Advertisement

ವಿನೂತನ ಯಕ್ಷ‌ ಪರಿಕಲ್ಪನೆ ಆತ್ಮಾನಂ ಮಾನುಷ ಮನ್ಯೇ

06:00 AM Nov 02, 2018 | |

ಒಂದೇ ರಸದಲ್ಲಿ ಆರು ತಾಸುಗಳ ಕಾಲ ಪ್ರೇಕ್ಷಕರನ್ನು ಹಿಡಿದಿಡುವ ಹಿಂದಿನ ಶ್ರಮವನ್ನು ಗಮನಿಸಲೇ ಬೇಕು. ಪೂರಕವಾದ ಹಿಮ್ಮೇಳ ಇಡೀ ಪ್ರದರ್ಶನವನ್ನು ಪರಿಣಾಕಾರಿಯಾಗಿಸಿತು. ಕನ್ನಡಿಕಟ್ಟೆ, ಶ್ರೀನಿವಾಸ ಬಳ್ಳಮಂಜ, ಮಯ್ಯರ ಭಾಗವತಿಕೆಗೆ ಪದ್ಯಾಣ ಶಂಕರಣ್ಣ, ಮುರಾರಿ ಕಡಂಬಳಿತ್ತಾಯ, ಕೃಷ್ಣಪ್ರಕಾಶ ಉಳಿತ್ತಾಯ ಸಮರ್ಥ ಸಾಥ್‌ ನೀಡಿದರು. 

Advertisement

ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಉಡುಪಿಯ ಕಲಾರಂಗಕ್ಕೆ ಪ್ರತಿಷ್ಠಾನದ ಪ್ರಶಸ್ತಿಯನ್ನು ನೀಡುವ ಕಾರ್ಯಕ್ರಮದಲ್ಲಿ ಪೃಥ್ವಿರಾಜ ಕವತ್ತಾರು ನಿರ್ದೇಶನದಲ್ಲಿ ಪ್ರದರ್ಶಿಸಿದ “ಆತ್ಮಾನಂ ಮಾನುಷ ಮನ್ಯೆ’ಯಲ್ಲಿ ಮನುಜ ನಡೆಯ ಆದರ್ಶವನ್ನು ಸಾರಿದ ಶ್ರೀರಾಮನ ಸೂಕ್ಷ್ಮ ಮನಸ್ಸನ್ನು ಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ನಡೆಯಿತು. ಪ್ರಸಂಗ ರಚಿಸಿದವರು ಗಣೇಶ ಕೊಲೆಕಾಡಿ.  

ಈ ಪ್ರದರ್ಶನ ವಿವಿಧ ರೀತಿಯಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಹೊಸತನವನ್ನು ಸೃಷ್ಟಿಸಿತು. ರಾವಣ ವಧೆ ವರೆಗಿನ ಅನೇಕ ಪ್ರಸಂಗಗಳು , ಉತ್ತರ ರಾಮಾಯಣದ ಕೆಲವು ಪ್ರಸಂಗಗಳು ಯಕ್ಷಗಾನದಲ್ಲಿ ಬಹಳ ಪ್ರಚಲಿತದಲ್ಲಿವೆ. ತೆಂಕು ತಿಟ್ಟಿನ ಯಕ್ಷ ಗಾನ ಎಂದರೆ ಎಲ್ಲರೂ ನಿರೀಕ್ಷಿಸುವುದು ಚೆಂಡೆಯ ಅಬ್ಬರ, ಏರು ಪದ್ಯಗಳು, ದಿಗಿಣ ಇತ್ಯಾದಿಗಳನ್ನು. ಇವೆಲ್ಲವನ್ನೂ ಹೊರತುಪಡಿಸಿ ವಿಶಿಷ್ಟ ಕಥಾಹಂದರವನ್ನು ಹೊಂದಿದ “ಆತ್ಮಾನಂ ಮಾನುಷ ಮನ್ಯೆ’ ಆಳವಾದ ಪರಿಣಾಮ ಬೀರುವಲ್ಲಿ ಯಶಸ್ವಿಯಾಯಿತು. 

ಅನೇಕರು ಇದು ಶುದ್ಧ ಯಕ್ಷಗಾನ ಅಲ್ಲ ಎಂದು ವಾದಿಸಬಹುದು, ಒಪ್ಪೋಣ. ಆದರೆ ಕಲೆಯಲ್ಲಿ ಪ್ರಯೋಗ ತಪ್ಪಲ್ವಲ್ಲ. ಇದರಲ್ಲಿನ ಅನೇಕ ಉತ್ತಮ ಅಂಶಗಳನ್ನು ದೈನಂದಿನ ಪ್ರದರ್ಶನಗಳಲ್ಲಿ ಅಳವಡಿಸಿಕೊಂಡದ್ದೇ ಆದಲ್ಲಿ ಖಂಡಿತವಾಗಿಯೂ ಯಕ್ಷಗಾನ ಎತ್ತರವನ್ನು ಏರುವುದರಲ್ಲಿ ಸಂಶಯವಿಲ್ಲ. ಸುಮಾರು ಆರು ತಾಸುಗಳ ಈ ಪ್ರದರ್ಶನ ಶ್ರೀರಾಮನ ಹೃದಯದ ಮಾತುಗಳಿಗೆ ವೇದಿಕೆಯಾಯಿತು. ತನ್ನೊಂದಿಗಿರುವವರೆಲ್ಲರೂ ತನ್ನನ್ನು “ದೇವರು’ ಎಂದು ಕಾಣುತ್ತಿದ್ದರೂ ತಾನು ಮಾತ್ರ ದೇವರಲ್ಲ, ನಾನು “ಮನುಷ್ಯ’ನೇ ಇದ್ದೇನೆ ಎಂದು ತಿಳಿಸಲು ಮಾಡುವ ಪ್ರಯತ್ನಗಳೇ ಇಡೀ ಪ್ರಸಂಗದ ಹೂರಣ. ಸೀತೆಯನ್ನು ಸ್ವೀಕರಿಸುವಲ್ಲಿ ಒಡ್ಡಿದ ಅಗ್ನಿ ಪರೀಕ್ಷೆ, ಸೀತೆಯನ್ನು ಪರಿತ್ಯಜಿಸಲು ರಾಜಾರಾಮನಾಗಿ ಕೈಗೊಂಡ ನಿರ್ಧಾರ , ನಿರ್ಯಾಣ ಪೂರ್ವದಲ್ಲಿ ಲಕ್ಷ್ಮಣನಿಗೆ ನೀಡಿದ ಶಿಕ್ಷೆಗಳೆಲ್ಲವೂ ತಾನು ಮಾನವನಿದ್ದೇನೆ ಎಂದು ಪ್ರಮಾಣೀಕರಿಸಲೋಸುಗವೇ ಕೈಗೊಂಡ ನಿರ್ಣಯಗಳು ಎನ್ನುವುದನ್ನು ಸ್ಪುಟವಾಗಿ ತೋರಿಸಲಾಯಿತು. ನಾಲ್ವರು ಸಹೋದರರ ಮಧ್ಯೆ ಇರುವ ನಿರ್ಮಲವಾದ ಪ್ರೀತಿ ಅನನ್ಯವಾಗಿ ಪ್ರೇಕ್ಷರೆದುರು ತೆರೆಯಲ್ಪಟ್ಟಿತು. ರಾಮ ನಂದೀಗ್ರಾಮವನ್ನು ತಲುಪಿದಾಗ ಭರತನಿಗಾದ ಆನಂದಾತಿಶಯದ ಭಾವವನ್ನು ಕೈರಂಗಳ ಕೃಷ್ಣ ಮೂಲ್ಯರು ಚೆನ್ನಾಗಿ ಅಭಿನಯಿಸಿದರು. 

ರಾಮ ತನ್ನ ಮೇಲೆ ರಾಜ್ಯಾಧಿಕಾರದ ಕುರಿತಾಗಿ ಶಂಕೆಗೊಂಡ ಎಂಬುದನ್ನರಿತು ಜುಗುಪ್ಸೆಗೊಂಡ ಭರತನನ್ನು ಸುಬ್ರಾಯ ಹೊಳ್ಳರು ಅರ್ಥವತ್ತಾಗಿ ಪ್ರತಿಬಿಂಬಿಸಿದರು. ಸೀತಾ ಪರಿತ್ಯಾಗದ ಸೀತೆಯಾಗಿ ಅರುಣ್‌ ಕೋಟ್ಯಾನ್‌ ನ್ಯಾಯೋಚಿತವಾದ ನಿರ್ವಹಣೆಯನ್ನು ತೋರಿದ್ದಾರೆ. ವಾಲ್ಮೀಕಿ ಆಶ್ರಮದಲ್ಲಿ ಸೀತೆಯನ್ನು ಕಂಡಾಗ ಮಗುವಿನಂತಾಗುವ ಶತ್ರುಘ್ನನ ಪಾತ್ರವನ್ನು ಲಕ್ಷ್ಮಣ ಮರಕಡರವರು ಭಾವಪೂರ್ಣವಾಗಿ ನಿರ್ವಹಿಸಿದರು. ಶ್ರೀರಾಮ ಪಾತ್ರಧಾರಿಗಳಾಗಿ ವಿಷ್ಣು ಶರ್ಮ, ಉಬರಡ್ಕ ಉಮೇಶ ಶೆಟ್ಟಿ, ಸುಣ್ಣಂಬಳ ವಿಶ್ವೇಶ್ವರ ಭಟ್‌ ತಮ್ಮ ಪಕ್ವತೆಯನ್ನು ಸಂಪೂರ್ಣವಾಗಿ ತೆರೆದಿಟ್ಟರು. ಹನುಮಂತನನ್ನು ಪ್ರೇಕ್ಷಕರ ಹೃದಯ ಮಂದಿರದಲ್ಲಿ ಸ್ಥಾಪಿಸುವಲ್ಲಿ ಶಂಭಯ್ಯ ಭಟ್‌ ವಿಶೇಷ ನಿರ್ವಹಣೆ ತೋರಿದರು. ಕೊನೆಯ ಭಾಗದಲ್ಲಿ ಲಕ್ಷ್ಮಣ (ರವಿರಾಜ್‌ ಭಟ್‌ ಪನಿಯಾಲ) ಮತ್ತು ಊರ್ಮಿಳೆ (ಅಂಬಾಪ್ರಸಾದ್‌ ಪಾತಾಳ) ಅಸದೃಶವಾದ ಅಭಿನಯ ನೀಡಿದರು. ಇಡೀ ಪ್ರಸಂಗ ಕಳೆಗಟ್ಟುವಲ್ಲಿ ಅನೇಕ ಅಂಶಗಳನ್ನು ಗುರುತಿಸಬಹುದು. ಪಾತ್ರಗಳಿಗೆ ಸಮರ್ಥ ಕಲಾವಿದರ ಆಯ್ಕೆ, ಅವರನ್ನು ಪರಿಣಾಮಕಾರಿ ಬಳಸಿಕೊಂಡದ್ದು, ರಂಗತಂತ್ರ, ಧ್ವನಿವರ್ಧಕದ ಸಮರ್ಪಕ ಅಳವಡಿಕೆ, ತಾಂತ್ರಿಕವಾಗಿ ಬೆಳಕಿನ ನಿರ್ವಹಣೆ, ಪಾತ್ರಕ್ಕೆ ತಕ್ಕ ಪಾರಂಪರಿಕ ಪ್ರಸಾದನ ಮುಂತಾದವುಗಳು. ಕಪ್ಪು ಬಣ್ಣದ ಹಿಂಪರದೆ ಪಾತ್ರಗಳನ್ನು ಎದ್ದು ಕಾಣಿಸುವಲ್ಲಿ ಸಹಕಾರಿಯಾಗಿತ್ತು. ಇಡೀ ಪ್ರಸಂಗ ಕರುಣಾರಸವನ್ನು ಆಧರಿಸಿದ್ದು, ಒಂದೇ ರಸದಲ್ಲಿ ಆರು ತಾಸುಗಳ ಕಾಲ ಪ್ರೇಕ್ಷಕರನ್ನು ಹಿಡಿದಿಡುವ ಹಿಂದಿನ ಶ್ರಮವನ್ನು ಗಮನಿಸಲೇ ಬೇಕು. ಯಕ್ಷಗಾನ ಪ್ರದರ್ಶನದಲ್ಲಿ ನವೀನತೆಗಳೂ ಅರ್ಥಪೂರ್ಣವಾಗಿ ಮೇಳೈಸಿದರೆ ಸಮಗ್ರ ಕಲೆ ಶ್ರೀಮಂತವಾಗುತ್ತದೆ. 

Advertisement

ಡಾ| ಶ್ರುತಕೀರ್ತಿರಾಜ 

Advertisement

Udayavani is now on Telegram. Click here to join our channel and stay updated with the latest news.

Next