Advertisement

“ಸ್ಮಾರ್ಟ್‌ ಸಿಗ್ನಲ್‌’ಅಳವಡಿಕೆಗೆ ಸಿದ್ಧತೆ

10:14 PM Feb 22, 2020 | mahesh |

ಮಹಾನಗರ: ನಗರದಲ್ಲಿರುವ ಟ್ರಾಫಿಕ್‌ ಸಿಗ್ನಲ್‌ಗ‌ಳನ್ನು ಮುಂಬಯಿ ಕೆಲವೆಡೆ ಅಳವಡಿಸಿರುವ ಹೈಟೆಕ್‌ ಸ್ವರೂಪದಲ್ಲಿ ಅಭಿವೃದ್ಧಿಪಡಿಸುವ ಮೂಲಕ “ಸ್ಮಾರ್ಟ್‌ ಮಂಗಳೂರಿಗೆ ಸ್ಮಾರ್ಟ್‌ ಸಿಗ್ನಲ್‌’ ವ್ಯವಸ್ಥೆ ಜಾರಿಗೆ ತರಲು ಇದೀಗ ಸಿದ್ಧತೆ ನಡೆಯುತ್ತಿದೆ.

Advertisement

ಬೆಳೆಯುತ್ತಿರುವ ಮಂಗಳೂರು ನಗರದ ಮುಂದಿನ ಟ್ರಾಫಿಕ್‌ ವ್ಯವಸ್ಥೆ ಸುಧಾರಣೆಗೆ ಪಾಲಿಕೆಯ ನೇತೃತ್ವದಲ್ಲಿ, ಖಾಸಗಿ ಸಹಭಾಗಿತ್ವದಲ್ಲಿ ವಿನೂತನ ಮಾದರಿಯ ಟ್ರಾಫಿಕ್‌ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿ ಸಲು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಅವರು ಮುಂದಾ ಗಿದ್ದು, ಈ ಕುರಿತಂತೆ ಮಾತುಕತೆ ನಡೆಯುತ್ತಿದೆ. ಹೊರರಾಜ್ಯದಲ್ಲಿ ಜಾರಿಯಲ್ಲಿರುವ ಮಾದರಿಯಲ್ಲಿಯೇ ನಗರದ ಟ್ರಾಫಿಕ್‌ ಸಿಗ್ನಲ್‌ಗ‌ಳು ಇರಬೇಕು ಎಂಬ ಮಾದರಿ ಅನುಷ್ಠಾನಕ್ಕೆ ಮುಂಬಯಿ ಸಾರಿಗೆ ತಜ್ಞರ ಜತೆಗೆ ಇತ್ತೀಚೆಗೆ ಸಭೆ ನಡೆಸಲಾಗಿದೆ.

ಸದ್ಯ ಮಂಗಳೂರಿನ ವಿವಿಧ ಭಾಗಗಳಲ್ಲಿ ರುವ ಟ್ರಾಫಿಕ್‌ ಸಿಗ್ನಲ್‌ಗ‌ಳು ಸೂಕ್ತವಾಗಿ ನಿರ್ವಹಣೆ ಇಲ್ಲದೆ ತುಕ್ಕುಹಿಡಿಯುತ್ತಿವೆ.ಜತೆಗೆ ಕೆಲವು ಸಿಗ್ನಲ್‌ ಕಂಬಗಳು ಮಾತ್ರ ಇದ್ದು, ಕಾರ್ಯಾಚರಿಸುತ್ತಿಲ್ಲ. ಇದರ ರಿಪೇರಿಯೂ ಸಾಧ್ಯವಾಗಿಲ್ಲ. ಇದರಲ್ಲಿರುವ ಸಮಯದ ಮಿತಿಯಲ್ಲಿಯೂ ವ್ಯತ್ಯಾಸ, ನಂಬರ್‌ ಕೂಡ ಸ್ಪಷ್ಟವಾಗಿ ಕಾಣುತ್ತಿಲ್ಲ. ಲೈಟ್‌ ಕೂಡ ಸಮರ್ಪಕವಾಗಿ ಕಾಣುವುದೂ ಇಲ್ಲ. ಇಂತಹ ಸಮಸ್ಯೆಗಳಿಗೆ ಮುಕ್ತಿ ನೀಡುವ ಹಿನ್ನೆಲೆಯಲ್ಲಿ ಹೈಟೆಕ್‌ ಸಿಗ್ನಲ್‌ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ.

ಏನಿದು ಯೋಜನೆ?
ಮುಂಬಯಿಯಲ್ಲಿ ನಗರಾಭಿವೃದ್ಧಿ ಇಲಾಖೆಯ ತಜ್ಞರು ಅಭಿವೃದ್ಧಿಪಡಿಸಿದ ಮಾದರಿಯ ಟ್ರಾಫಿಕ್‌ ಸಿಗ್ನಲ್‌ಗ‌ಳನ್ನು ಮಂಗಳೂರು ನಗರಕ್ಕೆ ಸೂಕ್ತವಾಗಿಸಿ ಅಳವಡಿಸುವುದು ಈ ಯೋಜನೆ. ಈ ಸಿಗ್ನಲ್‌ ಕಂಬಗಳು ಹೈಟೆಕ್‌ ಮಾದರಿಯಲ್ಲಿರಲಿವೆ. ವಾಹನ ಚಾಲಕರಿಗೆ ಸೂಚನೆ ನೀಡುವ ಡಿಜಿಟಲ್‌ ಫಲಕ, ಅತ್ಯಾಧುನಿಕ ತಂತ್ರಜ್ಞಾನದ ಕೆಮರಾ, ಸುಧಾರಿತ ಡಿಸ್‌ಪ್ಲೇ ಬೋರ್ಡ್‌ ಇರಲಿದೆ. ನಗರದ ಟ್ರಾಫಿಕ್‌ ಮಾಹಿತಿ, ವಾಹನ ಚಾಲಕರು ಕೈಗೊಳ್ಳಬಹುದಾದ ಎಚ್ಚರಿಕೆ ಮಾಹಿತಿ, ನಗರದ ಬ್ರೇಕಿಂಗ್‌ ಸುದ್ದಿ ಗಳನ್ನು ಅತ್ಯಾಧುನಿಕ ಸಿಗ್ನಲ್‌ನ ಎಲ್‌ಇಡಿ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಪ್ರದರ್ಶಿಸ ಲಾಗುತ್ತದೆ. ಕೇಂದ್ರ- ರಾಜ್ಯ ಸರಕಾರದ ಯೋಜನೆ- ಯೋಜನೆಯ ಬಗ್ಗೆಯೂ ಇದರಲ್ಲಿ ಮಾಹಿತಿ ನೀಡಲಾಗುತ್ತದೆ. ಉಳಿದ ಸಮಯದಲ್ಲಿ ಖಾಸಗಿ ಜಾಹೀರಾತು ಪ್ರದರ್ಶನ ಇರಲಿದೆ.

ಟ್ರಾಫಿಕ್‌ ಮಾಹಿತಿ
ಇದರಲ್ಲಿರುವ ಕೆಮರಾ ಮೂಲಕ ಎಲ್ಲ ವಾಹನಗಳ ನಂಬರ್‌ ಪ್ಲೇಟ್‌ಗಳನ್ನು ಅತ್ಯಂತ ಸ್ಪಷ್ಟವಾಗಿ ಕಂಡುಹಿಡಿಯಲು ಸಾಧ್ಯ. ಜತೆಗೆ ದಾಖಲಾಗುವ ವೀಡಿಯೋಗಳನ್ನು ತತ್‌ಕ್ಷಣವೇ ಪೊಲೀಸ್‌ ಇಲಾಖೆಯು ಪಡೆಯಬಲ್ಲ ಸಾಫ್ಟ್ವೇರ್‌ ಕೂಡ ಇದರಲ್ಲಿರಲಿದೆ. ಡಿಜಿಟಲ್‌ ಟೈಮರ್‌ ಹಾಗೂ ಟ್ರಾಫಿಕ್‌ ಮಾಹಿತಿ ನೀಡುವ ನಿಟ್ಟಿನಲ್ಲಿ ಎಲ್‌ಇಡಿ ಸ್ಕ್ರೀನ್‌ ಹೊಂದಿರುತ್ತದೆ. ಮೈಕ್ರೋ ಕಂಟ್ರೋಲರ್‌ ಆಧಾರಿತ “ಕೌಂಟ್‌ ಡೌನ್‌’ ಟೈಮರ್‌ ಕೂಡ ಇದರಲ್ಲಿ ರಲಿದೆ. ಜತೆಗೆ ನಗರದ ಹವಾ ಮಾನದ ಮಾಹಿತಿಯೂ ಇದರಲ್ಲಿರಲಿದೆ. ಟ್ರಾಫಿಕ್‌ನಲ್ಲಿ “ಗ್ರೀನ್‌’ ಲೈಟ್‌ ಬರುತ್ತಿದ್ದಂತೆ ಎಲ್‌ಇಡಿ ಸ್ಕ್ರೀನ್‌ನಲ್ಲಿದ್ದ ಪ್ರದರ್ಶನ ಸ್ಥಗಿತವಾಗುತ್ತದೆ. ಹೀಗಾಗಿ ವಾಹನ ಸಂಚಾ ರಕ್ಕೆ ಅನುಕೂಲವಾಗಲಿದೆ. “ರೆಡ್‌’ ಲೈಟ್‌ ಇದ್ದು ವಾಹನಗಳು ಟ್ರಾಫಿಕಲ್ಲಿ ನಿಂತಿರುವಾಗ ಮಾತ್ರ ಎಲ್‌ಇಡಿ ಸ್ಕ್ರೀನ್‌ನಲ್ಲಿ ಪ್ರದರ್ಶನ ಮತ್ತೆ ಶುರುವಾಗುತ್ತದೆ. ಇವೆಲ್ಲವೂ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಲಿವೆ ಎಂಬುದು ತಜ್ಞರ ಅಭಿಪ್ರಾಯ.

Advertisement

ನಗರದ ಹಲವೆಡೆ ಸಿಗ್ನಲ್‌ ಅಳವಡಿಕೆ ಸಾಧ್ಯತೆ
ಸದ್ಯ ಮಂಗಳೂರಿನ ಅಂಬೇಡ್ಕರ್‌ ಸರ್ಕಲ್‌ (ಜ್ಯೋತಿ), ಪಿವಿಎಸ್‌, ಲಾಲ್‌ಬಾಗ್‌, ಪಣಂಬೂರಿನಲ್ಲಿ ಟ್ರಾಫಿಕ್‌ ಸಿಗ್ನಲ್‌ಗ‌ಳು ಕಾರ್ಯಾಚರಿಸುತ್ತಿವೆ. ಇದನ್ನು ಹೈಟೆಕ್‌ ಸ್ವರೂಪದಲ್ಲಿ ಅಭಿವೃದ್ಧಿ ಮಾಡಲು ಯೋಚಿಸಲಾಗಿದೆ. ಟ್ರಾಫಿಕ್‌ ಸಿಗ್ನಲ್‌ ಅಳವಡಿಸಲು ಅನುಕೂಲವಿರುವ ಬಲ್ಮಠ, ಕಂಕನಾಡಿ ಕರಾವಳಿ ವೃತ್ತ, ಬಂಟ್ಸ್‌ಹಾಸ್ಟೆಲ್‌, ಲೇಡಿಹಿಲ್‌, ನಂತೂರು, ಬಿಜೈ-ಕೆಎಸ್‌ಆರ್‌ಟಿಸಿ, ಕೆಪಿಟಿ ಸೇರಿದಂತೆ ನಗರದ ಬಹುಮುಖ್ಯ ಭಾಗದಲ್ಲಿ ಹೈಟೆಕ್‌ ಸ್ವರೂಪದ ಟ್ರಾಫಿಕ್‌ ಸಿಗ್ನಲ್‌ ಅಳವಡಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.

ಶೀಘ್ರ ತೀರ್ಮಾನ
ನಗರದ ವಿವಿಧ ಭಾಗಗಳಲ್ಲಿರುವ ಕೆಲವು ಟ್ರಾಫಿಕ್‌ ಸಿಗ್ನಲ್‌ಗ‌ಳು ಸೂಕ್ತವಾಗಿ ನಿರ್ವಹಣೆ ಆಗುತ್ತಿಲ್ಲ. ಹೀಗಾಗಿ ನಗರದ ಎಲ್ಲ ಸಿಗ್ನಲ್‌ಗ‌ಳನ್ನು ಹೈಟೆಕ್‌ ಸ್ವರೂಪದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆಯಿದೆ. ಶೀಘ್ರದಲ್ಲಿ ಪಾಲಿಕೆ ಹಾಗೂ ಸಂಚಾರಿ ಪೊಲೀಸರ ಜತೆಗೆ ಮಾತುಕತೆ ನಡೆಸಿ ಹೈಟೆಕ್‌ ಮಾದರಿಯ ಟ್ರಾಫಿಕ್‌ ಸಿಗ್ನಲ್‌ ಜಾರಿಗೆ ಕ್ರಮ ಕೈಗೊಳ್ಳಲಾಗುವುದು.
 - ವೇದವ್ಯಾಸ ಕಾಮತ್‌, ಶಾಸಕರು

-  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next