Advertisement

ಆಗ್ನೇಯ ಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆ

02:45 PM Jun 07, 2018 | Team Udayavani |

ಕೋಲಾರ: ಜೂ.8ರಂದು ನಡೆಯಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಒಟ್ಟು 3,403 ಮಂದಿ ಶಿಕ್ಷಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದರು.

Advertisement

ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಜೂ.8ರಂದು ಮತದಾನ ಹಾಗೂ ಜೂ.12ರಂದು ಮತಗಳ ಏಣಿಕೆ ನಡೆಯಲಿದೆ ಎಂದು ಹೇಳಿದರು. 

ಬ್ಯಾಲೆಟ್‌ ಪೇಪರ್‌ ಮೂಲಕ ಮತ ಚಲಾಯಿ ಸುತ್ತಿರುವುದರಿಂದ ಚುನಾವಣಾ ಆಯೋಗ ನಿಗದಿಪಡಿಸಿರುವ ನೇರಳೆ ಬಣ್ಣದ ಪೆನ್‌ ಮೂಲಕವೇ ಯಾವ ಅಭ್ಯರ್ಥಿಗೆ ಎಷ್ಟನೇ ಪ್ರಾಶಸ್ತ್ಯದ ಮತ ಚಲಾಯಿಸುತ್ತಾರೆ ಎಂಬುದನ್ನು ಅಂಕಿಯಲ್ಲಿ ಬರೆಯಬೇಕು. ಇಲ್ಲವಾದರೆ, ಅದು ತಿರಸ್ಕೃತಗೊಳ್ಳುವ ಸಾಧ್ಯತೆಯಿರುತ್ತದೆ. ಶಾಹಿ ಯನ್ನು ಎಡಗೈನ ಮಧ್ಯದ ಬೆರಳಿಗೆ ಹಚ್ಚಲಾಗುತ್ತದೆ ಎಂದರು.

ಬೆಳಗ್ಗೆ 7 ರಿಂದ ಸಂಜೆ 5 ತನಕ ಮತದಾನ: ಮತ ಆಗ್ನೇಯ ಶಿಕ್ಷಕರ ವಿಧಾನ ಪರಿಷತ್‌ ಚುನಾವಣೆಯ ಮತದಾನ ಜೂ.8ರ ಬೆಳಗ್ಗೆ 8ರಿಂದ ಸಂಜೆ 5ರತನಕ ನಡೆಯುತ್ತಿತ್ತು. ಈಗ ಚುನಾವಣಾ ಆಯೋಗ ಸಮಯ ಬದಲಾಯಿಸಿದ್ದು, ಬೆಳಗ್ಗೆ 7 ರಿಂದ ಸಂಜೆ 5 ತನಕ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು. 

ಕಡ್ಡಾಯವಾಗಿ ಮತ ಚಲಾಯಿಸಿ: ಈ ಚುನಾವಣೆ ಶಿಕ್ಷಕರ ಕ್ಷೇತ್ರಕ್ಕೆ ಮಾತ್ರ ಸಂಬಂಧಪಟ್ಟದ್ದಾಗಿದ್ದು, ಶಿಕ್ಷಕರು ಕಡ್ಡಾಯವಾಗಿ ಮತ ಚಲಾಯಿಸಬೇಕು. ಮತದಾನ ಕೇಂದ್ರಕ್ಕೆ ಕಡ್ಡಾಯವಾಗಿ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕು. ಬ್ಯಾಲೆಟ್‌ ಪೇಪರ್‌ ಮೇಲೆ ಚುನಾವಣಾಧಿಕಾರಿ ಸಹಿ ಇದೆಯೇ ಇಲ್ಲವೇ ಎಂಬುದರ ಬಗ್ಗೆ ಗಮನಿಸಬೇಕು. ನಂತರ ಗುರುತು ಹಾಕಿ ನಾಲ್ಕು ಬಾರಿ ಮಡಚಿ ಮತ ಪೆಟ್ಟಿಗೆಗೆ ಹಾಕಬೇಕು ಎಂದು ಹೇಳಿದರು. 

Advertisement

ಜಿಲ್ಲೆಯಲ್ಲಿ 3403 ಮಂದಿ ಶಿಕ್ಷಕ ಮತದಾರರು: ಜಿಲ್ಲೆಯಲ್ಲಿ ಒಟ್ಟು 3,403 ಮತದಾರರಿದ್ದು, ಈ ಪೈಕಿ 2,018 ಮಂದಿ ಪುರುಷರು ಹಾಗೂ 1,385 ಮಹಿಳಾ ಮತದಾರರಿದ್ದಾರೆ. ಕೋಲಾರದಲ್ಲಿ 1,091, ಮಾಲೂರು 394, ಬಂಗಾರಪೇಟೆ 378, ಕೆಜಿಎಫ್‌ 436, ಮುಳಬಾಗಿಲು 559, ಶ್ರೀನಿವಾಸಪುರ 545 ಮತದಾರರು ಇದ್ದಾರೆ ಎಂದು ತಿಳಿಸಿದರು.

ಮತದಾನದ ಮಾರನೇ ದಿನದ ನಂತರ ಸೂಕ್ತ ಭದ್ರತೆ ಮೂಲಕ ಬೆಂಗಳೂರಿನ ಆರ್‌.ಸಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಭದ್ರತಾ ಕೊಠಡಿಗೆ ಮತಪಟ್ಟೆಗೆಗಳನ್ನು ಸಾಗಿಸಲಾಗುವುದು. ಜೂ.12ರಂದು ಮತ ಏಣಿಕೆ ಮುದ ಮೇಲೆ ಜೂ.15ಕ್ಕೆ ನೀತಿ ಸಂಹಿತೆ ಕೊನೆಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮತ್ತಿತರರು ಹಾಜರಿದ್ದರು. 

ಯಾವುದೇ ಪ್ರಕರಣ ದಾಖಲಾಗಿಲ್ಲ: ಡಿಸಿ ಚುನಾವಣೆಯ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳನ್ನು ಜೂ.6ರ ಸಂಜೆ 5ರಿಂದ ಜೂ.8ರ ಸಂಜೆ 6ತನಕ ಮುಚ್ಚಲಾಗುವುದು. ಜೂ.6ಕ್ಕೆ ಬಹಿರಂಗ ಪ್ರಚಾರ ಮುಗಿಯಲಿದ್ದು, ಮನೆಮನೆಗೆ ತೆರಳಿ ಮತ ಯಾಚಿಸಬಹುದು. ಇದುವರೆಗೂ ಯಾವುದೇ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಸ್ಪಷ್ಟಪಡಿಸಿದರು.

ಚುನಾವಣಾ ಕರ್ತವ್ಯಕ್ಕೆ ಒಟ್ಟು 24 ಮಂದಿ ನಿಯೋಜನೆಗೊಂಡಿದ್ದು, 6 ಮಂದಿ ವೀಕ್ಷಕರನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 6 ಮತ ಕೇಂದ್ರಗಳನ್ನು ಸ್ಥಾಪಿಸಿದ್ದು, ಶ್ರೀನಿವಾಸಪುರ, ಕೋಲಾರ, ಮುಳಬಾಗಿಲು, ಮಾಲೂರು, ಬಂಗಾರಪೇಟೆ ತಾಲೂಕುಗಳಲ್ಲಿ ಆಯಾ ತಾಲೂಕು ಕಚೇರಿಯಲ್ಲಿ ಹಾಗೂ ಕೆಜಿಎಫ್‌ನಲ್ಲಿ ನಗರಸಭೆ ಕಚೇರಿಯಲ್ಲಿ ಮತ ಕೇಂದ್ರ ಸ್ಥಾಪಿಸಲಾಗಿದೆ.
ಜಿ.ಸತ್ಯವತಿ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next