ಸೈನಿಕರ ದಂಗೆ, ಓಡಾಟ, ರಾಣಿಯ ಮನೋವೇದನೆ, ಗ್ರೂಷಾಳಿಗೆ ಮಗುವಿನ ಬಗ್ಗೆ ಇರುವ ಕಳಕಳಿ, ಚಡಪಡಿಕೆ, ಬ್ರಿಡ್ಜ್ನಲ್ಲಿ ಓಡಿ ಹೋಗುವ ಸನ್ನಿವೇಶ ಇನ್ನೊಂದು ಕಡೆಯಲ್ಲಿ ಅಟ್ಟಿಸಿಕೊಂಡು ಬರುವ ಸೈನಿಕರು, ಅಜವಾಕ್‌ನ ತಂತ್ರಗಾರಿಕೆ ನಾಟಕೀಯವಾಗಿ ಸೊಗಸಾಗಿ ಮೂಡಿಬಂತು.
ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಉದ್ಯಾವರ ಇತ್ತೀಚೆಗೆ ವಾಸುದೇವ ಹೆಗ್ಡೆ ವಿದ್ಯಾರಂಗ ಮಂಟಪದಲ್ಲಿ “ವರ್ಷದ ಹರ್ಷ – 158’ರ ವಾರ್ಷಿಕೋತ್ಸವದ ಗಮ್ಮತ್ತಿನಲ್ಲಿ “ಸುಣ್ಣದ ಸುತ್ತು’ ಎನ್ನುವ ನಾಟಕ ರಂಗೇರಿತು. ಜಗತ್ತಿನ ಮಹಾನ್ ನಾಟಕಕಾರ “ಬ್ರಟೋಲ್ಟ್ ಬ್ರಿಕ್ಟ್’ನ ನಾಟಕ “ಕಕೇಸಿಯನ್ ಚಾಕ್ ಸರ್ಕಲ್’ ಕನ್ನಡ ರೂಪಾಂತರಿಸಿ ಮಕ್ಕಳ ನಾಟಕವನ್ನಾಗಿ ಮಾಡಿದವರು ಡಾ| ಎಚ್.ಎಸ್. ವೆಂಕಟೇಶ್ವರ ಮೂರ್ತಿ. ಗ್ರಾಮೀಣ ಪ್ರದೇಶ ಮಕ್ಕಳು ಲೀಲಾಜಾಲವಾಗಿ ಇದನ್ನು ಪ್ರಸ್ತುತ ಪಡಿಸಿದ ರೀತಿ ಚಕಿತಗೊಳಿಸುತ್ತದೆ.
ಈ ನಾಟಕ ಹಾಡು ಕುಣಿತದಿಂದ ಪ್ರಾರಂಭವಾಗುತ್ತದೆ. ದೇವದತ್ತ ಮತ್ತು ಸಿದ್ಧಾರ್ಥ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗಿದೆ. ದೇವದತ್ತ ಬಿಟ್ಟ ಬಾಣ ತಾಗಿ ಹಂಸ ಗಾಯಗೊಳ್ಳುತ್ತದೆ. ಸಿದ್ಧಾರ್ಥ ಆರೈಕೆ ಮಾಡುತ್ತಾನೆ. ದೇವದತ್ತ ಇದು ನನ್ನ ಹಂಸ ಎಂದು ಹಕ್ಕು ಸ್ಥಾಪಿಸುತ್ತಾನೆ. ಸಿದ್ಧಾರ್ಥ ನನ್ನದೆನ್ನುತ್ತಾನೆ. ಮಾಸ್ತರು ಮಧ್ಯ ಪ್ರವೇಶಿಸಿ ಈ ಹಕ್ಕು ಯಾರದ್ದು ಎನ್ನುವುದನ್ನು ನಿರ್ಧರಿಸಲು ಒಂದು ಕತೆ ಹೇಳುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಈ “ಸುಣ್ಣದ ಸುತ್ತು’ ಎನ್ನುವ ಕಥೆಯನ್ನು ಹೇಳುತ್ತಾರೆ.
ಕಕೇಸಿಯಾ ಎಂಬ ನಗರದಲ್ಲಿ ಮರಿ ದೊರೆ ದಂಗೆ ಎದ್ದು ದೊರೆಯನ್ನು ಕೊಲ್ಲುತ್ತಾನೆ. ರಾಣಿ ಸಖೀ ಮತ್ತು ಸಂಗಡಿಗರ ಜತೆ ಓಡಿ ಹೋಗುವಾಗ ತನ್ನ ಒಡವೆಯನ್ನು ಕೊಂಡೊಯ್ದು ಮಗುವನ್ನು ಬಿಟ್ಟು ಹೋಗುತ್ತಾಳೆ.ದಾಸಿ ಗ್ರೂಷಾ ಪ್ರಾಣಾಪಾಯವನ್ನು ಲೆಕ್ಕಿಸದೆ ಮಗುವನ್ನು ರಕ್ಷಿಸುತ್ತಾಳೆ. ಅವಳ ಪ್ರಿಯಕರ ಸೈಮಾನ್ ರಾಣಿಯ ರಕ್ಷಣೆಗೆ ಆಕೆಯೊಂದಿಗಿರುತ್ತಾನೆ. ಓಡಿ ಹೋದ ದಾಸಿ ತನ್ನ ಅಣ್ಣನ ರಕ್ಷಣೆಯಲ್ಲಿರುತ್ತಾಳೆ. ಮುಂದೊಂದು ದಿನ ದಂಗೆ ನಿಂತು ರಾಣಿ ವಾಪಾಸಾಗುತ್ತಾಳೆ, ಸೈನಿಕರು ಮಗುವನ್ನು ಕೊಲ್ಲುವ ತಂತ್ರದಲ್ಲಿರುತ್ತಾರೆ. ರಾಣಿ ಗ್ರೂಷಾಳನ್ನು ಪತ್ತೆ ಮಾಡಿ ಮಗು ತನ್ನದೆಂದು ಹಕ್ಕು ಸ್ಥಾಪಿಸುತ್ತಾಳೆ. ಕೊನೆಗೆ ವಿವಾದ ಕೋರ್ಟು ಮೆಟ್ಟಲೇರುತ್ತದೆ. ನ್ಯಾಯಾಧೀಶ ಅಜದಾತ್‌ಗೆ ಪ್ರಕರಣ ಬಗೆಹರಿಸಲಾಗುವುದಿಲ್ಲ. ಗುಮಾಸ್ತನಿಂದ ಚಾಕ್‌ಪೀಸ್ ತರಿಸಿ ವೃತ್ತ ರಚಿಸಿ, ಮಗುವಿನ ಒಂದು ಕೈ ರಾಣಿಗೆ ಮತ್ತೂಂದು ಕೈ ಗ್ರೂಷಾಳಿಗೆ ನೀಡಿ ಎಳೆಯಲು ಹೇಳುತ್ತಾನೆ. ಮಗುವಿನ ನೋವಿಗೆ ನೋಯುವವಳೇ ನಿಜವಾದ ತಾಯಿ ಎಂದು ಘೋಷಿಸಿ ಮಗು ಗ್ರೂಷಾಳದ್ದು ಎಂದು ತೀರ್ಮಾನ ಕೊಡುತ್ತಾನೆ.
ಮೊದಲಿಗೆ ದೇವದತ್ತ ಸಿದ್ಧಾರ್ಥ ಪ್ರಕರಣವು ಹಾಡು ನೃತ್ಯದೊಂದಿಗೆ ಅದಕೊಪ್ಪುವ ಬೆಳಕಿನ ವಿನ್ಯಾಸದೊಂದಿಗೆ ಆಕರ್ಷಕವಾಗಿ ಮೂಡಿಬಂತು. ಸೈನಿಕರ ದಂಗೆ, ಓಡಾಟ, ರಾಣಿಯ ಮನೋವೇದನೆ, ದಾಸಿ ಗ್ರೂಷಾಳ ಮಗುವಿನ ಬಗ್ಗೆ ಇರುವ ಕಳಕಳಿ, ಚಡಪಡಿಕೆ, ದಾಸಿ ಗೂಷಾ ಬ್ರಿಡ್ಜ್ನಲ್ಲಿ ಓಡಿ ಹೋಗುವ ಸನ್ನಿವೇಶ ಇನ್ನೊಂದು ಕಡೆಯಲ್ಲಿ ಅಟ್ಟಿಸಿಕೊಂಡು ಬರುವ ಸೈನಿಕರು, ಅಜವಾಕ್‌ನ ತಂತ್ರಗಾರಿಕೆ, ಎಲ್ಲವೂ ನಾಟಕೀಯವಾಗಿ ಸೊಗಸಾಗಿ ಮೂಡಿಬಂತು. ಪುಟ ತಿರುವಿದಂತೆ ಒಂದಾದ ನಂತರ ಮತ್ತೂಂದು ಬರುತ್ತಲೇ ಇತ್ತು.
ಗ್ರೂಷಾಳಾಗಿ ಅಫಿಯಾ ಬಾನು, ಸೈಮನ್‌ನಾಗಿ ಸಮರ್ಥ ಸಿ. ಎಸ್., ರಾಣಿಯಾಗಿ ಖುಷಿ, ಅಜವಾಕ್ – ವಿವೇಕ ಕುಮಾರ್, ಸೇನಾನಿ – ಪೂರ್ಣೇಶ್ , ತುಕಡಿ ನಾಯಕ – ಮಂಜು, ಸೈನಿಕರು – ಮಂಜುನಾಥ ಮತ್ತು ವಿಜಯ, ಮರಿ ದೊರೆಯಾಗಿ ಅಭಿಲಾಷ್, ದೊರೆಯಾಗಿ -ಲವೀಶ್ ಪಾತ್ರವನ್ನು ಚೆನ್ನಾಗಿ ಪೋಷಿಸಿದರು.
ನಾಟಕಕ್ಕೆ ಪೂರಕವಾಗಿ ಸಂಗೀತ ಸಂಯೋಜನೆ ಮನೋರಂಜಕವಾಗಿತ್ತು. ಬೆಳಕಿನ ಸಂಯೋಜನೆ ಪೂರಕವಾಗಿ ನಾಟಕದ ಗೆಲುವಿಗೆ ಮುಖ್ಯ ಪಾತ್ರವಾಯಿತು.
ಜಯರಾಂ ನೀಲಾವರ