Advertisement

ಅಪರೂಪದ ಪೌರಾಣಿಕ ಕಥಾನಕ ಪಾವನ ಪಕ್ಷಿ

01:05 AM Jan 03, 2020 | mahesh |

ತೆರೆ ಒಡ್ಡೋಲಗ, ಪಯಣ ಕುಣಿತ, ಯುದ್ಧ ಕುಣಿತ, ತಟ್ಟಿ ಕಟ್ಟಿದ ಬಣ್ಣದ ವೇಷ ಹೀಗೆ ನಿರ್ದೇಶಕರ ಜಾಣ್ಮೆ ಪ್ರೇಕ್ಷಕರನ್ನು ತಟ್ಟಿತು. ಸಂಪಾತಿ ಮತ್ತು ಜಟಾಯು ಒಡ್ಡೋಲಗದಿಂದ ಪ್ರಸಂಗ ಆರಂಭವಾಗುತ್ತದೆ. ಸಂಪಾತಿಗೆ ಜಟಾಯು ಮಡಿದ ವಿಚಾರವನ್ನು ಇಲ್ಲಿ ವಿಶೇಷ ರಂಗ ತಂತ್ರ ಬಳಸಿ, ಫ್ಲಾಶ್‌ಬ್ಯಾಕ್‌ ಪ್ರಯೋಗದಲ್ಲಿ ಕಾಣಿಸಿದ್ದು ಪರಿಣಾಮ ಕಾರಿಯಾಗಿದೆ.

Advertisement

ಸಾಧನೆಯ ಛಲ, ಬ್ರಾತೃ ಪ್ರೇಮ, ಪರೋಪಕಾರ ಮತ್ತು ಸ್ವಾಮಿ ನಿಷ್ಠೆಯ ಮೌಲ್ಯವವನ್ನು ಸಾರುವ ಪುರಾಣ ಯಕ್ಷ ಕೃತಿ ಪಾವನ ಪಕ್ಷಿ. ಇತ್ತೀಚೆಗೆ ಚೇತನ ಪ್ರೌಢಶಾಲೆ ಹಂಗಾರಕಟ್ಟೆ ಇಲ್ಲಿನ ವಿದ್ಯಾರ್ಥಿಗಳು ಈ ಕಥಾನಕವನ್ನು ಅಭಿನಯಿಸಿ ಭೇಷ್‌ ಎನಿಸಿಕೊಂಡರು.

ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು ರಚಿಸಿದ ವೈವಿಧ್ಯಮಯ ಪಾತ್ರಗಳನ್ನು ಹೊಂದಿರುವ ಪ್ರಸಂಗ ಇದಾಗಿದೆ. ಸೂರ್ಯದೇವನ ಸಾರಥಿಯಾದ ಅರುಣ ಸುತರಾದ ಸಂಪಾತಿ ಮತ್ತು ಜಟಾಯು ಎಂಬ ಪಕ್ಷಿ ಕುಲದ ಸಹೋದರರು ಅಕಾಶಕ್ಕೆ ಜಿಗಿಯುವುದಕ್ಕೆ ತಾಯಿ ಶೇನಿದೇವಿಯಿಂದ ಅಪ್ಪಣೆ ಪಡೆಯುತ್ತಾರೆ. ಸೂರ್ಯನ ರಥದಲ್ಲಿರುವ ತಂದೆಯನ್ನು ಸೂರ್ಯಾಸ್ತಮಾನದ ಒಳಗೆ ಯಾರು ಬೇಗ ಹೋಗಿ ನೋಡುತ್ತಾರೋ ಅವರು ಗೆದ್ದವರು ಎಂಬ ಪಂಥಕ್ಕೆ ಒಳಗಾಗಿ ಶರವೇಗದಿಂದ ಮೇಲೆ ಹಾರುತ್ತಾರೆ. ಅಣ್ಣನಿಗಿಂತ ವೇಗವಾಗಿ ಜಟಾಯು ಆಕಾಶ ಮಂಡಲದಲ್ಲಿ ಚಲಿಸುತ್ತಾನೆ. ಆಕಾಶದಲ್ಲಿ ಸೂರ್ಯನ ಪ್ರಖರ ಪ್ರಭೆಯ ತೀವ್ರತೆಯನ್ನು ತಿಳಿದ ಅಣ್ಣ ಸಂಪಾತಿಯು ಇನ್ನು ಮೇಲೆ ಹಾರಿದರೆ ತನ್ನ ತಮ್ಮನಿಗೆ ತೊಂದರೆಯಾಗಬಹುದು ಎಂದು ತಾನೇ ಅವನಿಗಿಂತ ಮೇಲೆ ಹಾರಿ ತನ್ನ ವಿಶಾಲವಾದ ರೆಕ್ಕೆಯನ್ನು ತಮ್ಮನಿಗೆ ನೆರಳಾಗಿಸುತ್ತಾನೆ. ಆಗ ಸುಡುವ ಸೂರ್ಯನ ಜ್ವಾಲೆ ಸಂಪಾತಿಯ ಎರಡು ರೆಕ್ಕೆಗಳನ್ನು ಸುಟ್ಟು ಕರಕಲಾಗಿಸುತ್ತದೆ. ಸಂಪಾತಿ ರೆಕ್ಕೆ ಕಳೆದುಕೊಂಡು ಹಾರಲಾರದೆ ಎಲ್ಲೋ ಬಿದ್ದು ಬಿಡುತ್ತಾನೆ. ಅಣ್ಣ ಆಕಾಶ ಮಂಡಲದಲ್ಲಿ ಇಲ್ಲದಿರುವುದನ್ನು ಗಮನಿಸಿದ ಜಟಾಯು ಎಲ್ಲೋ ಹಾರಿ ಉಳಿಯುತ್ತಾನೆ. ಅಣ್ಣ ತಮ್ಮಂದಿರು ಬೇರೆಬೇರೆಯಾಗುತ್ತಾರೆ. ಭೂಮಿಗುರುಳಿದ ಸಂಪಾತಿಯು ನಿಶಾಚರ ಮುನಿಯ ಆಶ್ರಮದಲ್ಲಿ ಆಶ್ರಯ ಪಡೆಯುತ್ತಾನೆ.ಸೀತಾನ್ವೇಷಣೆಗೆಗಾಗಿ ಬಂದ ಹನುಮಂತ, ಜಾಂಬವ, ಅಂಗದ, ನೀಲ, ಗವಯ, ಗಂಧಮಾಧವ ಮೊದಲಾದ ವಾನರವೀರರು ಸೀತೆಯನ್ನು ಅರಸಲಾಗದ ದುಃಖದಲ್ಲಿ ಕುಳಿತಿರುವಾಗ ಸಂಪಾತಿ ಬಂದು ಅವರಲ್ಲಿ ದುಃಖದ ಕಾರಣ ತಿಳಿಯುತ್ತಾನೆ. ಈಗಾಗಲೇ ಜಟಾಯು ರಾವಣನಿಂದ ಮಡಿದ ಸಂಗತಿಯನ್ನು ತಿಳಿದು ಸಂಪಾತಿ ದುಃಖೀತನಾಗುತ್ತಾನೆ. ಕಪಿ ನಾಯಕರು ಜಟಾಯು ಮಡಿದ ವಾರ್ತೆಯನ್ನು ಕಥನರೂಪದಲ್ಲಿ ವಿವರಿಸುತ್ತಾರೆ.

ಸೀತಾಪಹಾರ ಸಂದರ್ಭದಲ್ಲಿ ರಾವಣನೊಡನೆ ಹೋರಾಡಿದ ಜಟಾಯು ವರದ ಪ್ರಭಾವದಿಂದ ಅರ್ಧ ಜೀವ ಉಳಿಸಿಕೊಂಡು ರಾಮನ ದರ್ಶನ ಪಡೆದು ನಡೆದ ವಿದ್ಯಮಾನ ತಿಳಿಸಿ, ರಾಮನಿಂದ ಪಾವನನಾಗುತ್ತಾನೆ. ಮೋಕ್ಷ ಪಡೆಯುತ್ತಾನೆ.

ಕಪಿ ನಾಯಕರ ಬಾಯಿಯಿಂದ ಈ ಕತೆಯನ್ನು ಕೇಳುತ್ತಿದ್ದಂತೆ ಸೂರ್ಯನುರಿಯಲ್ಲಿ ಬೆಂದುಹೋದ ಸಂಪಾತಿಯ ರೆಕ್ಕೆಗಳು ಮತ್ತೆ ಚಿಗುರುತ್ತದೆ. ಶ್ರೀರಾಮ ಚರಿತ್ರೆಯನ್ನು ಕೇಳಿ ಮೊದಲಿನ ರೆಕ್ಕೆ ಪಡೆದ ಸಂಪಾತಿ ಸಂತೋಷಭರಿತನಾಗಿ ಕಪಿ ವೀರರನ್ನೆಲ್ಲ ತನ್ನ ರೆಕ್ಕೆಯಲ್ಲಿ ಕುಳಿರಿಸಿಕೊಂಡು ಸಾಗರದ ತಡಿಗೆ ಬರುತ್ತಾನೆ. ಲಂಕಾ ಪಟ್ಟಣವನ್ನು ತೋರಿಸುತ್ತಾನೆ. ಅಳಿದ ಜಟಾಯುವಿಗೆ ತರ್ಪಣ ಕೊಟ್ಟು ಸೀತಾನ್ವೇಷಣೆಯಲ್ಲಿ ಸಹಕರಿಸುತ್ತಾನೆ.

Advertisement

ಕುತೂಹಲಕಾರಿ ಸನ್ನಿವೇಶಗಳು, ಬಣ್ಣಗಾರಿಕೆಗೆ ವಿಶೇಷ ಅವಕಾಶಗಳನ್ನು ಹೊಂದಿ ವೈವಿಧ್ಯಮಯ ವೇಷಗಾರಿಕೆಯನ್ನು ಹೊಂದಿರುವ ಕೃತಿ ಇದು. ಪ್ರತೀಶ್‌ ಕುಮಾರ್‌ ಬ್ರಹ್ಮಾವರ ಈ ಪ್ರಸಂಗವನ್ನು ಕಲಾತ್ಮಕವಾಗಿ ನಿರ್ದೇಶನ ಮಾಡಿ ವಿದ್ಯಾರ್ಥಿಗಳನ್ನು ನೇರ್ಪುಗೊಳಿಸಿದ್ದಾರೆ. ತೆರೆ ಒಡ್ಡೋಲಗ, ಪಯಣ ಕುಣಿತ, ಯುದ್ಧ ಕುಣಿತ, ತಟ್ಟಿ ಕಟ್ಟಿದ ಬಣ್ಣದ ವೇಷ ಹೀಗೆ ನಿರ್ದೇಶಕರ ಜಾಣ್ಮೆ ಪ್ರೇಕ್ಷಕರನ್ನು ತಟ್ಟಿತು. ಸಂಪಾತಿ ಮತ್ತು ಜಟಾಯು ಒಡ್ಡೋಲಗದಿಂದ ಪ್ರಸಂಗ ಆರಂಭವಾಗುತ್ತದೆ. ಸಂಪಾತಿಗೆ ಜಟಾಯು ಮಡಿದ ವಿಚಾರವನ್ನು ಇಲ್ಲಿ ವಿಶೇಷ‌ ರಂಗ ತಂತ್ರ ಬಳಸಿ, ಫ್ಲಾಶ್‌ಬ್ಯಾಕ್‌ ಪ್ರಯೋಗದಲ್ಲಿ ಕಾಣಿಸಿದ್ದು ಪರಿಣಾಮಕಾರಿಯಾಗಿದೆ.

ಜಟಾಯುವಾಗಿ ಶರಣ್ಯಾ ಪಿ. ಚುರುಕಿನ ನಡೆ, ಹೆಜ್ಜೆಗಾರಿಕೆಯಲ್ಲಿ ಗಮನ ಸಳೆದರೆ. ನಿಖೀತಾ ಕೂಡಾ ಉತ್ತಮ ನಿರ್ವಹಣೆಯ ಮೂಲಕ ಪಾತ್ರವನ್ನು ಜೀವಂತವಾಗಿರಿಸಿದರು. ಸಂಪಾತಿಯಾಗಿ ಸುಚಿತ್ರಾ, ಅಖೀಲ್‌ ಉತ್ತಮ ಅಭಿನಯ, ಮಾತುಗಾರಿಕೆ, ಶ್ರೀರಾಮ ಚರಿತೆ ಕೇಳುವ ಸಂದರ್ಭಗಳನ್ನು ಅರ್ಥಪೂರ್ಣವಾಗಿಸಿದರು. ಶೇನಿದೇವಿಯಾಗಿ ಸ್ಪಂದನಾ, ಶ್ರೀರಾಮನಾಗಿ ಆಶ್ರಿಕಾ, ಲಕ್ಷ್ಮಣನಾಗಿ ಪ್ರತೀûಾ ಶ್ರೀಯಾನ್‌, ಸೀತೆಯಾಗಿ ಶರಣ್ಯಾ ಎಂ., ಹನುಮಂತನಾಗಿ ಶ್ರವಂತ್‌, ನಿಶಾಚರನಾಗಿ ಸಾತ್ವಿಕ್‌, ನೀಲನಾಗಿ ಸಂಕೇತ್‌, ಗವಯನಾಗಿ ಭೂಮಿಕಾ, ನಳನಾಗಿ ತ್ರಿಶಾ, ಅಂಗದನಾಗಿ ಪ್ರಸಾದ್‌, ಗಂಧಮಾದವ ಅಜಿತ್‌, ಜಾಂಬವ ತನುಷ್‌, ರಾವಣನಾಗಿ ಶ್ರೀಶ, ಕಪಿವೀರನಾಗಿ ಅನಿರುದ್ಧ, ಸನ್ಯಾಸಿ ರಾವಣನಾಗಿ ಅಮಿಷ ಉತ್ತಮ ಅಭಿನಯ ತೋರಿದರು.

ಹಿಮ್ಮೇಳದಲ್ಲಿ ಭಾಗವತರಾದ ಎಂ.ಎಚ್‌.ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು ಮತ್ತು ಶಂಕರ ಬಾಳುRದ್ರು ಅವರ ದ್ವಂದ್ವ ಭಾಗವತಿಕೆ ಸೊಗಸಾಗಿತ್ತು. ಭಾಮಿನಿಯಲ್ಲಿ ಮೂಡಿಬಂದ ಅನುಜಾತ ಮರಣಿಸಿದ, ವರ ಸಹೋದರಗೆ ಇತ್ತು, ದಿವಿಜ ಲೋಕಕೆ| ಸಂದ ಪಕ್ಷಿಯು ಪದ್ಯಗಳು ಯಕ್ಷ ಸಾಹಿತ್ಯದ ಪರಂಪರೆಯನ್ನು ಮೇಳೈಸಿದರೆ, ಅಣ್ಣಯ್ಯ ನೀನೆಂದ ನುಡಿಯಂತೆ, ಲಲನೆ ಶೇನಿಯು, ಕಾಲಿ ನಂದನ ಜಾಂಬವ ಅಂಗದ, ಅರುಣ ತರಳನು ನರಳುವ, ಆಸೆ ಅಪರಾಧವಲ್ಲ|, ಪಕ್ಷಿ ವೀರನೆ ವರವಿದುವೆ| ಇತ್ಯಾದಿ ಪದ್ಯಗಳು ಮತ್ತೆ ಮತ್ತೆ ಕೇಳುವಂತಿದ್ದವು. ಮದ್ದಳೆಯಲ್ಲಿ ದೇವದಾಸ್‌ ರಾವ್‌ ಕೂಡ್ಲಿ, ಚಂಡೆಯಲ್ಲಿ ಕೃಷ್ಣಾನಂದ ಶೆಣೈ ಸಹಕರಿಸಿದರು.

ನಾಗರಾಜ ಬಳಗೇರಿ

Advertisement

Udayavani is now on Telegram. Click here to join our channel and stay updated with the latest news.

Next