Advertisement

“ಅಧಿಕಾರ’ದ ಪಾಠ ಕಲಿಸುವ “ಅಂತಿಗೊನೆ’ 

12:30 AM Jan 04, 2019 | |

ರಾಜನೀತಿಯ ಪಾಲನೆ, ಹಣಕ್ಕಿಂತ ದೊಡ್ಡ ಶಾಪವಿಲ್ಲ, ದೇವರ ಶಾಸನವೇ ಮೇಲು, ರಾಷ್ಟ್ರವೇ ನಮ್ಮ ಬದುಕು ಎಂಬಿತ್ಯಾದಿ ವಚನಗಳು ಅಂದಿಗೆ ಮಾತ್ರವಲ್ಲ, 3 ಸಾವಿರ ವರ್ಷಗಳ ಬಳಿಕವೂ ಪ್ರಸ್ತುತವೆನಿಸುತ್ತಿದೆ. ಅಧಿಕಾರ ಸಿಕ್ಕಿತ್ತೆಂದು ದರ್ಪ, ಅಹಂಕಾರದಿಂದ ಮೆರೆದಾಡಿದರೆ ಅದಕ್ಕಿರುವುದು ಅಲ್ಪಾಯಸ್ಸು ಮಾತ್ರ ಎನ್ನುವುದು ಈ ನಾಟಕದ ಮೂಲಕ ಸಾಬೀತಾಗುತ್ತದೆ. 

Advertisement

ಅಂತಿಗೊನೆ ಗ್ರೀಕ್‌ನ ಅತ್ಯಂತ ಹಳೆಯ ನಾಟಕವಾಗಿದ್ದರೂ, ವೈಚಾರಿಕತೆಯ ಹಿನ್ನೆಲೆ ಹಾಗೂ ಸಾಹಿತ್ಯಿಕವಾಗಿ ಸಂಪದ್ಭರಿತವಾಗಿದೆ. ಪ್ರಾಚೀನ ನಾಟಕವಾಗಿದ್ದರೂ, ವಿಧಿಯುಕ್ತ ಸಾಂಪ್ರದಾಯಿಕ, ಸಂಸ್ಕೃತಿಯ ಜತೆಗೆ, ರಾಜನಾದವರ ತನಗೆ ಪ್ರಜೆಗಳಿಂದ ಸಿಕ್ಕ ಅಧಿಕಾರವನ್ನು ಯಾವ ರೀತಿಯಾಗಿ ನಡೆಸಿಕೊಂಡು ಹೋಗಬೇಕು, ಧಿಕ್ಕರಿಸಿದರೆ ಏನಾಗುತ್ತದೆ ಎನ್ನುವುದರ ಮಹತ್ವವನ್ನು ತಿಳಿಸಿಕೊಡುವ ಪ್ರಯತ್ನ ಇಲ್ಲಿದೆ.

ರಂಗ ಅಧ್ಯಯನ ಕೇಂದ್ರ ಕುಂದಾಪುರದ ಆಶ್ರಯದಲ್ಲಿ ಡಿ. 31 ರಂದು ಬಯಲು ರಂಗ ಮಂಟಪದಲ್ಲಿ ಅಂತಿಗೊನೆ ನಾಟಕ ಪ್ರದರ್ಶನಗೊಂಡಿತು. ಗ್ರೀಕ್‌ ಮೂಲದ ಸೋಫೋಕ್ಸಿಸ್‌ನ ದುರಂತ ನಾಟಕದ ವಿನ್ಯಾಸ ಹಾಗೂ ನಿರ್ದೇಶನವನ್ನು ಕಲ್ಲಪ್ಪ ಪೂಜೇರ ಮಾಡಿದ್ದು, ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. 

ಸುಮಾರು 3000 ವರ್ಷಗಳ ಹಿಂದಿನ ಅಂತಿಗೊನೆ ಗ್ರೀಕ್‌ನ ಥೀಬ್ಸ್ ನಗರದ “ದೊರೆ ಈಡಿಪಸ್‌’ ನಾಟಕದ ಮುಂದುವರಿದ ಭಾಗವಾಗಿದೆ. ಈಡಿಪಸ್‌ ಸಾವನ್ನಪ್ಪಿದ ನಂತರ ಆತನ ಇಬ್ಬರು ಪುತ್ರರಾದ ಪಾಲಿನೈಕಸ್‌ ಹಾಗೂ ಎತಿಯೋಕ್ಸಿಸ್‌ ಮರಣವನ್ನಪ್ಪುತ್ತಾರೆ. ಆಗ ರಾಜ ಕ್ರೆಯಾನ್‌ ಥೀಬ್ಸ್ ನಗರದ ಪರವಾಗಿ ಹೋರಾಡಿ ವೀರ ಮರಣವನ್ನಪ್ಪಿದ ಎತಿಯೋಕ್ಲೇಸ್‌ಗೆ ವಿಧಿವತ್ತಾಗಿ ಶವಸಂಸ್ಕಾರ ಮಾಡಬೇಕು. ನಗರದ ವಿರುದ್ಧ ಹೋರಾಡಿದ ಪಾಲಿನೈಕಸ್‌ ಶವವನ್ನು ಬಯಲಿನಲ್ಲಿ ಎಸೆದು ಹದ್ದು, ಕಾಗೆಗಳಿಗೆ ಆಹಾರವಾಗುವಂತೆ ಮಾಡಿ, ಯಾರೂ ಕೂಡ ಶವ ಸಂಸ್ಕಾರ ಮಾಡಬಾರದು, ಮಾಡಿದರೆ ಮರಣದಂಡನೆ ವಿಧಿಸುವುದಾಗಿ ಒಂದು ಆಜ್ಞೆ ಹೊರಡಿಸುತ್ತಾನೆ. 

ಆದರೆ ಅವರ ತಂಗಿ ಅಂತಿಗೊನೆಯು ಇಬ್ಬರು ಅಣ್ಣಂದಿರಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ರಾಜ ಆಜ್ಞೆಗಿಂತಲೂ ದೇವರು ಬರೆದ ಆಜ್ಞೆ ಮೇಲು ಎಂದು ರಾಜಾಜ್ಞೆಯನ್ನು ಧಿಕ್ಕರಿಸಿ, ಅಣ್ಣ ಪಾಲಿನೈಕಸ್‌ನ ಶವ ಸಂಸ್ಕಾರ ಮಾಡುತ್ತಾಳೆ. 

Advertisement

ಇದರಿಂದ ರೊಚ್ಚಿಗೆದ್ದ ರಾಜ ಕ್ರೆಯಾನ್‌ ಆಕೆಯನ್ನು ಕಗ್ಗತ್ತಲಲ್ಲಿ ಬಂಧಿಯಾಗಿಡುತ್ತಾನೆ. ಆಕೆ ಅಲ್ಲಿಯೇ ಕೊರಗಿ, ಕೊರಗಿ, ಚಿತ್ರ ಹಿಂಸೆ ಅನುಭವಿಸಿ ಮರಣವನ್ನಪ್ಪುತ್ತಾಳೆ. ಇತ್ತ ದೊರೆ ಕ್ರೆಯಾನ್‌ನ ಮಗ ಹಯಮೋನ್‌ ಅಂತಿಗೊನೆಯನ್ನು ಪ್ರೀತಿಸುತ್ತಿದ್ದು, ತಂದೆಯ ಆಜ್ಞೆಯನ್ನು ವಿರೋಧಿಸಿ, ಆಕೆಯೊಂದಿಗೆ ಜೀವ ತ್ಯಜಿಸುತ್ತಾನೆ. ಕ್ರೆಯಾನ್‌ನ ಪತ್ನಿ ಯೂರಿಡಿಸಿ ಪುತ್ರನ ಅಗಲಿಕೆಯು ಸುದ್ದಿ ಕೇಳಿ, ಕುಸಿದು ಬಿದ್ದು ಮರಣ ಹೊಂದುತ್ತಾಳೆ. 

ತನ್ನ ಪುತ್ರ, ಪತ್ನಿ, ಬಂಧು- ಬಳಗದವರು ಕಣ್ಣೆದುರೇ ತನ್ನದೇ ಅಹಂಕಾರ, ದರ್ಪದಿಂದಾಗಿ ಸಾವನ್ನಪ್ಪಿರುವುದನ್ನು ಕಂಡ ದೊರೆ ಕ್ರೆಯಾನ್‌ ಪಶ್ಚಾತ್ತಾಪ ಪಡುತ್ತಾನೆ. ತನ್ನನ್ನು ದೇಶದಿಂದ ಗಡಿಪಾರು ಮಾಡಿ ಎಂದು ಪ್ರಜೆಗಳಿಗೆ ಹೇಳುತ್ತಾನೆ. ಆದರೆ ಪ್ರಜೆಗಳು ಪಶ್ಚಾತ್ತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ್ತವಿಲ್ಲವೆಂದು ತಿಳಿದು ದೊರೆಯನ್ನು ಮನ್ನಿಸುವುದರೊಂದಿಗೆ ನಾಟಕ ಕೊನೆಗೊಳ್ಳುತ್ತದೆ. 

ಪಾತ್ರವರ್ಗದಲ್ಲಿರುವ ಅಂತಿಗೊನೆ – ಬಿಂದುಶ್ರೀ ಆರ್‌.ಎನ್‌., ಕ್ರೆಯಾನ್‌ – ಸೃಜನ್‌ ಸಿ., ಯೂರಿಡಿಸಿ – ಪ್ರಿಯಾಂಕ, ಹಯಾಮೋನ್‌ – ರಾಹುಲ್‌ ಕೆ.ಎಂ., ಕಾವಲುಗಾರ – ಗಣಪತಿ ನಾಗಪ್ಪ ಗೌಡ, ದೂತ – ರಮೇಶ್‌ ಎಸ್‌., ಮಂಜುನಾಥ ವನಕೇರಿ, ಸುರೇಶ್‌ ವೈ.ಎಸ್‌., ಮುತ್ತು ಕುಮಾರ್‌ ಸಿ.ಟಿ., ಕಾರ್ತಿಕ್‌, ಪೃಥ್ವಿರಾಜ್‌ ಟಿ.ಎಸ್‌., ಶಿವಕುಮಾರ್‌, ಪೃಥ್ವಿರಾಜ್‌ ಕಾಲೇìಕರ್‌ ನಟನೆ ಮನಮುಟ್ಟುವಂತಿದೆ. ಬೆಳಕಿನಲ್ಲಿ ಕೀರ್ತಿ ಪ್ರಸಾದ್‌ ಸಹಕರಿಸಿದ್ದಾರೆ. 

ರಾಜನೀತಿಯ ಪಾಲನೆ, ಹಣಕ್ಕಿಂತ ದೊಡ್ಡ ಶಾಪವಿಲ್ಲ, ದೇವರ ಶಾಸನವೇ ಮೇಲು, ರಾಷ್ಟ್ರವೇ ನಮ್ಮ ಬದುಕು ಎಂಬಿತ್ಯಾದಿ ವಚನಗಳು ಅಂದಿಗೆ ಮಾತ್ರವಲ್ಲ, 3 ಸಾವಿರ ವರ್ಷಗಳ ಬಳಿಕವೂ ಪ್ರಸ್ತುತವೆನಿಸುತ್ತಿದೆ. ಅಧಿಕಾರ ಸಿಕ್ಕಿತ್ತೆಂದು ದರ್ಪ, ಅಹಂಕಾರದಿಂದ ಮೆರೆದಾಡಿದರೆ ಅದಕ್ಕಿರುವುದು ಅಲ್ಪಾಯಸ್ಸು ಮಾತ್ರ ಎನ್ನುವುದು ಈ ನಾಟಕದ ಮೂಲಕ ಸಾಬೀತಾಗುತ್ತದೆ. 

ರಂಗ ಅಧ್ಯಯನ ಕೇಂದ್ರ ಕುಂದಾಪುರದ ಆಶ್ರಯದಲ್ಲಿ ಡಿ. 30 ರಿಂದ ಜ. 3 ರವರೆಗೆ 5 ದಿನಗಳ ಕಾಲ 1984, ಅಂತಿಗೊನೆ, ಕುಲಂ, ಆಷಾಢದ ಒಂದು ದಿನ, ಬೊಲಿವಿಯನ್‌ ಸ್ಟಾರ್ ನಾಟಕಗಳು ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನ ಡಾ| ಎಚ್‌. ಶಾಂತರಾಮ್‌ ಬಯಲು ರಂಗ ಮಂಟಪದಲ್ಲಿ “ರಂಗ ಮಹೋತ್ಸವ’ ನಾಟಕ ಪ್ರದರ್ಶನಗೊಂಡಿತು.

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next