ಹುಬ್ಬಳ್ಳಿ: ಸರಕಾರಿ, ಅನುದಾನಿತ ಹಾಗೂ ಅನುದಾನಿತ ರಹಿತ ಶಾಲೆಗಳಲ್ಲಿ ಪಠ್ಯಪುಸ್ತಕ-ಸಮವಸ್ತ್ರ ವಿತರಣೆ ವಿಳಂಬ ತಪ್ಪಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದ್ದು, 2019-20ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ ಶೇ.85 ಪಠ್ಯಪುಸ್ತಕ ಬಂದಿದ್ದು, ಸಮವಸ್ತ್ರ ಬರಬೇಕಿದೆ.
ಶಹರ ವಿಭಾಗ: ಶಹರ ವಿಭಾಗದಲ್ಲಿ ಒಟ್ಟು 12 ಕ್ಲಸ್ಟರ್‌ಗಳಲ್ಲಿ 89 ಪ್ರಾಥಮಿಕ ಶಾಲೆ, 7 ಸರಕಾರಿ ಪ್ರೌಢಶಾಲೆ, ಅನುದಾನಿತ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಾಶಾಲೆ 81, ಅನುದಾನರಹಿತ 144 ಒಟ್ಟು 320 ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಬೇಕಿದೆ. ಇದರಲ್ಲಿ ಸರಕಾರಿ, ಅನುದಾನಿತ ಶಾಲೆಗಳಿಗೆ ಉಚಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಮಾರಾಟ ಪ್ರಕ್ರಿಯೆ ನಡೆಯಲಿದೆ.
ಈಗಾಗಲೇ ಎಸ್‌ಎಟಿಎಸ್ (ಸ್ಟುಡೆಂಟ್ ಅಚೀವ್‌ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್) ಮೂಲಕ ಆಯಾ ಶಾಲೆಗೆ ಬೇಕಾಗುವ ಪುಸ್ತಕದ ಮಾಹಿತಿಯನ್ನು ಕಲೆ ಹಾಕಿದ್ದು, ಅದರಂತೆ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ಶಹರ ವಿಭಾಗದಲ್ಲಿ ಒಟ್ಟು 12 ಕ್ಲಸ್ಟರ್‌ಗಳಿದ್ದು, ಎಲ್ಲ ಕ್ಲಸ್ಟರ್‌ಗಳು ಸೇರಿದಂತೆ ಸುಮಾರು 6,06,915 ಎಲ್ಲ ವಿಷಯಗಳ ಪಠ್ಯಪುಸ್ತಕಗಳ ಬೇಡಿಕೆ ಇದ್ದು, ಅದರಲ್ಲಿ ಸರಕಾರಿ ಶಾಲೆಗಳಿಗೆ ಉಚಿತವಾಗಿ ಪೂರೈಸಲು 3,38,689 ಹಾಗೂ ಮಾರಾಟಕ್ಕೆ 2,68,226 ಪಠ್ಯಪುಸ್ತಕಗಳ ಬೇಡಿಕೆ ಇದೆ.
ಸದ್ಯ ಸರಕಾರಿ ಶಾಲೆಗಳಿಗೆ ಉಚಿತವಾಗಿ ಪೂರೈಸಲು ಸುಮಾರು 6 ಲಕ್ಷ ಹಾಗೂ ಮಾರಾಟಕ್ಕೆ 2.50 ಲಕ್ಷ ಪಠ್ಯಪುಸ್ತಕಗಳು ಬಂದಿವೆ. ಇನ್ನುಳಿದ ಉಚಿತ ಹಾಗೂ ಮಾರಾಟಕ್ಕೆ ಬೇಕಾದ ಪಠ್ಯಪುಸ್ತಕಗಳು ಒಂದೆರಡು ದಿನಗಳಲ್ಲಿಯೇ ಬರಲಿವೆ. ಮೇ 31ರೊಳಗೆ ಎಲ್ಲ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಶಹರ ವಿಭಾಗದಿಂದ ಈಗಾಗಲೇ 2-3 ಕ್ಲಸ್ಟರ್‌ಗಳಿಗೆ ಪುಸ್ತಕ ವಿತರಣೆ ಮಾಡಲಾಗಿದ್ದು, ಇನ್ನುಳಿದ ಕ್ಲಸ್ಟರ್‌ಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಬೇಕಿದೆ. ಇದರಲ್ಲಿ 3 ಕ್ಲಸ್ಟರ್‌ಗಳು ಉರ್ದು ಮಾಧ್ಯಮದ ಕ್ಲಸ್ಟರ್‌ಗಳಾಗಿವೆ. ಪ್ರತಿದಿನ ಎರಡು ಕ್ಲಸ್ಟರ್‌ಗಳಿಗೆ ಪಠ್ಯಪುಸ್ತಕ ನೀಡಲಾಗುತ್ತಿದೆ.
Advertisement
ಶಾಲೆ ಆರಂಭಕ್ಕೆ ಮುನ್ನವೇ ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಲು ಇಲಾಖೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಿದೆ. ಈಗಾಗಲೇ ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣ ವಿಭಾಗದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತಿದೆ. ಶಹರ ಹಾಗೂ ಗ್ರಾಮೀಣ ವಿಭಾಗದ ಶಾಲೆಗಳಿಗೆ ಕ್ಲಸ್ಟರ್ ಅನುಗುಣವಾಗಿ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತಿದೆ.
Related Articles
Advertisement
ಗ್ರಾಮೀಣ ವಿಭಾಗ: ಗ್ರಾಮೀಣ ವಿಭಾಗದಲ್ಲಿ ಬರುವ 12 ಕ್ಲಸ್ಟರ್‌ಗಳಲ್ಲಿ 115 ಸರಕಾರಿ ಪ್ರಾಥಮಿಕ ಶಾಲೆ, 22 ಉರ್ದು ಶಾಲೆ, 13 ಸರಕಾರಿ ಪ್ರೌಢಶಾಲೆ, 7 ಪ್ರಾಥಮಿಕ ಹಾಗೂ 15 ಅನುದಾನಿತ ಪ್ರೌಢಶಾಲೆ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು 63, ಸಮಾಜ ಕಲ್ಯಾಣ ಇಲಾಖೆಯ 3 ಶಾಲೆಗಳಿವೆ.
ಸದ್ಯ ಗ್ರಾಮೀಣ ವಿಭಾಗದ ಶಾಲೆಗಳಿಗೆ ವಿತರಣೆಗೆ 2,99, 136 ಪುಸ್ತಕಗಳ ಬೇಡಿಕೆ ಇದೆ. ಇದರಲ್ಲಿ 2,20,395 ಉಚಿತ ಹಾಗೂ 78741 ಮಾರಾಟಕ್ಕೆ ಪುಸ್ತಕಗಳ ಬೇಡಿಕೆ ಇದೆ. ಸದ್ಯ ಉಚಿತ ವಿತರಣೆಗೆ 2,02,253 ಪಠ್ಯಪುಸ್ತಕಗಳು ಹಾಗೂ ಮಾರಾಟಕ್ಕೆ 63,765 ಪಠ್ಯಪುಸ್ತಕಗಳು ಬಂದಿವೆ. ಇನ್ನುಳಿದ 33,118 ಪಠ್ಯಪುಸ್ತಕಗಳು ಶೀಘ್ರದಲ್ಲಿಯೇ ಬರಲಿದ್ದು ಪಠ್ಯಪುಸ್ತಕದ ಸಮಸ್ಯೆ ಇಲ್ಲವಾಗಿದೆ.
ಶಹರ ಹಾಗೂ ಗ್ರಾಮೀಣಕ್ಕೆ ಸಂಬಂಧಿಸಿದಂತೆ ಕನ್ನಡ ಮಾಧ್ಯಮದಲ್ಲಿ 3 ಶೀರ್ಷಿಕೆಗಳ ಪಠ್ಯಪುಸ್ತಕ, ಉರ್ದು ಮಾಧ್ಯಮದ 3 ಶೀರ್ಷಿಕೆಗಳ ಹಾಗೂ ಮಾರಾಟಕ್ಕೆ ಬೇಕಾದ 5 ಶೀರ್ಷಿಕೆಗಳ ಪಠ್ಯಪುಸ್ತಕಗಳು ಬರಬೇಕಿವೆ.