ಬಾಳೆಹೊನ್ನೂರು: ಗ್ರಾಮೀಣ ಪ್ರದೇಶದ ಕ್ರೀಡೆಗಳನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸಿ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸಿಕೊಡುವ ಕೆಲಸವಾಗಬೇಕು ಎಂದು ಶ್ರೀ ರಂಭಾಪುರಿ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದರು ತಿಳಿಸಿದರು.
ಶ್ರೀ ರಂಭಾಪುರಿ ಪೀಠದಲ್ಲಿ ಜರುಗುತ್ತಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಪ್ರಯುಕ್ತ ಶ್ರೀ ಜಗದ್ಗುರು ರೇಣುಕಾಚಾರ್ಯ ಕೃಪಾಪೋಷಿತ ಹಳೇ ವಿದ್ಯಾರ್ಥಿಗಳ ಸಂಘ, ಸೂರ್ಯ ನ್ಪೋರ್ಟ್ಸ್ ಕ್ಲಬ್, ಯುವಜನ ಮತ್ತು ಕ್ರೀಡಾ ಇಲಾಖೆ, ಅಮೆಚೂರ್ ಕ್ಲಬ್ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶೃಂಗೇರಿ ಕ್ಷೇತ್ರ ಮಟ್ಟದ ಹೊನಲು ಬೆಳಕಿನ ಪ್ರೋ ಮಾದರಿಯ ಲೀಗ್ ಕಬಡ್ಡಿ ಪಂದ್ಯಾವಳಿ “ಶ್ರೀ ಜಗದ್ಗುರು ರೇಣುಕಾಚಾರ್ಯ ಕಪ್ 2022” ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಹಲವಾರು ಗ್ರಾಮೀಣ ಕ್ರೀಡೆಗಳು ನಶಿಸಿಸುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ಉಳಿಸಿ ಬೆಳೆಸುವಲ್ಲಿ ಜಗದ್ಗುರು ಕೃಪಾಪೋಷಿತ ಹಳೇ ವಿದ್ಯಾರ್ಥಿಗಳ ಸಂಘ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಕೃಪಾಪೋಷಿತ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಿವಪ್ರಸಾದ್ ಮಾತನಾಡಿ, ಸಂಘವು ಕ್ರೀಡಾಕೂಟಗಳಿಗೆ ಪ್ರೋತ್ಸಾಹ ನೀಡುವುದಲ್ಲದೆ ಹಲವಾರು ಸಮಾಜಮುಖೀ ಕೆಲಸವನ್ನು ಮಾಡುತ್ತಾ ಬಂದಿದೆ. ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಲೀಗ್ ಮಾದರಿಯ ಕಬಡ್ಡಿ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿದ್ದು, ಪ್ರಥಮ ಬಹುಮಾನ 30 ಸಾವಿರ ನಗದು ಆಕರ್ಷಕ ಟ್ರೋಪಿ, ದ್ವೀತಿಯ ಬಹುಮಾನ 20 ಸಾವಿರ ರೂ. ನಗದು ಆಕರ್ಷಕ ಟ್ರೋಫಿ , ತೃತೀಯ ಬಹುಮಾನ 10 ಸಾವಿರ ನಗದು ಆಕರ್ಷಕ ಟ್ರೋಫಿ , ಚತುರ್ಥ ಬಹುಮಾನ 8 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ ಎಂದರು.
ವಿಶ್ವ ಹಿಂದೂ ಪರಿಷತ್‌ನ ಆರ್.ಡಿ. ಮಹೇಂದ್ರ, ಜೆಡಿಎಸ್ ಮುಖಂಡ ಕೆ.ಟಿ. ಗೋವಿಂದೇಗೌಡ, ಕಾಂಗ್ರೆಸ್‌ನ ಕೆ.ಎಂ. ಸಂತೋಷ್ ಮಾತನಾಡಿದರು. ಮಳಲಿ ಶ್ರೀ, ಹೂಲಿ ಶ್ರೀ, ಬೀರೂರು ಶ್ರೀ, ವಿಮಲ ರೇಣುಕ ವೀರಮುಕ್ತಿಮುನಿ ಶ್ರೀ, ಸಿದ್ಧರಬೆಟ್ಟ ಶ್ರೀ, ಬಿ.ಕಣಬೂರು ಗ್ರಾಪಂ ಉಪಾಧ್ಯಕ್ಷ ಎಂ.ಜೆ. ಮಹೇಶಾಚಾರ್, ಎಂ.ಗಿರೀಶ್, ಅರಣ್ಯಾ ಧಿಕಾರಿ ನಿರಂಜನ್, ಚೇತನ್ ಗಸ್ತಿ, ಕೌಶಿಕ್, ಹುಣಸೇಹಳ್ಳಿ ರಾಜಪ್ಪಗೌಡ, ಪ್ರಕಾಶ್ ಕಿಣಿ, ಇಬ್ರಾಹಿಂ ಶಾಫಿ ಇತರರು ಇದ್ದರು. ಶೇಖರ್ ಪೂಜಾರಿ ಪ್ರಾರ್ಥಿಸಿ, ಸೂರ್ಯ ನ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸುನಿಲ್ ರಾಜ್ ಭಂಡಾರಿ ನಿರೂಪಿಸಿ, ವಂದಿಸಿದರು.