Advertisement

ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ

03:25 PM Nov 02, 2020 | Suhan S |

ತುಮಕೂರು: ಜಿಲ್ಲೆಯ ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ಮಂಗಳವಾರ ನಡೆಯುವ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ವನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತವು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಮತದಾನವು ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ನಡೆಯಲಿದ್ದು, ಪುರುಷರು 1,10,281 ಮಹಿಳೆಯರು 105434, ಇತರೆ 10 ಒಟ್ಟು 215725 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಮತದಾನ ಮಾಡುವ ಮತದಾರರಿಗೆ ಎಡಗೈ ಮಧ್ಯದ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುವುದು ಎಂದರು.

330 ಮತಗಟ್ಟೆ ಸ್ಥಾಪನೆ: ಚುನಾವಣಾ ಮತದಾನಕ್ಕೆ 330 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 6ವಲ್ನರೆಬಲ್‌, 64 ಕ್ರಿಟಿಕಲ್‌ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್ವರ್ ವಿಡಿಯೋಗ್ರಫಿ ಹಾಗೂ ವೆಬ್‌ ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಮುಕ್ತ ಮತ್ತು ಶಾಂತಿಯುತ ಮತದಾನವನ್ನು ನಡೆಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ತಾಲೂಕಾದ್ಯಂತ ನ. 3ರ ಮಧ್ಯರಾತ್ರಿ 12 ಗಂಟೆಯವರೆಗೆ ಕಲಂ 144ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಆದೇಶವು ನ. 3ರಂದು ಬೆಳಿಗ್ಗೆ 7 ಗಂಟೆ ಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿರುವ ಮತದಾನ ಕೇಂದ್ರಗಳ ಸ್ಥಳಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳಿದರು.

ಪೊಲೀಸ್‌ ಇಲಾಖೆಗೆ ಸೂಚನೆ: ಚುನಾವಣಾ ಬಹಿರಂಗ ಪ್ರಚಾರ ಮುಕ್ತಾಯವಾದ ಗಡುವಿನ ನಂತರ ಶಿರಾ ವಿಧಾನಸಭಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಈ ವಿಧಾನಸಭಾ ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿರುವ ಮತದಾರರಲ್ಲದ ಹೊರಗಿನ ರಾಜಕೀಯ ಕಾರ್ಯಕರ್ತರು, ಮುಖಂಡರು ಬಹಿರಂಗ ಪ್ರಚಾರದ ಗಡುವು ಮುಕ್ತಾಯದ ನಂತರ ಶಿರಾ ವಿಧಾನಸಭಾ ಕ್ಷೇತ್ರವನ್ನು ಬಿಡುವಂತೆ ಈಗಾಗಲೇ ಆದೇಶನೀಡಲಾಗಿದೆ. ಆದೇಶವನ್ನು ಅನುಷ್ಠಾನಗೊಳಿಸಲು ಪೊಲೀಸ್‌ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

1588 ಮತಗಟ್ಟೆ ಸಿಬ್ಬಂದಿ ನೇಮಕ: ಶಿರಾವಿಧಾನಸಭಾ ಉಪ ಚುನಾವಣೆ ಮತದಾನಕ್ಕೆ ತುಮಕೂರು ಹಾಗೂ ಗುಬ್ಬಿ ತಾಲೂಕುಗಳಿಂದ 397 ಪ್ರಿಸೈಡಿಂಗ್‌ ಅಧಿಕಾರಿಗಳು ಸೇರಿದಂತೆ 1588 ಮತಗಟ್ಟೆ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಈಗಾಗಲೇ ಈ ಸಿಬ್ಬಂದಿಗಳಿಗೆ 2 ಬಾರಿ ತರಬೇತಿ ನೀಡಲಾಗಿದೆ. ಶಿರಾದ ಮಸ್ಟರಿಂಗ್‌ ಕೇಂದ್ರವಾದ ಜ್ಯೋತಿ ನಗರದ ಸರ್ಕಾರಿ ಪ್ರಥಮ ದರ್ಜೆಕಾಲೇಜಿಗೆ ತೆರಳಲು ಕೆ.ಎಸ್‌.ಆರ್‌.ಟಿ.ಸಿ. ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ 50 ಕೆ.ಎಸ್‌.ಆರ್‌.ಟಿ.ಸಿ. ಬಸ್‌ಗಳನ್ನು ಇದಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ತುಮಕೂರು ಹಾಗೂ ಗುಬ್ಬಿಯಿಂದ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.

Advertisement

69.40 ಲಕ್ಷ ನಗದು ವಶ: ಶಿರಾದಲ್ಲಿ ನಡೆಯುತ್ತಿರುವ ಉಪಚುನಾವಣೆಯ ಹಿನ್ನಲೆಯಲ್ಲಿ ಈ ವರೆಗೆ ಅಬಕಾರಿ ಇಲಾಖೆಯಿಂದ 243 ಪ್ರಕರಣಗಳನ್ನು

ದಾಖಲಿಸಿ 500.838 ಐ.ಎಂ.ಎಲ್‌. ಮದ್ಯ,14.360 ಲೀ. ಬಿಯರ್‌ ಹಾಗೂ 6 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. 69,40 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕೋವಿಡ್‌-19 ನೀತಿ ಸಂಹಿತೆ ಉಲ್ಲಂಘನೆ ಮಾಡಿದ 19 ಪ್ರಕರಣ ಗಳನ್ನು ದಾಖಲಿಸಲಾಗಿದ್ದು, ಈ ಪೈಕಿ 8 ಎಫ್ಐಆರ್‌, 11 ಎನ್‌ಸಿಆರ್‌ ಪ್ರಕರಣಗಳನ್ನು ದಾಖ ಲಿಸಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಕೋವಿಡ್‌ ನಿಯಮಾವಳಿಯನ್ನು ಉಲ್ಲಂಘನೆ ಮಾಡಿವೆ. ಈಗಾಗಲೇ ಇವರಿಗೆ ತಿಳುವಳಿಕೆ ಪತ್ರ ಬರೆಯಲಾಗಿದೆ. ಇವರ ವಿರುದ್ಧ ವಿಪತ್ತು ನಿರ್ವ ಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿರಾ ವಿಧಾನಸಭಾ ಕ್ಷೇತ್ರವು ಆಂಧ್ರಪ್ರದೇಶದ 34 ಕಿ.ಮೀ. ಗಡಿಯನ್ನು ಹಂಚಿಕೊಂಡಿದ್ದು,ಚುನಾವಣಾ ಅಕ್ರಮಗಳನ್ನು ತಡೆಯುವ ಸಂಬಂಧ ಅನಂತಪುರ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ವ್ಯಾಪಕ ಕಟ್ಟೆಚ್ಚರವನ್ನುಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಶಿರಾ ಚುನಾವಣಾ ಮತದಾನದ ನಂತರ ಮತಯಂತ್ರಗಳನ್ನು ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಸ್ಥಾಪಿಸಿರುವ ಎಣಿಕಾ ಕೇಂದ್ರಕ್ಕೆ ಸ್ಥಳಾಂತರಿಸಿ 3 ಲೇಯರ್‌ನ ಗಾರ್ಡ್‌ ಬಂದೋಬಸ್ತ್ನಲ್ಲಿ ಇಡಲಾಗುವುದು. ನ. 10 ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಿಸಲಾಗುವುದು ಎಂದು ತಿಳಿಸಿದರು.

ಶಾಂತಿಯುತ ಮತದಾನಕ್ಕೆ ವ್ಯಾಪಕ ಭದ್ರತೆ : ಶಿರಾ ಉಪಚುನಾವಣೆಯ ಶಾಂತಿಯುತ ಮತದಾನಕ್ಕೆ 2 ಡಿವೈಎಸ್‌ಪಿ, 5 ಮಂದಿ ಇನ್ಸ್‌ಪೆಕ್ಟರ್‌, 21 ಪಿಎಸ್‌ಐ, 19 ಎಎಸ್‌ಐ ಸೇರಿದಂತೆ 900ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೆ.ವಂಸಿಕೃಷ್ಣ ತಿಳಿಸಿದರು.

ಕೇಂದ್ರದ 3 ಭದ್ರತಾ ಸಿಬ್ಬಂದಿ ಕಂಪನಿಗಳು ಭದ್ರತೆಗೆ ಆಗಮಿಸಿದ್ದು, ಹೋಬಳಿವಾರು 5 ಇನ್ಸ್‌ಪೆಕ್ಟರ್‌ ಗಳ ತಂಡ ರೌಂಡ್ಸ್‌ನಲ್ಲಿರಲಿದೆ. ಈಗಾಗಲೇ ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಶೇ.20ರಷ್ಟು ಕೊರೊನಾ ಪರೀಕ್ಷೆ: ಶಿರಾ ಉಪ ಚುನಾವಣಾ ಸಂದರ್ಭದಲ್ಲಿ ಕೋವಿಡ್‌ ಮಾರ್ಗಸೂಚಿಗಳ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ತಾಲೂಕಿನ ಶೇ. 20ರಷ್ಟು ಮಂದಿಗೆ ರ್‍ಯಾಂಡಮ್‌ ಆಗಿ ಕೋವಿಡ್‌ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯತ್‌ ಸಿಇ0 ಶುಭಾ ಕಲ್ಯಾಣ್‌ ತಿಳಿಸಿದರು. ಇದರಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಿರುವ ಅಧಿಕಾರಿ ಸಿಬ್ಬಂದಿ ಹಾಗೂ ತಾಲೂಕಿನ ಜನರನ್ನೊಳಗೊಳ್ಳಲಿದ್ದು, ನ.4ರ ನಂತರ ಕೋವಿಡ್‌ ಪರೀಕ್ಷೆಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಚುನಾವಣಾ ಶಾಖೆಯ ಸಿಬ್ಬಂದಿಗಳಾದ ನಾಗಭೂಷನ್‌, ಮಂಜುನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next