ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಸಂಭ್ರಮ ಆರಂಭವಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಿದರು.
ಇದೇ ಮೊದಲ ಬಾರಿಗೆ ದಸರಾ ಉದ್ಘಾಟನೆಗೆ ರಾಷ್ಟ್ರಪತಿ ಆಗಮಿಸಿದ್ದು, ಚಾಮುಂಡಿ ದೇವಿಗೆ ಅಗ್ರ ಪೂಜೆ ಸಲ್ಲಿಸಿದರು. ಈ ಮೂಲಕ 2022ರ ನಾಡಹಬ್ಬಕ್ಕೆ ಚಾಲನೆ ನೀಡಲಾಯಿತು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶೋಭಾ ಕರಾಂದ್ಲಾಜೆ, ಸಚಿವರಾದ ಎಸ್.ಟಿ ಸೋಮಶೇಖರ್, ವಿ.ಸುನೀಲ್ ಕುಮಾರ್ ವೇದಿಕೆಯಲ್ಲಿ ಸಾಥ್ ನೀಡಿದರು.
ಬಿಗಿ ಭದ್ರತೆ: ಕಾರ್ಯಕ್ರಮದ ಅಂಗವಾಗಿ ಚಾಮುಂಡಿಬೆಟ್ಟ ಹಾಗೂ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲೂ ಬಿಗಿ ಪೊಲೀಸ್ ಭದ್ರತೆಗಾಗಿ ನಿಯೋಜಿಸಲಾಗಿದೆ. ಭಾನುವಾರ ರಾತ್ರಿಯಿಂದಲೇ ಪೊಲೀಸರು ಚಾಮುಂಡಿ ಬೆಟ್ಟದಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲದೇ, ಭಾನುವಾರ ಬೆಳಗ್ಗಿನಿಂದಲೇ ಚಾಮುಂಡಿ ಬೆಟ್ಟಕ್ಕೆ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡುವುದರೊಂದಿಗೆ ದಾರಿಯುದ್ದಕ್ಕೂ ಹಾಗೂ ದೇಗುಲದ ಸುತ್ತಲೂ ಲೋಹ ಶೋಧಕ, ಬಾಂಬ್ ಪತ್ತೆದಳು, ಶ್ವಾನ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು
ದೇಗುಲದಲ್ಲಿ ವಿಶೇಷ ಪೂಜೆ: ನವರಾತ್ರಿಯ ಆರಂಭದ ದಿನವಾದ ಇಂದು ಮುಂಜಾನೆ 4.30ರಿಂದಲೇ ಚಾಮುಂಡೇಶ್ವರಿ ದೇವಾಲಯದಲ್ಲಿ ಪ್ರಧಾನ ಆಗಮಿಕ ಡಾ. ಎನ್.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾದವು. ಬೆಳಗಿನಿಂದಲೇ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿ ವಿವಿಧ ಪೂಜಾ ಕಾರ್ಯಗಳು ನಡೆಯುತ್ತವೆ. ಒಂಭತ್ತು ದಿನವೂ ವಿವಿಧ ಪೂಜಾ ಕಾರ್ಯಗಳು ಜರುಗಲಿದ್ದು, ಪ್ರತಿ ದಿನ ಸಂಜೆ 5 ರಿಂದ 6ರವರೆಗೆ ಮಹಾಬಲೇಶ್ವರ ದೇವಾಲಯ ಮುಂಭಾಗ ಇರುವ ದರ್ಬಾರ್ ಮಂಟಪದಲ್ಲಿ ಚಾಮುಂಡೇಶ್ವರಿ ದೇವಿಗೆ ದರ್ಬಾರ್ ಉತ್ಸವ ನೆರವೇರಲಿದೆ.