ಅಭಿವೃದ್ಧಿಯ ಪರಿಭಾಷೆಯನ್ನು ಅರ್ಥಮಾಡಿಕೊಳ್ಳುವುದು ಹೇಗೆ? ವಿವರಿಸುವುದು ಹೇಗೆ? ಒಂದು ಊರಿಗೆ ಮೊಬೈಲು, ಲ್ಯಾಪ್‌ಟಾಪ್, ಹೊಸ ರಸ್ತೆ, ಕಂಪೆನಿ, ಅತ್ಯಾಧುನಿಕ ಕಟ್ಟಡಗಳು, ರಾಕ್ಷಸ ಯಂತ್ರಗಳು, ಓಡಾಡಲು ಹೊಸ ಹೊಸ ವಾಹನಗಳು, ವಿಮಾನಯಾನ ಇವೆಲ್ಲಾ ಆವರಿಸಿಕೊಂಡರೆ ನಾವು ಅಭಿವೃದ್ಧಿಗೊಂಡಿದ್ದೇವೆ ಎಂದರ್ಥವೇ? ಈ ಅಭಿವೃದ್ಧಿಯೇ ನಮ್ಮ ನೆಮ್ಮದಿಯನ್ನು ಕಸಿಕೊಳ್ಳುವಂತಿದ್ದರೆ ಅದನ್ನು ಅಭಿವೃದ್ಧಿ ಎನ್ನಬಹುದೇ? ಹೀಗೊಂದು ಪ್ರಶ್ನೆಯನ್ನು ಎದುರಿಟ್ಟು ರೂಪುಗೊಂಡ ಪ್ರಹಸನ “ಅಭಿವೃದ್ಧಿ’. ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಇತ್ತೀಚೆಗೆ ಪ್ರದರ್ಶನ ನಡೆಯಿತು. ರಂಗಭೂಮಿಯಲ್ಲಿ ತನ್ನ ಹೊಸತನಗಳಿಂದ ಹೆಸರಾದ ಜೀವನ್ ರಾಂ ಸುಳ್ಯ ರಚಿಸಿ ನಿರ್ದೇಶಿಸಿದ ಈ ಪ್ರಹಸನವನ್ನು ಅಭಿನಯಿಸಿದವರು ಆಳ್ವಾಸ್ ರಂಗ ಅಧ್ಯಯನ ಕೇಂದ್ರದವರು.
ರಸ್ತೆ ಅಗಲೀಕರಣದಿಂದಾಗಿ ಹಳ್ಳಿಯಲ್ಲಿದ್ದ ವೃದ್ಧ ದಂಪತಿ ಹಿರಿಯರಿಂದ ಬಂದ ಮನೆಯನ್ನು ಕಳಕೊಳ್ಳಬೇಕಾದ ಸ್ಥಿತಿಯಲ್ಲಿದ್ದಾರೆ. ಅದೇ ಮನೆಯಲ್ಲಿ ಹುಟ್ಟಿ ಬೆಳೆದ ಅವರ ಮಕ್ಕಳು ಬೆಂಗಳೂರು ನಗರದಲ್ಲಿ ಕೈತುಂಬಾ ಸಂಬಳ ಪಡೆಯುತ್ತಾ ಸುಖವಾಗಿದ್ದಾರೆ. ಅವರಿಗೆ ನಾಳೆ ಬೆಳಗಾಗುವಾಗ ಇಲ್ಲದಾಗುವ ಮನೆ ಅಭಿವೃದ್ಧಿಗೆ ಅನಿವಾರ್ಯವಾಗಿ ತೆರಬೇಕಾದ ಕಾಣಿಕೆ ಅಷ್ಟೇ.
ತಮ್ಮ ಅಪ್ಪ ಅಮ್ಮನ ಮನೆ ಬಗೆಗಿನ ಅಟ್ಯಾಚ್‌ಮೆಂಟ್ ಓವರ್ ಎನಿಸಿ ಬದಲಾವಣೆಗೆ ಹೊಂದಿಕೊಳ್ಳದ ಜಿಗುಟು ಸ್ವಭಾವ ಎನಿಸುತ್ತದೆ. ಬೆಂಗಳೂರಿನಲ್ಲಿ ಎಂಟನೇ, ಒಂಬತ್ತನೇ, ಹತ್ತನೇ ಅಂತಸ್ತುಗಳಲ್ಲಿರುವ ಇವರಿಗೆ ತಮ್ಮ ಕಿಟಕಿಯಿಂದ ನೋಡಿದರೆ ಇಡೀ ಬೆಂಗಳೂರೇ ಕಾಣುತ್ತದೆ ಎಂಬ ಹೆಮ್ಮೆ. ಆದರೆ ಆ ಕಿಟಕಿಯಿಂದ ನೋಡಿದರೆ ನಮ್ಮ ಊರು ಕಾಣುತ್ತಾ. ನೀವೆಲ್ಲಾ ಹುಟ್ಟಿ ಬೆಳೆದ ಈ ಮನೆ ಕಾಣುತ್ತಾ ಎಂಬ ಅಪ್ಪನ ವಿಷಾದಭರಿತ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ.
ಪ್ರಹಸನದ ಉದ್ದಕ್ಕೂ ಬುಲ್ಡೋಜರಿನ ಭೀಮ ಕೈಗಳಿಂದ ಪಕ್ಕದ ಮನೆಗಳು ಉದುರುವ ಸದ್ದು, ಅದು ಮನೆಯೊಳಗಿನ ವೃದ್ಧ ದಂಪತಿಗಳ ಕರುಳನ್ನು ಹಿಂಡುವ ವೇದನೆ, ಇಂತಹ ಸನ್ನಿವೇಶದಲ್ಲೂ ಮರುದಿನದ ಫ್ಲೈಟ್ ಟಿಕೇಟನ್ನು ಕೈಗಿತ್ತು ಹೋಗುವ ಮಕ್ಕಳು, ಹಳೆಯ ಮನೆಯ ದಾರಂದ, ಬಾಗಿಲುಗಳನ್ನು ಮಾರಿ ಬಿಡುವ ಮಕ್ಕಳ ಹಣದಾಹ, ಇದರೆಡೆಯಲ್ಲಿ ತಮ್ಮ ಟಿಆರ್‌ಪಿ ಬೇಳೆ ಬೇಯಿಸಿಕೊಳ್ಳುತ್ತಿರುವ ಮಾಧ್ಯಮಗಳ ಧಾವಂತ ಇತ್ಯಾದಿಗಳಿಂದ ಪಟಾಕಿಯ ಬತ್ತಿಗೆ ಬೆಂಕಿ ಕೊಟ್ಟಂತೆ ಪ್ರಹಸನ ಚುರುಗುಟ್ಟುತ್ತದೆ. ಅದು ಸ್ಫೋಟಗೊಳ್ಳುವುದು ಈ ಅಭಿವೃದ್ಧಿಗೆ ಧಿಕ್ಕಾರವಿರಲಿ ಎಂಬ ಮುದುಕ ಅಪ್ಪನ ಪ್ರತಿಭಟನೆಯಲ್ಲಿ. ಬುಲ್ಡೋಜರಿನ ಆಘಾತಕ್ಕೆ ಮನೆ ಕುಸಿದು ಆ ಮನೆಯ ಕಂಬಗಳಡಿಯಲ್ಲೇ ಉಸಿರು ಮುಗಿಸುವ ಆ ವೃದ್ಧರು ನಾವು ಬದುಕಿರುವವರೆಗೆ ಈ ಮನೆ ಬಿಟ್ಟು ಹೋಗಲ್ಲ ಎಂಬ ಮಾತನ್ನು ಸತ್ಯವಾಗಿಸಿಕೊಂಡರಾದರೂ ಅಭಿವೃದ್ಧಿಯಾನದಲ್ಲಿ ಭಾವನೆಗಳಿಗೆ, ಪರಂಪರೆಗೆ ಇಷ್ಟೇ ಜಾಗ ಎಂಬುದನ್ನು ಪ್ರಹಸನ ಕೂಗಿ ಹೇಳುತ್ತದೆ. ಕೇವಲ ಹತ್ತು ನಿಮಿಷಗಳ ಪ್ರಹಸನದಲ್ಲಿ ಆರು ಮಂದಿ ವಿದ್ಯಾರ್ಥಿಗಳು ಹನ್ನೆರಡು ಪಾತ್ರಗಳನ್ನು ನಿರ್ವಹಿಸುತ್ತಾರೆ. ನಾಗಶ್ರೀ ಹೆಬ್ಟಾರ್, ಸುಶಾಂತ್ ಮುಂಗರವಳ್ಳಿ, ವಿಭಾ ಡೋಂಗ್ರೆ, ಗೌರವ್ ರೈ, ವಿನಯ್, ಸುಚಿತಾ ಎಸ್. ನಾಯಕ್ ಇವರ ಮನೋಜ್ಞ ಅಭಿನಯ ಪ್ರಶಂಸಾರ್ಹ.
ಪುಟ್ಟ ಪ್ರಹಸನ ಮೂರು ತಲೆಮಾರುಗಳ ಆಸಕ್ತಿಯ ಭಿನ್ನತೆಯನ್ನು ಮುಂದಿಡುತ್ತದೆ. ತಾನು ಹುಟ್ಟಿದ ನೆಲ ಅದರೊಂದಿಗಿನ ಭಾವನಾತ್ಮಕ ಸಂಬಂಧ ನೆಲೆಯನ್ನು ಅಪಾರವಾಗಿ ಪ್ರೀತಿಸುವ ವೃದ್ಧ ದಂಪತಿ, ಆಧುನಿಕತೆಯ ಮಾಯಾಲೋಕದಲ್ಲಿ ಐಷಾರಾಮಿ ಬದುಕಲ್ಲಿ ಸಂತಸವನ್ನು ಕಾಣುತ್ತಿರುವ ಮಕ್ಕಳು- ಸೊಸೆಯಂದಿರು, ಮುಗ್ಧ ಮನಸಿನ ಅರಳು ಕಂಗಳ ಯಂತ್ರಗಳ ಮಾದಕತೆಗೆ ಮರುಳಾದ ಮೊಮ್ಮಗಳು ಇದು ವರ್ತಮಾನಕ್ಕೆ ಹಿಡಿದ ಕನ್ನಡಿ. ಎಂದಿನಂತೆ ರಂಗ ಪರಿಕರ, ಸಂಗೀತಗಳನ್ನೂ ಪಾತ್ರಗಳಂತೆ ಕುಣಿಸಬಲ್ಲ ರಂಗ ಮಾಂತ್ರಿಕ ಜೀವನ್‌ರಾಂ ಸುಳ್ಯ ಕಿರಿದರೋಳ್ ಪಿರಿದರ್ಥವನ್ನು ಅರಳಿಸಿದ್ದಾರೆ. ಈ ಪ್ರಹಸನ ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ತಿರುಪತಿಯಲ್ಲಿ ನಡೆಯುತ್ತಿರುವ ದಕ್ಷಿಣ ಭಾರತ ಅಂತರ್ ವಿವಿ ಸಾಂಸ್ಕೃತಿಕ ಸ್ಪರ್ಧೆಗೆ ಆಯ್ಕೆಗೊಂಡಿದೆ.
ಡಾ| ಧನಂಜಯ ಕುಂಬ್ಳೆ