Advertisement

ರಸ್ತೆ ಬದಿ ಸಸಿ ನೆಡಲು ಸಿದ್ಧತೆ

01:02 PM Jun 19, 2018 | Team Udayavani |

„ಭೀಮರಾಯ ಕುಡ್ಡಳ್ಳಿ ಕಾಳಗಿ
ಕಾಳಗಿ: ಗ್ರಾಮೀಣ ಭಾಗದ ರಸ್ತೆಗಳ ಎರಡು ಬದಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಸಸಿಗಳನ್ನು ನೆಡಲಾಗುತ್ತಿದೆ. 

Advertisement

ಗ್ರಾಮೀಣ ಭಾಗಕ್ಕೆ ಸಂಚರಿಸುವ ರಸ್ತೆಗಳಾದ ಕಾಳಗಿ-ಸೂಗುರ (ಕೆ) ಎಸ್‌ ಎಸ್‌ಪಿ ಯೋಜನೆ ಅಡಿ 3 ಕಿ.ಮೀ ರಸ್ತೆ, ಕಲಗುರ್ತಿ-ಅಶೋಕ ನಗರ 4ಕಿ.ಮೀ ರಸ್ತೆ, ಮಂಗಲಗಿ-ಕೊಡದೂರ ಆರ್‌ ಎಸ್‌ಪಿ ಯೋಜನೆ ಅಡಿಯಲ್ಲಿ 3.5 ಕಿ.ಮೀ ರಸ್ತೆ, ಕಾಳಗಿ-ಕೊಡದೂರ ಉದ್ಯೋಗ ಖಾತ್ರಿ ಯೋಜನೆಯಲ್ಲಿ 3.5 ಕೀ.ಮಿ ರಸ್ತೆ, ಕೋರವಾರ-ಕೋರವಾರ ಅಣವೀರಭದ್ರೇಶ್ವರ ದೇವಸ್ಥಾನದವರೆಗೆ ಎಸ್‌ಎಸ್‌ಪಿ ಯೋಜನೆಯಲ್ಲಿ 3 ಕಿ.ಮೀ ರಸ್ತೆ, ಟೆಂಗಳಿ-ಕಲಗುರ್ತಿ- ಅಶೋಕ ನಗರದ ವರೆಗೆ ಎಸ್‌ಎಸ್‌ಪಿ ಯೋಜನೆಯಲ್ಲಿ 6 ಕಿ.ಮೀ ರಸ್ತೆ,  ಹೊಸ್ಸಳ್ಳಿ-ರಾಜಾಪುರ 3 ಕಿ.ಮೀ ರಸ್ತೆ, ಗುಂಡಗುರ್ತಿ-ಬಾಗೋಡಿ 3 ಕಿ.ಮೀ ರಸ್ತೆ ಸೇರಿದಂತೆ ಹಲವಾರು ರಸ್ತೆಗಳನ್ನು ಸೇರಿಸಿ ದಿನಗೂಲಿ ನೌಕರರೊಂದಿಗೆ 3 ತಿಂಗಳಲ್ಲಿ 8,500 ಸಸಿಗಳನ್ನು ಪ್ರಸಕ್ತ ಸಾಲಿನಲ್ಲಿ ನೆಡಲು ಸಾಮಾಜಿಕ ಅರಣ್ಯ ಇಲಾಖೆ ಮುಂದಾಗಿದೆ.

ಸುಮಾರು 3 ತಿಂಗಳ ಹಿಂದೆಯೇ 1 ಮೀಟರ್‌ ಗುಂಡಿ ಅಗೆದು ಬಿಟ್ಟಿದ್ದರಿಂದ ಬಿಸಿಲು, ಗಾಳಿ, ಮಳೆಗೆ ಫಲವತ್ತಾದ ಮಣ್ಣಾಗಿ ಮಾರ್ಪಟ್ಟಿದೆ. ಈಗ ಮುಂಗಾರು ಮಳೆ ಸುರಿಯಲಾರಂಭಿಸಿದ್ದು ಈ ಸಂದರ್ಭದಲ್ಲಿ ಸಸಿಗಳಾದ ಬೇವು, ಹುಣಸೆ, ನೇರಳೆ, ಅರಳಿ, ಹೊಂಗೆ, ಬಸರಿ, ತಪ್ಸಿ ಸೇರಿದಂತೆ ವಿವಿಧ ರೀತಿಯ ಗಿಡಗಳನ್ನು ನೆಡಲಾಗುತ್ತಿದೆ.

ವನ್ಯ ಜೀವಿಗಳಾದ ಮಂಗಗಳು ರೈತನ ಜಮೀನುಗಳಲ್ಲಿ ಸಂಚರಿಸಿ ಬೆಳೆಗಳನ್ನು ಹಾಳು ಮಾಡುವುದನ್ನು ಬಿಟ್ಟು ಈ
ಗಿಡಗಳಲ್ಲಿ ನೆಲೆಸುತ್ತವೆ. ಕೂಲಿಕಾರರು ಬೇವಿನ ಗಿಡದಿಂದ ಉದುರುವ ಬೇವಿನ ಬೀಜ ಸಂಗ್ರಹಿಸಿ ಲಾಭ ಗಳಿಸುತ್ತಾರೆ ಎಂದು ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ ಅರ್ಜುನ ತಿಳಿಸಿದ್ದಾರೆ. ರಸ್ತೆಯ ಎರಡು ಬದಿಯಲ್ಲಿ ನೆಡುವ ಸಸಿಗಳ ಸಂರಕ್ಷಣೆ ಮಾಡಲು ಸುಮಾರು ಮೂರು ತಿಂಗಳ ವರೆಗೆ ನಡುತೋಪು ಕಾವಲುಗಾರರನ್ನು ನೇಮಿಸಲಾಗುವುದು ಎಂದು ತಿಳಿಸಿದ್ದಾರೆ.

ಮುಳ್ಳಿನ ಕವಚ: ಗಿಡ, ಮರಗಳನ್ನು ನೆಡುವುದರ ಜೊತೆಗೆ ಅದಕ್ಕೆ 8ರಿಂದ 10 ಪೂಟ್‌ ಎತ್ತರದ (ತೆಕ್ಸ್‌) ನೀಲಗಿರಿ ಎಳೆಗಳ ಸಹಾಯದಿಂದ ಸುತ್ತಲು ಮುಳ್ಳಿನ ಕವಚ ನಿರ್ಮಿಸಿ ದನ-ಕರ, ಕುರಿಗಳ ದಾಳಿಗೆ ತುತ್ತಾಗದಂತೆ ಕಾಪಾಡಲಾಗುತ್ತಿದೆ. 

Advertisement

ನೆಟ್ಟಿರುವ ಸಸಿಗಳಿಗೆ ನೀರುಣಿಸುವುದರ ಜತೆಗೆ ಹಾಳಾಗದಂತೆ ಕಾಪಾಡಿ ಹೆಮ್ಮರವಾಗಿ ಬೆಳೆಸುತ್ತಿದ್ದೇವೆ.
ರೈತರು ಹೊಲದಲ್ಲಿರುವ ಸಸಿಗಳನ್ನು ಹಾಳಾಗದಂತೆ ನೋಡಿಕೊಳ್ಳಬೇಕು. 

ರಾಜು ಜಾಧವ, ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ

ಸಸಿಗಳು ಹೆಮ್ಮರವಾಗಿ ಬೆಳೆದ ನಂತರ ರಸ್ತೆಯ ಬದಿಯ ಜಮೀನುದಾರನೇ ಅದರ ಮಾಲೀಕನಾಗುತ್ತಾನೆ. ರೈತರು ಇವುಗಳನ್ನು ಕಡಿಯದೆ ರಕ್ಷಿಸಿ ಸ್ವಚ್ಛಂದ ವಾತಾವರಣ ನಿರ್ಮಿಸಲು ಕೈಜೋಡಿಸಬೇಕು.  

ಸಂಜುಕುಮಾರ ಚವ್ಹಾಣ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next