಟವಾಗಿ ಪ್ರಕಟವಾಗಿತ್ತು (ಸಾಂವಿಧಾನಿಕ ಕಾನೂನಿಗೆ ಸಂಬಂಧಿಸಿದ ಗೋಲಕ್‌ನಾಥ್‌- ಪಂಜಾಬ್‌ ಸರಕಾರದ ನಡುವಿನ ಪ್ರಕರಣ). 1969ರಲ್ಲಿ ವಿ.ವಿ. ಗಿರಿಯವರು ಸಂಜೀವ ರೆಡ್ಡಿಯವರನ್ನು 88 ಸಾವಿರ ಮತಗಳಷ್ಟು ಕಡಿಮೆ ಅಂತರದಿಂದ ಸೋಲಿಸಿದ್ದರು. ಈ ಚುನಾವಣೆ ಉಳಿದೆಲ್ಲವುಗಳಿಗಿಂತ ತೀವ್ರ ಸಮರೋತ್ಸಾಹದ ಸ್ಪರ್ಧೆಯಾಗಿತ್ತು. ರೆಡ್ಡಿಯವರು ಮತ್ತೆ ರಾಷ್ಟ್ರಪತಿಯಾಗಿ ಆಯ್ಕೆಯಾಗಬೇಕಾದರೆ ಇನ್ನೂ ಎಂಟು ವರ್ಷಗಳ ಕಾಲ ಕಾಯಬೇಕಾಯಿತು. ಈ ಇಬ್ಬರು ಅಭ್ಯರ್ಥಿಗಳ ಪೈಕಿ ಗಿರಿಯವರೇ ಉತ್ತಮ ಅಭ್ಯರ್ಥಿಯಾಗಿದ್ದರೆನ್ನಬಹುದು. ವಯಸ್ಸು ಹಾಗೂ ರಾಜಕೀಯದ ಅನುಭವದಲ್ಲಿ ರೆಡ್ಡಿಯವರಿಗಿಂತ ಅವರು ಹಿರಿಯರೇ ಆಗಿದ್ದರು. 1937ರಷ್ಟು ಹಿಂದೆಯೇ ಗಿರಿ ಅವರು ಅವಿಭಜಿತ ಮದ್ರಾಸ್‌ ಪ್ರಾಂತ್ಯದಲ್ಲಿ, ರಾಜಾಜಿಯವರ ನೇತೃತ್ವದ ಕಾಂಗ್ರೆಸ್‌ ಸರಕಾರದಲ್ಲಿ ಕಾರ್ಮಿಕ ಖಾತೆಯ ಹಾಗೂ ಕೈಗಾರಿಕಾ ಖಾತೆಯ ಮಂತ್ರಿಯಾಗಿದ್ದವರು; ಕಾರ್ಮಿಕ ಸಂಘಟನೆಯ ನಾಯಕನೆಂದು ಹೆಸರು ಮಾಡಿದ್ದವರು. ಇವರಿಬ್ಬರಲ್ಲದೆ ಈ ಐತಿಹಾಸಿಕ ಚುನಾವಣೆಯಲ್ಲಿ ರಾಷ್ಟ್ರಪತಿ ಹುದ್ದೆಗೆ ಎಲ್ಲ ರೀತಿಯಲ್ಲೂ ಸಮರ್ಥರಾಗಿದ್ದ ಇನ್ನೊಬ್ಬ ಪಕ್ಷೇತರ ಅಭ್ಯರ್ಥಿಯಿದ್ದರು. ಅವರೇ ಕೇಂದ್ರದ ಮಾಜಿ ವಿತ್ತ ಸಚಿವ ಸಿ.ಡಿ. ದೇಶಮುಖ್‌. ಫ‌ಲಿತಾಂಶ ಹೊರಬಿದ್ದಾಗ ಅವರು ಮೂರನೆಯ ಸ್ಥಾನಕ್ಕೇ ತೃಪ್ತಿಪಡಬೇಕಾಯಿತು. 

ದೇಶದಲ್ಲಿ ಇದುವರೆಗೆ ನಡೆದಿರುವ ರಾಷ್ಟ್ರಪತಿ ಚುನಾವಣೆಗಳಲ್ಲಿ ದೇಶ್‌ಮುಖ್‌ ಅವರಷ್ಟೇ ಅಲ್ಲ, ಇನ್ನೂ ಕೆಲ ಯೋಗ್ಯ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಕಾರಣ, ಅವರು “ಇರಬೇಕಿದ್ದ ಕಡೆ’ ಇರದಿದ್ದುದೇ. 1952ರಲ್ಲಿ ಡಾ| ರಾಜೇಂದ್ರ ಪ್ರಸಾದ್‌ ಅವರು ಸುಲಭದಲ್ಲಿ ಜಯ ಸಾಧಿಸಿದರಾದರೂ ಅವರೆದುರು ಸ್ಪರ್ಧಿಸಿದ್ದವರು ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಸಾಂವಿಧಾನಿಕ ಶಾಸನ ಸಭೆಯ ಸದಸ್ಯ ಪ್ರೊ| ಕೆ. ಟಿ. ಶಾ ಅವರು. ಅವರಿಗೆ ಮೈಸೂರಿನ ಸಂಪರ್ಕವೂ ಇತ್ತು- ಮೈಸೂರು ವಿ.ವಿ.ಯ ಆರಂಭಿಕ ದಿನಗಳಲ್ಲಿ ಇಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ರಾಜೇಂದ್ರ ಪ್ರಸಾದ್‌ 5.07 ಲಕ್ಷ ಮತಗಳು ಲಭಿಸಿದ್ದರೆ. ಪ್ರೊ| ಶಾ 93 ಸಾವಿರ ಮತಗಳನ್ನು ಗಳಿಸಿದ್ದರು. 1978ರ ಚುನಾವಣೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಪೂರ್ವನ್ಯಾಯಾಧೀಶ ಹಾಗೂ ಪ್ರಖ್ಯಾತ ನ್ಯಾಯಮೂರ್ತಿ ವಿ.ಆರ್‌. ಕೃಷ್ಣ ಅಯ್ಯರ್‌ ಅವರು ಆರ್‌. ವೆಂಕಟರಾಮನ್‌ ಅವರೆದುರು ಸೋಲು ಕಂಡರು. ಈ ವರ್ಷದ ಚುನಾವಣೆಗೆ “ದಲಿತ ವರ್ಸಸ್‌ ದಲಿತ’ ಚುನಾವಣೆ ಎಂಬ ಹೆಸರು ಬಂದಿದೆಯಾದರೆ, 1987ರ ಚುನಾವಣೆಯನ್ನು “ಮದ್ರಾಸ್‌ ಅಯ್ಯರ್‌ ವರ್ಸಸ್‌ ಪಾಲಾ^ಟ್‌ ಅಯ್ಯರ್‌’ ಸ್ಪರ್ಧೆ ಎಂದು ಕರೆಯಬಹುದೇನೋ. 1987ರ ಚುನಾವಣೆಯಲ್ಲಿ ಕೆ.ಆರ್‌. ನಾರಾಯಣನ್‌ ಅವರು ಇನ್ನೊಬ್ಬ “ಪಾಲಾ^ಟ್‌ ಅಯ್ಯರ್‌’ ಎನ್ನಬಹುದಾದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್‌. ಶೇಷನ್‌ ಅವರನ್ನು ಸೋಲಿಸಿದರು. ಹತ್ತು ವರ್ಷಗಳ ಬಳಿಕ ಪ್ರತಿಭಾ ಪಾಟೀಲ್‌ ಅವರು ಬಿಜೆಪಿಯ ಉನ್ನತ ನಾಯಕ ಭೈರೋಸಿಂಗ್‌ ಶೇಖಾವತ್‌ ಅವರನ್ನು ಸೋಲಿಸಿ ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷೆಯಾಗಿ ಗೆದ್ದು ಬಂದರು. ಸುಪ್ರಸಿದ್ಧ ನ್ಯಾಯವಾದಿ ರಾಂ ಜೇಠ್ಮಲಾನಿ ಅವರು 1992ರ ಚುನಾವಣೆಯಲ್ಲಿ ಮೂರನೆಯ ಸ್ಥಾನ ಪಡೆದರು; ಆ ಚುನಾವಣೆಯಲ್ಲಿ ಡಾ| ಶಂಕರ್‌ದಯಾಳ್‌ ಶರ್ಮಾ ಅವರು ಪ್ರೊ| ಜಿ. ಜಿ. ಸ್ವೆಲ್‌ ಅವರನ್ನು ಪರಾಭವಗೊಳಿಸಿದರು. ಜೇಠ್ಮಲಾನಿಯವರು ಗೆದ್ದಿದ್ದರೆ “ಮಾರ್ಮಲೆತು ನಿಲ್ಲುವ ರಾಷ್ಟ್ರಪತಿ’ಯೆನಿಸಿಕೊಂಡು ಅನೇಕರಲ್ಲಿ ರೇಜಿಗೆ ಹುಟ್ಟಿಸುತ್ತಿದ್ದರೋ ಏನೋ! 

ಏನೇ ಇರಲಿ, ಮೀರಾ ಕುಮಾರ್‌ ಅವರು ಹೇಳಿದ್ದೇನಿದೆ, ಅದು ನಿಜ. ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯೊಬ್ಬರನ್ನು ಆತನ ಅಥವಾ ಆಕೆಯ ಜಾತಿ ಅಥವಾ ಸಮುದಾಯದ ಆಧಾರದಲ್ಲಿ ಆಯ್ಕೆ ಮಾಡುವುದು ತಪ್ಪು. ಆದರೆ ನಮ್ಮ ರಾಜಕೀಯದಲ್ಲಿ “ಎಲ್ಲವೂ ಒಪ್ಪೇ’ ಎನ್ನುವುದು ನಿಜವಲ್ಲವೇ?

ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next