ಹರಿಹರ: ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆ. 8 ಮತ್ತು 9ರಂದು ನಡೆಯಲಿರುವ ವಾಲ್ಮೀಕಿ ಜಾತ್ರೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಸಚಿವರು, ಶಾಸಕರು ಸೇರಿದಂತೆ ಹಲವು ಗಣ್ಯರು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಹರ್ಷಿ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರಾದ ಅರಣ್ಯ ಸಚಿವ ಸತೀಶ್ ಜಾರಕಿಹೋಳಿ, ಚಿತ್ರದುರ್ಗದ ಮುರುಘಾ ಮಠ, ಸಿರಿಗೆರೆ ತರಳಬಾಳು ಮಠದಂತೆ ವಾಲ್ಮೀಕಿ ಮಠವೂ ಸಂಘಟನೆ ಜೊತೆಗೆ ಸಾಮಾಜದಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದೆ. ಫೆ. 8ರ ಬೆಳಗ್ಗೆ 11ಕ್ಕೆ ಧಾರ್ಮಿಕ, ವೈಚಾರಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ಕೌಟುಂಬಿಕ, ಆಧ್ಯಾತ್ಮಿಕ ವಿಚಾರ ಗೊಷ್ಠಿಗಳ ಜೊತೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.
ಫೆ. 9ರ ಬೆಳಗ್ಗೆ 10ಕ್ಕೆ ಧರ್ಮ ಜಾಗೃತಿಗಾಗಿ ನಾಡಿನ ವಿವಿಧ ಮಠಾಧೀಶರ ನೇತೃತ್ವದಲ್ಲಿ ಧರ್ಮಸಭೆ ನಡೆಯಲಿದೆ. ಮಧ್ಯಾಹ್ನ 12-30ಕ್ಕೆ ನಡೆಯುವ ಜಾತ್ರಾ ಮಹೋತ್ಸವದ ಸಮಾರೋಪದಲ್ಲಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವಾರು ಸಚಿವರು, ಶಾಸಕರು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದರು. ಶಾಸಕ ಬಿ. ಶ್ರೀರಾಮುಲು ಮಾತನಾಡಿ, ಬೆಳಗಾವಿ ಸಭೆಯಲ್ಲಿ ಶ್ರೀಗಳು ಜಾತ್ರಾ ಮಹೋತ್ಸವದ ಬಗ್ಗೆ ಪ್ರಸ್ತಾಪಿಸಿದಾಗ ಸಭೆಯಲ್ಲಿದ್ದ ನಾವೆಲ್ಲಾ ಒಮ್ಮತದಿಂದ ಅಗತ್ಯ ಸಹಕಾರ ನೀಡುವುದಾಗಿ ಘೋಷಿಸಿದ್ದೆವು. ಸಮಾಜ ಸಂಘಟನಾ ಕಾರ್ಯದಲ್ಲಿ ಶ್ರೀಗಳೊಂದಿಗೆ ಸದಾ ತಾವು ಕೈಜೋಡಿಸುವುದಾಗಿ ತಿಳಿಸಿದರು.
ಪೀಠಾಧ್ಯಕ್ಷರಾದ ಪ್ರಸನ್ನಾನಂದಪುರಿ ಶ್ರೀ ಮಾತನಾಡಿ, ವಾಲ್ಮೀಕಿ ಗುರುಪೀಠ 1998ರ ಫೆ. 2ರಂದು ಸ್ಥಾಪನೆಯಾಗಿದ್ದು, ಲಿಂ| ಪುಣ್ಯಾನಂದಪುರಿ ಶ್ರೀಗಳು ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಸಮಾಜ ಸಂಘಟಿಸಿದ್ದರು. ದುರಾದೃಷ್ಟವಶಾತ್ ರೈಲು ಅಪಘಾತದಲ್ಲಿ ಅವರು ಲಿಂಗೈಕ್ಯರಾದ ನಂತರ 2008 ಆ. 14ರಂದು ನೂತನ ಪೀಠಾಧ್ಯಕ್ಷರಾದ ತಾವು ಅವರ ಕಾರ್ಯ ಮುಂದುವರಿಸಿರುವುದಾಗಿ ಹೇಳಿದರು.
ಸಮಾಜ ಬಾಂಧವರ ಸಹಕಾರದಿಂದ ಆಯೋಜಿಸಿರುವ ವಿನೂತನ ವಾಲ್ಮೀಕಿ ಜಾತ್ರಾ ಮಹೋತ್ಸವ ಪಕ್ಷಾತೀತ, ಜಾತ್ಯತೀತ ಕಾರ್ಯಕ್ರಮವಾಗಿದೆ. ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದ್ದು, ಸುವ್ಯವಸ್ಥಿತವಾಗಿ ನಡೆಸಲು ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಸಂಯೋಜಕ ಟಿ.ಈಶ್ವರ್, ಮಠದ ಧರ್ಮದರ್ಶಿ ಓಬಳಪ್ಪ, ಕಾರ್ಯದರ್ಶಿ ಕೆ.ಬಿ. ಮಂಜುನಾಥ್, ಮಕ್ರಿ ಪಾಲಾಕ್ಷಪ್ಪ, ಎಚ್.ಎಚ್. ಬಸವರಾಜ್, ಕೆ.ಪಿ. ಪಾಲಯ್ಯ, ಜಿಗಳಿ ಆನಂದಪ್ಪ, ಸಣ್ಣ ತಮ್ಮಪ್ಪ ಬಾರ್ಕಿ, ಜಿಗಳಿ ರಂಗಪ್ಪ, ಡಿ.ಮಂಜುನಾಥ್, ರಾಜನಹಳ್ಳಿ ಭೀಮಣ್ಣ, ಆನಂದಪ್ಪ, ಡಿವೈಎಸ್‌ಪಿ ಮಂಜುನಾಥ್ ಗಂಗಲ್, ಸಿಪಿಐ ಗುರುನಾಥ್, ಪಿಎಸ್‌ಐ ರವಿಕುಮಾರ್ ಹಾಗೂ ಮತ್ತಿತರರಿದ್ದರು.