ಶಿವಮೊಗ್ಗ: ಸಾಗರ ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನಡುವಿನ ಮಾತು ಈಗ ಆಣೆ ಪ್ರಮಾಣಕ್ಕೆ ಬಂತು ನಿಂತಿದೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹಾಲಪ್ಪ, ಶರಾವತಿ ಡೆಂಟಲ್ ಕಾಲೇಜು ಈಡಿಗ ಸಮಾಜಕ್ಕೆ ಸೇರಿದ ಆಸ್ತಿ. ಈ ಬಗ್ಗೆ ಬಂಗಾರಪ್ಪ ಅವರೇ ನನ್ನ ಬಳಿ ಹೇಳಿದ್ದರು. ಆದರೆ, ನನ್ನ ಬಳಿ ಯಾವುದೇ ದಾಖಲೆ ಇಲ್ಲ. ಈ ಬಗ್ಗೆ ಸಿಗಂಧೂರು ಚೌಡೇಶ್ವರಿ ಸನ್ನಿಧಾನದಲ್ಲಿ ಪ್ರಮಾಣ ಮಾಡಲಿ ಎಂದು ಹೇಳಿದ್ದೆ. ಈ ಹೇಳಿಕೆಗೆ ನಾನು ಈಗಲೂ ಬದ್ಧ ಎಂದರು.
ಬೇಳೂರು ಗೋಪಾಲಕೃಷ್ಣ ಅವರು ಶರಾವತಿ ಡೆಂಟಲ್ ಕಾಲೇಜು ವಿಷಯದ ಬಗ್ಗೆ ನಾನು ಮಧು ಬಂಗಾರಪ್ಪ ಬಳಿ ಪ್ರಮಾಣ ಮಾಡಿಸುತ್ತೇನೆ. ನೀವು ನಿಮ್ಮ ಮೇಲೆ ಬಂದಿದ್ದ ಆರೋಪದ ಬಗ್ಗೆ ಪ್ರಮಾಣ ಮಾಡಿ ಎಂದು ಹೇಳಿದ್ದರು.
ನಾನು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಬೇಳೂರು ಗೋಪಾಲಕೃಷ್ಣ ಕೂಡ ಬರಬೇಕು. ಅವರ ಬಗ್ಗೆ ದೊಡ್ಡ ಪಟ್ಟಿಯೇ ಇದೆ. ಆ ಪಟ್ಟಿಯಲ್ಲಿರುವವರ ಹೆಸರಿಗೂ, ತಮಗೂ ಸಂಬಂಧವಿಲ್ಲ ಎಂದು ಪ್ರಮಾಣ ಮಾಡಲಿ. ಇದಕ್ಕೆ ಸಾಕ್ಷಿಯಾಗಿ ಅವರ ಪತ್ನಿ ಕೂಡ ಬರಲಿ. ನಾನು ಕೂಡ ನನ್ನ ಪತ್ನಿ ಸಮೇತನಾಗಿ ಬಂದು ಪ್ರಮಾಣ ಮಾಡುತ್ತೇನೆ. ಸಿಗಂಧೂರು ಅಷ್ಟೇ ಅಲ್ಲ. ದೇಶದ ಯಾವುದೇ ದೇವಸ್ಥಾನದಲ್ಲೂ ನಾನು ಪ್ರಮಾಣ ಮಾಡಲು ಸಿದ್ಧ. ನೀವು ಮಧು ಬಂಗಾರಪ್ಪ ಅವರನ್ನು ಕರೆ ತಂದು ಈ ಪ್ರಕರಣದಲ್ಲಿ ನೀವು ಸಂಚು ಮಾಡಿಲ್ಲ ಎಂದು ಪ್ರಮಾಣ ಮಾಡಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದರು.
ನನ್ನ ಮೇಲಿನ ಆರೋಪಗಳ ಬಗ್ಗೆ ನ್ಯಾಯಾಲಯ, ಜನತಾ ನ್ಯಾಯಾಲಯದಲ್ಲೂ ನ್ಯಾಯ ಸಿಕ್ಕಿದೆ. ಕೇಸಿನಲ್ಲಿದ್ದ 21 ಅಂಶಗಳು ಸುಳ್ಳು ಎಂದು ಸಾಬೀತಾಗಿದೆ. ಅವರು ಮಾತಿನಂತೆ ನಡೆದುಕೊಳ್ಳಲಿ. ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣ ವಜಾ ಆಗಿದೆ. ಮಾನಸಿಕ ನ್ಯಾಯಾಲಯದಲ್ಲಿ ಅವರು ಅಪರಾಧಿ ಎಂದು ಬೇಳೂರು ಹೇಳಿದ್ದಾರೆ. ನಾನು ಅವರಷ್ಟು ಬುದ್ಧಿವಂತ, ಮೇಧಾವಿ ಅಲ್ಲ. ಭಾರತದಲ್ಲಿ ಇಂತಹ ನ್ಯಾಯಾಲಯ ಎಲ್ಲಿದೆ ಎಂದು ಅವರೇ ತಿಳಿಸಲಿ ಎಂದರು.