ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಇನ್ನೂ ಆರು ತಿಂಗಳ ಕಾಲ ರಾಷ್ಟ್ರಪತಿ ಆಡಳಿತವನ್ನು ವಿಸ್ತರಿಸಬೇಕೆಂಬ ಶಾಸನಬದ್ಧ ನಿರ್ಣಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದರು.
ಲೋಕಸಭೆಯಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರದಲ್ಲಿ ರಂಜಾನ್ ಮತ್ತು ಅಮರನಾಥ್ ಯಾತ್ರೆಯ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯನ್ನು ಈ ವರ್ಷದ ಅಂತ್ಯಕ್ಕೆ ನಡೆಸಲು ಆಯೋಗ ಸಿದ್ಧತೆ ನಡೆಸುತ್ತಿದೆ ಎಂದು ಶಾ ಮಾಹಿತಿ ನೀಡಿದರು.
ಅಲ್ಲದೇ ಇನ್ನಷ್ಟು ಕೆಲಸಗಳು ನಡೆಯಬೇಕಾಗಿರುವುದರಿಂದ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಆರು ತಿಂಗಳ ಕಾಲ ಮುಂದುವರಿಸಬೇಕಾದ ಅಗತ್ಯವಿದೆ ಎಂದು ಶಾ ಪ್ರಸ್ತಾಪವನ್ನು ಮಂಡಿಸಿದರು.
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಸರ್ಕಾರ ಬಹಳಷ್ಟು ಕ್ರಮಗಳನ್ನು ಕೈಗೊಂಡಿದ್ದು, ಇದರಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿರುವುದಾಗಿ ಶಾ ಲೋಕಸಭೆಗೆ ಮಾಹಿತಿ ನೀಡಿದರು.
ರಾಷ್ಟ್ರಪತಿ ಆಡಳಿತವನ್ನು 6 ತಿಂಗಳ ಕಾಲ ಮುಂದುವರಿಸಬೇಕೆಂಬ ಈ ನಿರ್ಣಯಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡಬೇಕೆಂದು ಶಾ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.