Advertisement

ಇಂದು ಪದ್ಮಗಿರಿ ಕಲಾಕುಟೀರದಲ್ಲಿ ‘ರಂಗಚಿನ್ನಾರಿ’ಪ್ರಶಸ್ತಿ ಪ್ರದಾನ

12:20 AM Jun 01, 2019 | Sriram |

ಕಾಸರಗೋಡು: ಸಾಮಾಜಿಕ – ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಹದಿಮೂರನೇ ವಾರ್ಷಿಕೋತ್ಸವದ ‘ರಂಗಚಿನ್ನಾರಿ ಪ್ರಶಸ್ತಿ’ ಗೆ ಸನ್ನಿಧಿ ಟಿ.ರೈ, ಕೃಷ್ಣ ಕಿಶೋರ ಪೆರ್ಮುಖ, ಡಾ| ಯು.ಮಹೇಶ್ವರಿ ಮತ್ತು ಕೃಷ್ಣ ಜಿ.ಮಂಜೇಶ್ವರ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಜೂ. 1ರಂದು ಶನಿವಾರ ಸಂಜೆ 5.15ಕ್ಕೆ ಕರಂದಕ್ಕಾಡ್‌ನ‌ ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿದೆ.

Advertisement

ಸನ್ನಿಧಿ ಟಿ.ರೈ ಪೆರ್ಲ
ಯಕ್ಷಗಾನ, ಭರತನಾಟ್ಯ, ಪೆನ್ಸಿಲ್ ಡ್ರಾಯಿಂಗ್‌, ಯೋಗ, ಕೀ ಬೋರ್ಡ್‌ ಮತ್ತು ವಯಲಿನ್‌ ವಾದನ, ಶಾಸ್ತ್ರೀಯ ಸಂಗೀತ ಹಾಗು ಜನಪದ ಸಂಗೀತ, ಕರಾಟೆ, ಸಮಾಜ ಸೇವೆ.. ಹೀಗೆ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿರುವ ಸನ್ನಿಧಿ ಟಿ.ರೈ ಪೆರ್ಲ ಉತ್ತಮ ಕವಯಿತ್ರಿ, ಲೇಖಕಿ. ಕನ್ನಡ, ಇಂಗ್ಲಿಷ್‌, ಹಿಂದಿ, ತುಳು ಹೀಗೆ ವಿವಿಧ ಭಾಷೆಗಳಲ್ಲಿ ಕವಿತೆಗಳನ್ನು ರಚಿಸಿರುವ ಸನ್ನಿಧಿ ವಿವಿಧ ಸಮ್ಮೇಳನಗಳಲ್ಲಿ ವಿದ್ಯಾರ್ಥಿಗೋಷ್ಠಿಗಳಲ್ಲಿ ಅಧ್ಯಕ್ಷೆಯಾಗಿಯೂ, ಪ್ರಬಂಧ ಮಂಡಿಸಿ ಗಮನ ಸೆಳೆದಿದ್ದಾರೆ. ಉತ್ತಮ ಭಾಷಣಗಾರ್ತಿಯಾಗಿರುವ ಸನ್ನಿಧಿ ಅವರನ್ನು ಈಗಾಗಲೇ ಹಲವು ಪ್ರಶಸ್ತಿ, ಪುರಸ್ಕಾರ ಅರಸಿಕೊಂಡು ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಮತ್ತು ಹೆಣ್ಮಕ್ಕಳಿಗೆ ಸ್ವರಕ್ಷಣೆಯ ಕುರಿತಾಗಿ ತರಗತಿಯನ್ನು ನಡೆಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದಾರೆ. ಪತ್ರಿಕೆಯೊಂದರಲ್ಲಿ ನಿರಂತರವಾಗಿ ಅಂಕಣ ಬರೆಯುತ್ತಿರುವ ಈ ಯುವ ಪ್ರತಿಭೆ ತ್ಯಾಜ್ಯ ಸಂಸ್ಕರಣೆಯ ಬಗ್ಗೆ ನೂತನ ವಿಧಾನವನ್ನು ಪ್ರತಿಪಾದಿಸಿದಲ್ಲದೆ, ಯೋಜನೆಯನ್ನು ಡಾ|ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದ್ದರು. ರಂಗ ಭೂಮಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಎಲೆಮರೆಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದಾರೆ.

ಕೃಷ್ಣ ಕಿಶೋರ ಪೆರ್ಮುಖ
ದೃಷ್ಟಿಯಿಲ್ಲದಿದ್ದರೂ ಸಂಗೀತ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಯಿಂದ ಕೃಷ್ಣ ಕಿಶೋರ ಪೆರ್ಮುಖ ಅವರು ಕೀ ಬೋರ್ಡ್‌ ಸ್ವತಃ ಕಲಿತು ಅಚ್ಚರಿ ಮೂಡಿಸಿದ ಕಲಾವಿದ. 7ನೇ ವಯಸ್ಸಿನಿಂದಲೇ ಸಂಗೀತಾಭ್ಯಾಸ ಆರಂಭಿಸಿದ ಕೃಷ್ಣ ಕಿಶೋರ್‌ ಎರಡು ವರ್ಷಗಳ ಕಾಲ ಕುದುಮಾರು ವೆಂಕಟ್ರಾಮನ್‌ ಅವರಿಂದ ಸಂಗೀತಾಭ್ಯಾಸ ಮಾಡಿದ್ದು, ಆ ಬಳಿಕ ವಿದುಷಿ ಶಕುಂತಲಾ ಕೃಷ್ಣ ಭಟ್ ಕುಂಚಿನಡ್ಕ ಅವರಲ್ಲಿ ಅಭ್ಯಾಸ ಮಾಡಿ ಜೂನಿಯರ್‌ ಪರೀಕ್ಷೆ ತೇರ್ಗಡೆಯಾಗಿದ್ದಾರೆ.

ವೆಳ್ಳಿಕೋತ್‌ ವಿಷ್ಣು ಭಟ್ ಅವರಲ್ಲಿ 10 ವರ್ಷ ಕಾಲ ಉಚಿತ ಶಿಕ್ಷಣವನ್ನು ಪಡೆದಿದ್ದು, ಇದೀಗ ವಿದುಷಿ ಗೀತಾ ಸಾರಡ್ಕ ಅವರಿಂದ ಸಂಗೀತಾಭ್ಯಾಸ ಮಾಡುತ್ತಿದ್ದು, ಇವರ ಮಾರ್ಗದರ್ಶನಲ್ಲಿ ಸೀನಿಯರ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. 8 ನೇ ವಯಸ್ಸಿನಿಂದಲೇ ಸಂಗೀತ, ಕೀಬೋರ್ಡ್‌ ವಾದನ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.

ಡಾ|ಯು.ಮಹೇಶ್ವರಿ
ಕನ್ನಡದ ಪ್ರಸಿದ್ಧ ಲೇಖಕಿಯರಲ್ಲಿ ಒಬ್ಬರಾಗಿರುವ ಡಾ|ಯು.ಮಹೇಶ್ವರಿ ಅವರು ಮಹತ್ವದ ಸಂಶೋಧಕಿಯೂ, ವಿಮರ್ಶಕಿಯೂ ಆಗಿದ್ದಾರೆ. ಉಡುಪಿಯ ಎಂ.ಜಿ.ಎಂ. ಕಾಲೇಜು ಹಾಗು ಕಾಸರಗೋಡಿನ ಸರಕಾರಿ ಕಾಲೇಜುಗಳಲ್ಲಿ ಸುದೀರ್ಘ‌ ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಅವರು ಕೆಲಕಾಲ ಕಣ್ಣೂರು ವಿ.ವಿ. ಪ್ರಾದೇಶಿಕ ಭಾಷಾ ಅಧ್ಯಯನಾಂಗದ ನಿರ್ದೇಶ ಕಿಯಾಗಿದ್ದರು. ನಾಡಿನಾದ್ಯಂತ ನೂರಾರು ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕಣ್ಣೂರು ವಿಶ್ವವಿದ್ಯಾಲಯದ ಸಂಶೋಧನ ಮಾರ್ಗದರ್ಶಕಿಯಾಗಿದ್ದಾರೆ. ‘ಮುಗಿಲ ಹಕ್ಕಿ’, ‘ಇದು ಮಾನುಷಿಯ ಹಾಡು’, ‘ಅಟ್ಟುಂಬೊಳದ ಪಟ್ಟಾಂಗ’ ಮುಂತಾದ ಇವರ ಪ್ರಕಟಿತ ಕೃತಿಗಳು. ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿರುವ ಮಹೇಶ್ವರಿ ಯು. ಸದಾ ಓದು ಬರಹಗಳಿಗೆ ತನ್ನನ್ನು ತಾನು ಮುಡಿಪಾಗಿರಿಸಿಕೊಂಡ ಸಾಹಿತ್ಯ ಪ್ರೇಮಿ. ಕನ್ನಡ ಹೋರಾಟದಲ್ಲೂ ಸಕ್ರಿಯರು.

Advertisement

ಕೃಷ್ಣ ಜಿ.ಮಂಜೇಶ್ವರ
ರಂಗಭೂಮಿ ಹಾಗೂ ಚಲನಚಿತ್ರ ರಂಗದಲ್ಲಿ ಸಕ್ರಿಯವಾಗಿರುವ ಕೃಷ್ಣ ಜಿ.ಮಂಜೇಶ್ವರ ಅವರು ರಂಗಭೂಮಿ ಕ್ಷೇತ್ರದಲ್ಲಿ ಗಮನ ಸೆಳೆದವರು. 8ನೇ ತರಗತಿಯಿಂದ ರಂಗಭೂಮಿಗೆ ಪಾದಾರ್ಪಣೆ ಮಾಡಿದ ಅವರು ಅಭಿನಯ, ನಾಟಕ ರಚನೆಯಿಂದ ಖ್ಯಾತರು. ‘ಬಲಿಪಶು’ ನಾಟಕದಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಅಭಿನಯಿಸಿದ ಬಳಿಕ ಹಿಂದೆ ನೋಡಿಲ್ಲ. ಗಂಗೆಗೌರಿ, ಈ ಕಲ್ಲ್ ಸಾಕ್ಷಿ, ಮೆಗ್ಗೆ-ಪಲಯೆ, ದೊಂಬರಾಟ, ಮಾಮಿಂಗಾವಂತಿ ಮರ್ಮಾಲ್, ಬಾಳ್ವೆದಾಂತಿ ಪ್ರೀತಿ, ದಾಯೆ ಪಂಡಿಜರ್‌, ಅಕ್ಕ ಬತ್ತಿ ಬೊಕ್ಕ, ಬಂಗಾರ್‌ ಕಂಡನಿ ಇಂತಹ ನೂರಕ್ಕೂ ಮಿಕ್ಕಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಬಾಳ್ವೆದಾಂತಿ ಪ್ರೀತಿ, ದಾಯೆಪಂಡಿಜರ್‌, ಕತೆಯಾನ್‌ ಪನ್ಪೆ, ಬರುವೆರಾ, ಏರ್ಲಾ ಸರಿಇಜ್ಜೆರ್‌, ಮುಗಿನಂತಿ ಕತೆ, ಗುಟ್ಟು ಬುಡೊಚಿರ, ಅಕ್ಕ ಬತ್ತಿ ಬೊಕ್ಕ, ಒಟ್ಟಿಗೆ ಪೋಯಿ, ಎಲ್ಲ ಗೊತ್ತಾವು, ತಿರ್ಗ್‌ದ್‌ ತೂಲೆ, ಎಡ್ಡೆಡುಪ್ಪುಗ, ಸಾದಿ ತಪ್ಪೊಡ್ಚಿ, ಎಡ್ಡೆ ಆತ್‌ಂಡ್‌, ಆರ್‌ ಪನ್ಲಕ, ಸುದ್ದಿ ತಿಕ್ಕ್ಂಡ್‌, ಅಂಚಗೆ-ಇಂಚಗೆ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. 1995 ನ.5 ರಂದು ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ತಂಡವನ್ನು ಸ್ಥಾಪಿಸಿದ ಅವರನ್ನು ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಅರಸಿಕೊಂಡು ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next