Advertisement

ಆರ್‌ಟಿಇ ಸೀಟು ಪ್ರವೇಶಕ್ಕೆ ಮಾ.1ರಿಂದ ಅರ್ಜಿ ಸ್ವೀಕಾರಕ್ಕೆ ಸಿದ್ಧತೆ

03:50 AM Feb 28, 2017 | Team Udayavani |

ಬೆಂಗಳೂರು: ಮುಂದಿನ ಶೈಕ್ಷಣಿಕ  ಸಾಲಿನ ಆರ್‌ಟಿಇ ಸೀಟುಗಳ ಪ್ರವೇಶಕ್ಕೆ ಬುಧವಾರದಿಂದ (ಮಾ. 1) ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆ.

Advertisement

ಈ ಬಾರಿಯೂ ನಗರ ಪ್ರದೇಶಗಳಲ್ಲಿ ಹೆತ್ತವರು ತಮ್ಮ ವಾರ್ಡ್‌ ಶಾಲೆಗಳ ಜತೆಗೆ ಪಕ್ಕದ ವಾರ್ಡ್‌ ಶಾಲೆಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಆದರೆ, ಪ್ರವೇಶ ಪ್ರಕ್ರಿಯೆಯಲ್ಲಿ ಮೊದಲು ಆ ವಾರ್ಡ್‌ನ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಬಳಿಕ ಸೀಟು ಉಳಿದರೆ ಮಾತ್ರ ನೆರೆಯ ವಾರ್ಡ್‌ ಮಕ್ಕಳಿಗೆ ಹಂಚಿಕೆಯಾಗಲಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಕುರಿತು ಸದ್ಯದಲ್ಲೇ ಅಧಿಸೂಚನೆ ಹೊರಬೀಳಲಿದೆ ಎಂದು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಪಿ.ಸಿ. ಜಾಫ‌ರ್‌ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ರಾಜ್ಯದ ಖಾಸಗಿ ಶಾಲೆಗಳಲ್ಲಿ ಸುಮಾರು 1.30 ಲಕ್ಷ ಸೀಟುಗಳು ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ)ಯಡಿ ಬಡ ಮಕ್ಕಳ ಪ್ರವೇಶಕ್ಕೆ ಲಭ್ಯವಾಗಲಿವೆ.  ಕನ್ನಡ, ಇಂಗ್ಲಿಷ್‌ ಎರಡರಲ್ಲೂ ಅರ್ಜಿ ಸಲ್ಲಿಸಬಹುದು ಎಂದರು.

ಈ ಬಾರಿ ಆಧಾರ್‌ ಸಂಖ್ಯೆ ಆಧಾರವಾಗಿಟ್ಟುಕೊಂಡು ಆರ್‌ಟಿಇ ಪ್ರವೇಶ ಪ್ರಕ್ರಿಯೆ ನಡೆಸಲು ಇಲಾಖೆ ಮುಂದಾಗಿದ್ದು, ಈಗಾಗಲೇ ಫೆ.18ರಿಂದ ಪ್ರಾಯೋಗಿಕ ಅರ್ಜಿ ಸ್ವೀಕಾರ ಕೈಗೊಳ್ಳಲಾಗಿತ್ತು. ಈವರೆಗೆ 1,400ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆ. ಪ್ರಾಯೋಗಿಕ ಅರ್ಜಿ ಸಲ್ಲಿಕೆ ವೇಳೆ ಕಂಡುಬಂದ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ನೈಜ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

Advertisement

ಮಾ.1ರಿಂದ 31ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗು ವುದು. ಸದ್ಯದಲ್ಲೇ ಅಧಿಸೂಚನೆ ಹೊರಬೀಳಲಿದೆ.
ಹೆತ್ತವರು ಆನ್‌ಲೈನ್‌ನಲ್ಲಿ ಆಧಾರ್‌ ಬಯೋಮೆಟ್ರಿಕ್‌ ಮೂಲಕ ಅಥವಾ ವನ್‌ಟೈಮ್‌ ಪಾಸ್‌ವರ್ಡ್‌ (ಓಟಿಪಿ) ಬಳಸಿ ಅರ್ಜಿ ಸಲ್ಲಿಸಬಹುದು. ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರ ಕಚೇರಿಗಳಲ್ಲೂ ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಹೆತ್ತವರು ಮನೆಯಲ್ಲೇ ಕಂಪ್ಯೂಟರ್‌, ಇಂಟರ್‌ನೆಟ್‌ ವ್ಯವಸ್ಥೆ ಇದ್ದರೆ ಅರ್ಜಿ ಸಲ್ಲಿಸಬಹುದು. ಅಥವಾ ಯಾವುದೇ ಕಂಪ್ಯೂಟರ್‌ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.

ಅಷ್ಟೇ ಅಲ್ಲದೆ, ನಗರ ಪ್ರದೇಶಗಳಲ್ಲಿ ಬೆಂಗಳೂರು ವನ್‌, ಕರ್ನಾಟಕ ವನ್‌ ಕೇಂದ್ರಗಳು, ಗ್ರಾಮೀಣ ಭಾಗದ ನಾಡ ಕಚೇರಿ, ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ 15 ರೂ. ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ವಿವರಿಸಿದರು.

ಒಂದು ಮಗುವಿಗೆ ಒಂದೇ ಅರ್ಜಿ ಸಲ್ಲಿಸಲು ಮಾತ್ರ 
ಅವಕಾಶ ಇರುತ್ತದೆ. ಉಳಿದಂತೆ ಹೆತ್ತವರು ತಮ್ಮ ವಾರ್ಡ್‌ ವ್ಯಾಪ್ತಿಯ 5 ಶಾಲೆಗಳನ್ನು ಪ್ರವೇಶಕ್ಕೆ ಆದ್ಯತೆ ಮೇಲೆ ಆಯ್ಕೆ ಮಾಡಬಹುದು. ಆಧಾರ್‌ ಕಾರ್ಡ್‌ನಲ್ಲಿ ಇರುವ ಜನ್ಮ 
ದಿನಾಂಕದ ಆಧಾರದಲ್ಲಿ ಮಗು ಎಲ್‌ಕೆಜಿ ಅಥವಾ 1ನೇ ತರಗತಿ ಪ್ರವೇಶಕ್ಕೆ ಅರ್ಹವಾ ಎಂದು ಸಾಫ್ಟ್ವೇರ್‌ ವ್ಯವಸ್ಥೆಯೇ ನಿರ್ಧರಿಸುತ್ತದೆ.

ಆಧಾರ್‌ನಲ್ಲಿ ಮಗು ಮತ್ತು ಹೆತ್ತವರ ವಿಳಾಸ ಮತ್ತು ಪಿನ್‌ ಕೋಡ್‌ ಒಂದೇ ಇದ್ದರೆ ಮಾತ್ರ ಪ್ರವೇಶ ದೊರೆಯುತ್ತದೆ. ಬೇರೆ ಬೇರೆ ಇದ್ದರೆ ಅದನ್ನು ಸಮೀಪದ ಆಧಾರ್‌ ಕೇಂದ್ರಗಳಲ್ಲಿ ಬದಲಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಇನ್ನು ಆದಾಯ, ಜಾತಿ ಪ್ರಮಾಣ ಪತ್ರ ಸೇರಿದಂತೆ ಮಗು ವಿನ ಎಲ್ಲ ದಾಖಲೆಗಳ ಪರಿಶೀಲನೆಯೂ ಆನ್‌ಲೈನ್‌ನಲ್ಲೇ ನಡೆಯುತ್ತದೆ. ಅರ್ಜಿಯಲ್ಲಿ ಕೇವಲ  ತಮ್ಮ ಪ್ರಮಾಣ ಪತ್ರದ ಸಂಖ್ಯೆಯನ್ನು ಮಾತ್ರ ನಮೂದಿಸಿದರೆ ಸಾಕು. 
ಆತ್ಮಹತ್ಯೆಗೊಳಗಾದ ರೈತರ ಮಕ್ಕಳಿಗೆ ಆದ್ಯತೆ: ಸರಕಾರದ ಸೂಚನೆಯಂತೆ ಈ ಬಾರಿ ಸಾಲಬಾಧೆಯಿಂದ ಆತ್ಮಹತ್ಯೆಗೊಳಗಾದ ರೈತರ ಮಕ್ಕಳಿಗೆ ಈ ಬಾರಿ ಆರ್‌ಟಿಇ ಪ್ರವೇಶದಲ್ಲಿ ವಿಶೇಷ ಆದ್ಯತೆ ನೀಡಲಾಗುವುದು. ಇದರ ಜತೆಗೆ ಈ ಹಿಂದೆ ಇದ್ದಂತೆ ಬೀದಿ ಮಕ್ಕಳು, ಎಚ್‌ಐವಿ, ವಲಸಿಗ ಮಕ್ಕಳು ಸೇರಿದಂತೆ ವಿಶೇಷ ವರ್ಗದ ಮಕ್ಕಳಿಗೆ ಆದ್ಯತೆ ಮುಂದುವರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next