Advertisement

ಜಿಲ್ಲಾಸ್ಪತ್ರೆಗೆ ಸುಸಜ್ಜಿತ ಬಹುಮಹಡಿ ಕಟ್ಟಡ ಪ್ರಸ್ತಾವನೆ ಸಲ್ಲಿಕೆ

11:10 PM Jun 24, 2019 | sudhir |

ಉಡುಪಿ: ಜಿಲ್ಲಾಸ್ಪತ್ರೆಯ ಸುಸಜ್ಜಿತ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಸುಮಾರು 90 ಕೋ.ರೂ. ಪ್ರಸ್ತಾವನೆಯನ್ನು ಜಿಲ್ಲಾಸ್ಪತ್ರೆಯಿಂದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಸಲ್ಲಿಕೆಯಾಗಿದೆ.

Advertisement

ಆರೋಗ್ಯ ಇಲಾಖೆಯ ಎಂಜಿನಿಯರಿಂಗ್‌ ವಿಭಾಗದವರು ಹೊಸ ಕಟ್ಟಡ ರೂಪರೇಖೆಗಳನ್ನು ತಯಾರಿಸಿದ್ದು, ಅದನ್ನು ಸರಕಾರಕ್ಕೆ ಸಲ್ಲಿಸಿ ಆರು ತಿಂಗಳು ಕಳೆದಿವೆ. ಖಾಸಗಿ ಆಸ್ಪತ್ರೆಗಳಿಗೆ ಸರಿಸಮನಾದ ಚಿಕಿತ್ಸೆ ನೀಡಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

1967ರಲ್ಲಿ ಆಸ್ಪತ್ರೆ ನಿರ್ಮಾಣ
ಪ್ರಸ್ತುತ ಅಜ್ಜರಕಾಡುವಿನಲ್ಲಿ ಕಾರ್ಯಚರಿಸುತ್ತಿರುವ ಜಿಲ್ಲಾಸ್ಪತ್ರೆಯ ಹಂಚಿನ ಛಾವಣಿ ಕಟ್ಟಡ 1967ರಲ್ಲಿ ನಿರ್ಮಾಣವಾಗಿತ್ತು. ಆ ಸಂದರ್ಭ ಸುಮಾರು 10 ಎಕರೆ ಜಾಗವನ್ನು ಆಸ್ಪತ್ರೆಗೆ ಮೀಸಲಿಡಲಾಗಿತ್ತು. 2000ನೇ ಇಸವಿ ಅನಂತರ ಆಸ್ಪತ್ರೆಯ ಕಟ್ಟಡ ಹಂತ ಹಂತವಾಗಿ ಅಭಿವೃದ್ಧಿ ಹೊಂದಿದೆ.

1997ರಲ್ಲಿ ಜಿಲ್ಲಾಸ್ಪತ್ರೆಯಾಗಿ ಘೋಷಣೆ
1997ರಲ್ಲಿ ತಾಲೂಕು ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯನ್ನಾಗಿ ಘೋಷಣೆ ಮಾಡಲಾಗಿತ್ತು. ಘೋಷಣೆಯಾದ ಬಳಿಕ ಆಸ್ಪತ್ರೆಯ ಎದುರಿನ ಫ‌ಲಕ, ಕಡತ, ಚೀಟಿಗಳಲ್ಲಿ ಮಾತ್ರ ಜಿಲ್ಲಾಸ್ಪತ್ರೆ ಎನ್ನುವುದಾಗಿ ನಮೂದಿಸಲಾಗಿತ್ತು ಹೊರತು ಆಸ್ಪತ್ರೆಗೆ ಯಾವುದೇ ರೀತಿಯಾದ ಸೌಲಭ್ಯ ದೊರಕಿಲ್ಲ .

ತಾಲೂಕು ಆಸ್ಪತ್ರೆಯಾಗಿದೆ!
2016ರಲ್ಲಿ ಸರಕಾರ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಆದೇಶ ನೀಡಿದರೂ ತಾಲೂಕು ಆಸ್ಪತ್ರೆಯಾಗಿ ಉಳಿದಿದೆ. ಜಿÇÉಾಸ್ಪತ್ರೆಗೆ ಬೇಕಾದ ಸಿಬಂದಿ ಹಂಚಿಕೆಯಾಗಿಲ್ಲ. 60 ದಾದಿಯರು ಬೇಕಿರುವಲ್ಲಿ 30 ಮಂದಿ ಕೆಲಸ ಮಾಡುತ್ತಿದ್ದಾರೆ. 250 ಹಾಸಿಗೆ ಅನುಗುಣವಾಗಿ ವೈದ್ಯರು ನೇಮಕವಾಗಿಲ್ಲ. ಪ್ರಸ್ತುತ 22 ಮಂದಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

ಸೌಲಭ್ಯಗಳು ಏನಿದೆ?
ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ನಾಗರಿಕ ವಾರ್ಡ್‌, ಡಯಾಲಿಸ್‌ ಘಟಕ ಹಾಗೂ 10 ಡಯಾಲಿಸಿಸ್‌ ಯಂತ್ರಗಳು, ಐಸಿಯು ಘಟಕ, 4 ಹಾಸಿಗೆ ಹಿರಿಯ ನಾಗರಿಕರ ಐಸಿಯು, ರಕ್ತ ನಿಧಿ ಕೇಂದ್ರವಿದೆ.

ಸುಸಜ್ಜಿತ ಕಟ್ಟಡಗಳು
ಜಿಲ್ಲಾಸ್ಪತ್ರೆಯ ಪರಿಸರದಲ್ಲಿ 2015ರಲ್ಲಿ ಸುಮಾರು 80 ಲ.ರೂ ವೆಚ್ಚದಲ್ಲಿ
ಬರ್ನ್ಸ್ ವಾರ್ಡ್‌, 2019ರಲ್ಲಿ ಸುಮಾರು 80 ಲ.ರೂ. ವೆಚ್ಚದಲ್ಲಿ ಸುಸಜ್ಜಿತ
ಶವಾಗಾರ, ಶವ ಪರೀಕ್ಷಾ ಕೇಂದ್ರ, 50 ಸೆಂಟ್ಸ್‌ ಜಾಗದಲ್ಲಿ 1.40 ಕೊ.ರೂ. ವೆಚ್ಚದ ಆಯುಷ್‌ ಆಸ್ಪತ್ರೆ ನಿರ್ಮಿಸಲಾಗಿದೆ.

ಹಳೆಯ ಕಟ್ಟಡದ ಸಮಸ್ಯೆ
ಪ್ರಸ್ತುತ ಜಿಲ್ಲಾಸ್ಪತ್ರೆಯ ಕಟ್ಟಡ 1967ರ ವಿನ್ಯಾಸದಲ್ಲಿ ಇದೆ. ಎಲ್ಲಿ ನೋಡಿದರಲ್ಲಿ ಬಾಗಿಲುಗಳು. ಯಾವ ಕಡೆಯಿಂದ ಬಂದು ಹೋಗುತ್ತಾರೆ ಎನ್ನುವುದು ಕಂಡು ಹಿಡಿಯುವುದು ಕಷ್ಟ ಸಾಧ್ಯ.ಇನ್ನೂ ಆಸ್ಪತ್ರೆಯ ಒಂದು
ವಾರ್ಡ್‌ನಲ್ಲಿ 30 ಹಾಸಿಗೆ ಅಳವಡಿಸ ಬಹುದು. ಆಸ್ಪತ್ರೆಯ ಅರ್ಧ ಭಾಗ ಹಂಚಿನ ಹೊದಿಕೆಯಿದೆ. ಕೊಠಡಿಯ ಕಿಟಕಿಗಳು ನೆಲಕ್ಕೆ ಹೊಂದಿಕೊಂಡಿದೆ. ಜಿಲ್ಲಾ ಸರ್ಜನ್‌ ಕೊಠಡಿ ಹಾಗೂ ಆಸ್ಪತ್ರೆ ಕಚೇರಿ ತಾರಸಿ ಛಾವಣೆ ನಿರ್ಮಿಸಲಾಗಿದೆ.

ನಿತ್ಯ 500 ಮಂದಿ ಹೊರರೋಗಿಗಳು ಭೇಟಿ
ನಿತ್ಯ ಬ್ರಹ್ಮಾವರ, ಕೋಟೇಶ್ವರ, ಕುಂದಾಪುರ, ಹೆಬ್ರಿ, ಕಾಪು ತಾಲೂಕಿನಿಂದ ರೋಗಿಗಳು ಇಲ್ಲಿಗೆ ಬರುತ್ತಾರೆ. ಪ್ರತಿದಿನ 500 ರಿಂದ 600 ಹೊರ ರೋಗಿಗಳು ಚಿಕಿತ್ಸೆ ಪಡೆಯಲು ಆಗಮಿಸುತ್ತಾರೆ. ಪ್ರಸ್ತುತ ಒಳರೋಗಿಗಳಾಗಿ 160 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೂರ್ಣ ಮಟ್ಟದಲ್ಲಿ ಮೇಲ್ದರ್ಜೆಗೇರಬೇಕು
ಜಿಲ್ಲಾಸ್ಪತ್ರೆಗೆ ಹೊಸ ಕಟ್ಟಡ ಅಗತ್ಯವಿದೆ. ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೂ ಇನ್ನೂ ವೈದ್ಯಾಧಿಕಾರಿ ಹಾಗೂ ಸಿಬಂದಿ ನೇಮಕವಾಗಿಲ್ಲ. ಪೂರ್ಣ ಮಟ್ಟದಲ್ಲಿ ಮೇಲ್ದರ್ಜೆಗೇರಿದಾಗ ಸಿಬಂದಿ ನೇಮಕದ ಜತೆ ಕಟ್ಟಡವೂ ನಿರ್ಮಾಣಗೊಳ್ಳಲಿದೆ. ಅದಕ್ಕಾಗಿ ಪ್ರಯತ್ನಿಸುತ್ತೇವೆ.
-ರಘುಪತಿ ಭಟ್‌, ಶಾಸಕರು, ಉಡುಪಿ.

ಪ್ರಸ್ತಾವನೆ ಸಲ್ಲಿಸಲಾಗಿದೆ.
ಅನೇಕ ವರ್ಷಗಳಿಂದ ಕಟ್ಟಡವನ್ನು ನವೀಕರಣ ಮಾಡಲಾಗುತ್ತಿದೆ. ಈಗಾಗಲೆ ಜಿಲ್ಲಾಸ್ಪತ್ರೆಯಿಂದ ಆರೋಗ್ಯ ಇಲಾಖೆಯ ಆಯುಕ್ತರಿಗೆ ಬಹುಮಹಡಿ ಕಟ್ಟಡ ನಿರ್ಮಾಣ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ.
-ಡಾ| ಮಧುಸೂದನ್‌ ನಾಯಕ್‌, ಜಿಲ್ಲಾ ಸರ್ಜನ್‌, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next