Advertisement

ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ: ವರ್ಷದೊಳಗೆ ಗಾಂಧಿ ಭವನ ಪೂರ್ಣ: ಸಿಎಂ

12:03 AM Oct 03, 2022 | Team Udayavani |

ಬೆಂಗಳೂರು: ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನ ನಿರ್ಮಾಣ ಯೋಜನೆಯು 23 ಜಿಲ್ಲೆಗಳಲ್ಲಿ ಪೂರ್ಣಗೊಂಡಿದ್ದು, ಬಾಕಿ ಇರುವ 7 ಜಿಲ್ಲೆಗಳಲ್ಲಿ ಮುಂದಿನ ಒಂದು ವರ್ಷದೊಳಗೆ ಪೂರ್ಣ ಗೊಳಿಸಲಾಗುತ್ತದೆ. ಯೋಜನೆಗೆ ಅವಶ್ಯವಿರುವ ಜಾಗ ಮತ್ತು ಅನುದಾನವನ್ನು ಕಲ್ಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

Advertisement

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಕುಮಾರ ಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ಟ್ರಸ್ಟ್‌ ರವಿವಾರ ಆಯೋ ಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ “ಮಹಾತ್ಮಾ
ಗಾಂಧಿ ಸೇವಾ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಖಾದಿ ಬಗ್ಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತದೆ. ಗ್ರಾಮೀಣ ಕೈಗಾರಿಕೆಗಳು ಮತ್ತು ಖಾದಿ ಕೈಗಾರಿಕೆಗಳಿಗೆ ವಿಶೇಷ ಸವಲತ್ತು ಕಲ್ಪಿಸಲಾಗುತ್ತದೆ. ಮೌಲ್ಯಯುತ ಮಾರುಕಟ್ಟೆಯನ್ನು ಕಲ್ಪಿಸಿ ಖಾದಿ ಮತ್ತೊಮ್ಮೆ ಮುಂಚೂಣಿಗೆ ಬರುವಂತೆ ಮಾಡುವುದು ಮತ್ತು ದುಡಿಯುವ ವರ್ಗಕ್ಕೆ ಕೆಲಸ ನೀಡುವುದು ಸರಕಾರದ ಆದ್ಯತೆಯಾಗಿದೆ ಎಂದರು.

ಸರಕಾರವು ತಂತ್ರಜ್ಞಾನವನ್ನು ಹಳ್ಳಿಗಳಿಗೆ ತಲುಪಿಸುವ ಕೆಲಸ ಮಾಡು ತ್ತಿದೆ. ಹಲವಾರು ಯೋಜನೆಗಳ ಸೌಲಭ್ಯ
ಗಳು ಗ್ರಾಮ ಪಂಚಾಯತ್‌ನಲ್ಲಿಯೇ ದೊರೆಯುವಂತೆ ಮಾಡಲಾಗಿದೆ. ಅಮೃತ ಗ್ರಾಮ ಪಂಚಾಯತ್‌ ಹೆಸರಿನಲ್ಲಿ ಸ್ವಚ್ಛತೆ ಸಹಿತ ಇನ್ನಿತರ ಅಭಿವೃದ್ಧಿ ಮಾಡುವವರಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಗಾಂಧಿ ಚಿಂತನೆ, ಗ್ರಾಮ ಸ್ವರಾಜ್ಯ ವಿಚಾರಗಳ ಯೋಜನೆ ಯಶಸ್ವಿಗೊಳಿಸಲು ಸ್ಥಳೀಯ ನಾಯಕರಿಗೆ ತರಬೇತಿ ನೀಡುವ ಅಗತ್ಯ ಇದೆ ಎಂದರು.

ಮಾಜಿ ಸಚಿವ ಎಚ್‌.ಕೆ. ಪಾಟೀಲ್‌ ಮಾತನಾಡಿ, ಗ್ರಾಮೀಣ ಭಾರತ ಮತ್ತು ಗ್ರಾಮ ಸ್ವರಾಜ್ಯ ಗಾಂಧೀಜಿಯವರ ಕನಸಾಗಿತ್ತು. ಅದನ್ನು ಸಾಕಾರಗೊಳ್ಳುವುದಕ್ಕಾಗಿ ಪಂಚಾಯತ್‌ ರಾಜ್‌ ಇಲಾಖೆ ಮತ್ತು ಕಾನೂನು ಗಳನ್ನು ಜಾರಿಗೊಳಿಸಲಾಗಿದೆ. ಗಾಂಧೀಜಿಯವರ ಕಲ್ಪನೆಯನ್ನು ಸಾಕಾರಗೊಳಿಸಲು ಆಡಳಿತಶಾಹಿ ಮತ್ತು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎಂದು ಹೇಳಿದರು.

Advertisement

ಸಚಿವರಾದ ಗೋವಿಂದ ಕಾರ ಜೋಳ, ಆರಗ ಜ್ಞಾನೇಂದ್ರ, ಎಂಟಿಬಿ ನಾಗರಾಜ್‌, ಸಂಸದ ಎಲ್‌. ಹನುಮಂತಯ್ಯ, ಶಾಸಕ ಪಿ. ರಾಜೀವ್‌, ವಾರ್ತಾ ಇಲಾಖೆ ಆಯುಕ್ತ ಡಾ| ಪಿ.ಎಸ್‌. ಹರ್ಷ ಮುಂತಾದವರಿದ್ದರು.

ಖಾದಿ ಜುಬ್ಟಾ, ಅಂಗಿ ಖರೀದಿಸಿದ ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದ ಬಳಿಕ ಖಾದಿ ಮಳಿಗೆಗೆ ಭೇಟಿ ನೀಡಿ ವಸ್ತ್ರಗಳನ್ನು ಖರೀದಿಸಿದರು. 2 ಪ್ಯಾಂಟ್‌, 6 ಅಂಗಿಗಳು, ಒಂದು ಡಜನ್‌ ಕರವಸ್ತ್ರಗಳು ಹಾಗೂ 4 ಜುಬ್ಟಾಗಳನ್ನು ಕೊಂಡುಕೊಂಡರು.

ಪ್ರಶಸ್ತಿ ಮೊತ್ತ ನಿಮ್ಹಾನ್ಸ್‌ಗೆ
ಗಾಂಧಿ ಸೇವಾ ಪ್ರಶಸ್ತಿ ಪುರಸ್ಕಾ ರದ 5 ಲಕ್ಷ ರೂ., ಪತ್ನಿ ಹೆಸರಲ್ಲಿ ರುವ 1.9 ಕೋಟಿ ರೂ. ಹಾಗೂ ಮನೆಯನ್ನು ನಿಮ್ಹಾನ್ಸ್‌ಗೆ ದಾನವಾಗಿ ನೀಡಲಾಗುವುದು ಎಂದು ನಿಮ್ಹಾನ್ಸ್‌ನ ನಿವೃತ್ತ ವೈದ್ಯ ಡಾ| ಸಿ.ಆರ್‌. ಚಂದ್ರಶೇಖರ್‌ ತಿಳಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ದೇಶದಲ್ಲಿ ಇಂದಿಗೂ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಲಾಗುತ್ತಿದೆ. ಶಾಲಾ- ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next