ಗಜೇಂದ್ರಗಡ: ಪಟ್ಟಣದ ಪುರಸಭೆಗೆ ಸರ್ಕಾರ ಮೀಸಲಾತಿ ಪ್ರಕಟಿಸಿದ್ದೇ ತಡ ಕೋಟೆನಾಡಿನಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಗದ್ದುಗೆಗಾಗಿ ಗುದ್ದಾಟ ಶುರುವಾಗಿದೆ.
ರಾಜ್ಯ ಸರ್ಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪಟ್ಟಿ ಬಿಡುಗಡೆಗೊಳಿಸಿದ ಕ್ಷಣದಿಂದ ಆಡಳಿತ ಚುಕ್ಕಾಣಿಗಾಗಿ ಒಳಗೊಳಗೆ ಪೈಪೋಟಿ ಜೋರಾಗಿದೆ. ಕಳೆದ ಎರಡು ಅವಧಿಯಲ್ಲಿ ಗಜೇಂದ್ರಗಡ ಪುರಸಭೆ ಅಧ್ಯಕ್ಷ ಸ್ಥಾನದಿಂದ ಪುರುಷರಿಗೆ ಅವಕಾಶಗಳು ಕೈತಪ್ಪಿ ಹೋಗಿದ್ದವು. ಆದರೆ ಈ ಬಾರಿ ಅಧ್ಯಕ್ಷ ಸ್ಥಾನ ಎಸ್ಸಿ ಮೀಸಲಾತಿ ಬಂದ ಹಿನ್ನೆಲೆಯಲ್ಲಿ ಪುರುಷರಲ್ಲಿ ತೀವ್ರತರ ಪೈಪೋಟಿ ಆರಂಭವಾಗಿದೆ.
ಪುರಸಭೆಯಲ್ಲಿ 23 ಸ್ಥಾನಗಳಿದ್ದು, ಅಧಿಕಾರ ಗದ್ದುಗೆ ಏರಲು 12 ಸ್ಥಾನ ಬೇಕು. 18 ಸ್ಥಾನ ಹೊಂದಿರುವ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಇದರಲ್ಲಿ ಅಧ್ಯಕ್ಷ ಸ್ಥಾನದ ಎಸ್ಸಿ ಮೀಸಲಿನ 7 ಜನ ಸದಸ್ಯರಿದ್ದಾರೆ. ಇನ್ನು ಉಪಾಧ್ಯಕ್ಷ ಸ್ಥಾನದ ಹಿಂದುಳಿದ ವರ್ಗ ಎ ಮಹಿಳೆ ಮೀಸಲಿನ 5 ಜನ ಸದಸ್ಯೆಯರಿದ್ದಾರೆ. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕಾಗಿ ಸದಸ್ಯರು ಒಳಗೊಳಗೆ ಪಕ್ಷದ ವರಿಷ್ಠರ ದುಂಬಾಲು ಬೀಳಲಾರಂಭಿಸಿದ್ದಾರೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.
ತೀವ್ರ ಪೈಪೋಟಿ: ಅಧ್ಯಕ್ಷ ಸ್ಥಾನಕ್ಕಾಗಿ 10ನೇ ವಾರ್ಡಿನ ರೂಪೇಶ ರಾಠೊಡ, 12ನೇ ವಾರ್ಡಿನ ಕನಕಪ್ಪ ಅರಳಿಗಿಡದ, 16ನೇ ವಾರ್ಡಿನ ಲಲಿತಾ ಸವಣೂರ ಹಾಗೂ 18ನೇ ವಾರ್ಡಿನ ಮುದಿಯಪ್ಪ ಮುಧೋಳ ಮಧ್ಯೆ ತೀವ್ರ ಪೈಪೋಟಿ ಶುರುವಾಗಿದೆ. ಇತ್ತ 22ನೇ ವಾರ್ಡಿನ ಲಕ್ಷ್ಮೀ ಮುಧೋಳ, 17ನೇ ವಾರ್ಡಿನ ಮೂಕಪ್ಪ ನಿಡಗುಂದಿ, 6ನೇ ವಾರ್ಡಿನ ಯು.ಆರ್. ಚನ್ನಮ್ಮನವರ ರೇಸ್‌ನಲ್ಲಿದ್ದಾರೆ. ಇನ್ನುಳಿದ ಉಪಾಧ್ಯಕ್ಷ ಸ್ಥಾನಕ್ಕೆ 14ನೇ ವಾರ್ಡಿನ ಉಮಾ ಮ್ಯಾಕಲ್, 9ನೇ ವಾರ್ಡಿನ ಕೌಸರಬಾಹುಹುನಗುಂದ ಮುಂಚೂಣಿಯಲ್ಲಿದ್ದಾರೆ.
5ನೇ ವಾರ್ಡಿನ ವಿಜಯಾ ಮಳಗಿ, 4ನೇ ವಾರ್ಡಿನ ಸುಜಾತಾಬಾಯಿ ಶಿಂಗ್ರಿ, 7ನೇ ವಾರ್ಡಿನ ಲೀಲಾವತಿ ವನ್ನಾಲ ಸಹ ಕಸರತ್ತು ನಡೆಸಿದ್ದಾರೆ. 5 ಸದಸ್ಯರನ್ನು ಹೊಂದಿದ ಕಾಂಗ್ರೆಸ್ ಬಿಜೆಪಿಯ ರಾಜಕೀಯ ಬೆಳವಣಿಗೆಗಳಿಗೆ ತುಪ್ಪ ಸವರಲು ಒಳಗೊಳಗೆ ಸರ್ಕಸ್ ನಡೆಸುತ್ತಿದೆ. ಅ ಧಿಕಾರ ಹಿಡಿಯಲು ಬೇಕಾಗುವ ಸಂಖ್ಯಾಬಲ ಇಲ್ಲದಿದ್ದರೂ ಬಿಜೆಪಿ ಆಂತರಿಕ ನಡೆ ಮೇಲೆ ನಿಗಾವಹಿಸಿದೆ. ಮೇಲ್ನೋಟಕ್ಕೆ ಕೆಲ ಕಾಂಗ್ರೆಸ್ ಮುಖಂಡರು ನಮಗೆ ಅಧಿಕಾರಕ್ಕಿಂತ ಪಟ್ಟಣದ ಅಭಿವೃದ್ಧಿ ಮುಖ್ಯ. ಈ ನಿಟ್ಟಿನಲ್ಲಿಕಾಂಗ್ರೆಸ್ ವಿರೋಧ ಪಕ್ಷವಾಗಿ ಪುರಸಭೆಯಲ್ಲಿ ಜವಾಬ್ದಾರಿ ನಿರ್ವಹಿಸಲಿದೆ ಎಂದು ಕೇಳಿಬರುತ್ತಿದ್ದರೂ ಒಳಗೊಳಗೆ ಬಿಜೆಪಿ ಮೇಲೆ ಕಣಿಟ್ಟಿದೆ.
ಅಧ್ಯಕ್ಷ ಸ್ಥಾನ ಯಾರ ಪಾಲಿಗೆ? : ಹಿಂದಿನ ಎರಡು ಅವಧಿ ಯಲ್ಲಿ ಪುರಸಭೆ ಅಧ್ಯಕ್ಷ ಗಾದಿಯನ್ನು ಮಹಿಳೆಯರೇ ಅಲಂಕರಿಸಿದ್ದರು. ಕಳೆದ ಅವಧಿಯಲ್ಲಿ ಸಾಮಾನ್ಯ ಮಹಿಳೆ, ನಂತರ ಹಿಂದುಳಿದ ವರ್ಗ ಎ ಮಹಿಳೆಯರು ಪಟ್ಟಣದಲ್ಲಿ ಆಳ್ವಿಕೆ ನಡೆಸಿದ್ದರು. ಆದರೆ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮೀಸಲಾತಿಯುಳ್ಳ ಪುರುಷ ಮತ್ತು ಮಹಿಳೆಯಾದರೂ ಸ್ಪ ರ್ಧಿಸಲು ಅವಕಾಶ ಬಂದೊದಗಿದೆ. ಹೀಗಾಗಿ ಈ ಬಾರಿಯಾದರೂ ಪುರುಷರ ಪಾಲಾಗುತ್ತಾ ಅಧ್ಯಕ್ಷ ಸ್ಥಾನ? ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ವರಿಷ್ಠರ ಭೇಟಿಗೆ ಆಕಾಂಕ್ಷಿಗಳು : ಬಿಜೆಪಿ ಹೈಕಮಾಂಡ್ ಯಾರ ಹೆಸರನ್ನು ಅಧ್ಯಕ್ಷ-ಉಪಾಧ್ಯಕ್ಷ ಗಾದಿಗೆ ಸೂಚಿಸುವರೋ, ಸೇವೆ ಸಲ್ಲಿಸುತ್ತೇವೆ ಎನ್ನುವ ಮಾತುಗಳು ಸಹ ಬಿಜೆಪಿ ವಲಯದಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವೈಯಕ್ತಿಕಬದುಕು- ಬವಣೆಗಿಂತ ಪಕ್ಷದ ಘನತೆ ಮುಖ್ಯ. ಈ ದೆಸೆಯಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ ಎನ್ನುವ ಸದಸ್ಯರಿಗೇನು ಕಡಿಮೆ ಇಲ್ಲ.
-ಡಿ.ಜಿ ಮೋಮಿನ್