ಚಿಕ್ಕೋಡಿ: ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರುಪ್ ವತಿಯಿಂದ ನಡೆಯುವ 11ನೇ ವರ್ಷದ ಪ್ರೇರಣಾ ಉತ್ಸವ ಡಿ.31 ರಿಂದ ಜ.3 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷ ಬಸವ ಪ್ರಸಾದ ಜೊಲ್ಲೆ ತಿಳಿಸಿದರು.
ಶನಿವಾರ ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಗ್ರುಪ್ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜೊಲ್ಲೆ ಗ್ರುಪ್ ಪ್ರೇರಣಾ ಶಕ್ತಿ ಜ್ಯೋತಿಪ್ರಸಾದ ಜೊಲ್ಲೆ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಪ್ರೇರಣಾ ಉತ್ಸವ ನಡೆಯುತ್ತದೆ. ಆದರೆ ಕಳೆದ ಎರಡು ವರ್ಷ ಕೊರೊನಾ ಹಿನ್ನಲ್ಲೆಯಲ್ಲಿ ಸಂಕ್ಷೀಪ್ತವಾಗಿ ಉತ್ಸವ ಮಾಡಲಾಗಿತ್ತು. ಈ ವರ್ಷ ನಾಲ್ಕು ದಿನಗಳ ಅದ್ದೂರಿಯಾಗಿ ಪ್ರೇರಣಾ ಉತ್ಸವ ನಡೆಯಲಿದೆ ಎಂದರು.
ಶನಿವಾರ ದಿ.31 ರಂದು ಮುಂಜಾನೆ 7 ಗಂಟೆಗೆ ಸಾಮೂಹಿಕ ಗುಗ್ಗಳೋತ್ಸವ ನಡೆಯಲಿದೆ. ಇದು ಯಕ್ಸಂಬಾ ಮಹಾದೇವ ಮಂದಿರದಿಂದ ಶ್ರೀ ಜ್ಯೋತಿಬಾ ಮಂದಿರ ನಣದಿ ಕ್ಯಾಂಪಸವರೆಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಶ್ರೀ ಜ್ಯೋತಿಬಾ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.
ಪ್ರೇರಣಾ ಉತ್ಸವ ಅಂಗವಾಗಿ ಭಜನ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ, ಮಹಿಳಾ ಸಬಲೀಕರಣ, ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ, ಕ್ರಾಪ್ಟ, ಸಮೂಹ ಗೀತೆ, ಭಾಷಣ, ಮಗ್ಗಿ ಕಂಠಪಾಠ, ವಚನ ಕಂಠಪಾಠ, ಮಹಿಳೆಯರಿಗಾಗಿ ರಂಗೋಲಿ, ಪಾಕಕ್ರಿಯೆ, ಸಾಂಪ್ರದಾಯಿಕ ಉಡುಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ಜ.3 ರಂದು ಜ್ಯೋತಿಪ್ರಸಾದ ಜೊಲ್ಲೆ ಜನ್ಮದಿನದಂದು ಪ್ರೇರಣಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ವಿಶೇಷ ಸಾಧನೆ ಮಾಡಿರುವ ವ್ಯಕ್ತಿಯನ್ನು ಗುರ್ತಿಸಿ ಅವರಿಗೆ ಪ್ರೇರಣಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜೊಲ್ಲೆ ಗ್ರೂಪ್ ಸಂಯೋಜಕ ವಿಜಯ ರಾವುತ್ ಇದ್ದರು.