ನವದೆಹಲಿ: ವಿದ್ಯಾರ್ಥಿಗಳಿಗೆ ವಿನೂತನ, ವಿಶಿಷ್ಟ ರೀತಿಯಲ್ಲಿ ಪಾಠ ಬೋಧಿಸುವ ಮೂಲಕ ಸಾಧನೆ ಮಾಡಿದ ಬೆಂಗಳೂರಿನ ದೊಡ್ಡಬನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ನಾಗರಾಜ ಸಿ.ಎಂ. ಸೇರಿದಂತೆ 44 ಮಂದಿ ಶಿಕ್ಷಕರಿಗೆ ಭಾನುವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ “ಪ್ರತಿಯೊಂದು ಮಗುವೂ ವಿಶೇಷ ರೀತಿಯ ಪ್ರತಿಭೆ ಹೊಂದಿರುತ್ತದೆ. ಶಿಕ್ಷಕರು ಅದನ್ನು ಗುರುತಿಸುವಲ್ಲಿ ಹೆಚ್ಚಿನ ಶ್ರಮ ವಹಿಸಬೇಕು’ ಎಂದಿದ್ದಾರೆ.
ಪ್ರತಿಯೊಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಯೂ ಬೇರೆ ಬೇರೆ ರೀತಿಯ ಸಾಮರ್ಥ್ಯ, ಮಾನಸಿಕ ದೃಢತೆ, ಸಾಮಾಜಿಕ ವ್ಯವಸ್ಥೆಗಳ ಹಿನ್ನೆಲೆ ಹೊಂದಿರುತ್ತಾರೆ. ಅದಕ್ಕೆ ಅನುಗುಣವಾಗಿ ಶಿಕ್ಷಕರು ವಿನೂತನವಾಗಿ ಯೋಚಿಸಬೇಕು. ಪಾಠ ಪ್ರವಚನಗಳ ಮೇಲೆ ವಿದ್ಯಾರ್ಥಿಗಳಿಗೆ ಆಸಕ್ತಿ ಬರುವಂತೆ ನೋಡಿಕೊಳ್ಳಬೇಕಾದ್ದು ಶಿಕ್ಷಕರ ಹೊಣೆಗಾರಿಕೆಯಾಗಿದೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ:ದೇಣಿಗೆ ಸಂಗ್ರಹ ಮಾಡುತ್ತಿದ್ದ ಗಣೇಶ ಭಕ್ತರ ವಿರುದ್ಧ ಪ್ರಕರಣ!
ಕೋವಿಡ್ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಆಯೋಜಿಸಲಾಗಿತ್ತು. 1958ರಿಂದ ಶಿಕ್ಷಕರ ಕೊಡುಗೆಯನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ.