ಮುಂಬೈ: ಮಹಾ ರಾಜಕೀಯ ಹಗ್ಗಜಗ್ಗಾಟಕ್ಕೆ ಸಾಕ್ಷಿಯಾಗುತ್ತಿರುವ ಮಹಾರಾಷ್ಟ್ರದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ರಾಷ್ಟ್ರಪತಿ ಅಡಳಿತಕ್ಕೆ ಶಿಫಾರಸು ಮಾಡಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಅಖಾಡ ಮತ್ತೊಂದು ಸುತ್ತಿನ ರಾಜಕೀಯ ಮೇಲಾಟಕ್ಕೆ ಅಣಿಯಾಗಿದೆ.
ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ವರದಿ ಕಳುಹಿಸಿದ್ದಾರೆಂದು ವರದಿಯಾಗಿದೆ.
ಬಿಜೆಪಿ ಮತ್ತು ಶಿವಸೇನೆ ಸರಕಾರ ರಚಿಸಲು ವಿಫಲವಾದ ಹಿನ್ನಲೆಯಲ್ಲಿ ಶರದ್ ಪವಾರ್ ನೇತೃತ್ವದ ಎನ್ ಸಿಪಿಗೆ ಸರಕಾರ ರಚನೆಗೆ ಅವಕಾಶ ನೀಡಲಾಗಿತ್ತು. ಮಂಗಳವಾರ ರಾತ್ರಿ 8.30ರ ಒಳಗೆ ಶಾಸಕರ ಬೆಂಬಲ ಪತ್ರವನ್ನು ನೀಡುವಂತೆ ರಾಜ್ಯಪಾಲರು ಸೂಚಿಸಿದ್ದರು. ಆದರೆ ಗಡುವು ಮುಗಿಯುವ ಮೊದಲೇ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದ್ದಾರೆ.
ಈ ಎಲ್ಲಾ ಘಟನೆಗಳು ಮಹಾರಾಷ್ಟ್ರದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಬೆಳವಣಿಗೆಗೆ ನಾಂದಿ ಹಾಡಿವೆ.
ತಾವೇ ಕೊಟ್ಟ ಗಡುವಿಗೆ ಕಾಯದೆ ರಾಷ್ಟ್ರಪತಿ ಆಡಳಿತಕ್ಕೆ ಸೂಚನೆ ನೀಡಿದ ರಾಜ್ಯಪಾಲರ ವಿರುದ್ದ ಕಾಂಗ್ರೆಸ್ ಮತ್ತು ಶಿವಸೇನೆ ಹರಿಹಾಯ್ದಿವೆ.
ಕಾಂಗ್ರೆಸ್ ನಾಯಕ ಸಂಜಯ್ ಝಾ ಟ್ವೀಟ್ ಮಾಡಿದ್ದು, ರಾಜ್ಯಪಾಲರ ನಿರ್ಧಾರವನ್ನು ಕೋರ್ಟ್ ನಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದ್ದಾರೆ.
ಶಿವಸೇನಾ ನಾಯಕಿ ಪ್ರಿಯಾಂಕ ಚತುರ್ವೇದಿ ಟ್ವೀಟ್ ಮಾಡಿದ್ದು, ಎನ್ ಸಿಪಿಗೆ ಗಡುವು ಕೊಟ್ಟು ರಾಜ್ಯಪಾಲರು ಈಗ ಹೇಗೆ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.