Advertisement

1969ರ ಸಮ್ಮೇಳನಕ್ಕೆ ಆರು ತಿಂಗಳ ತಯಾರಿ…

08:36 AM Nov 21, 2017 | |

ಉಡುಪಿ: 1969ರ ಡಿಸೆಂಬರ್‌ನಲ್ಲಿ ನಡೆದ ವಿಶ್ವ ಹಿಂದೂ ಪರಿಷದ್‌ ಪ್ರಥಮ ಪ್ರಾಂತ ಸಮ್ಮೇಳನಕ್ಕೆ ಸುಮಾರು ಆರು ತಿಂಗಳು ತಯಾರಿ ನಡೆದಿತ್ತು. ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಕೃ. ಸೂರ್ಯನಾರಾಯಣ ರಾವ್‌ ಅವರು ಆರು ತಿಂಗಳು ಉಡುಪಿಯಲ್ಲಿ ನಿಂತು ಸಮ್ಮೇಳನವನ್ನು ಯಶಸ್ವಿಯಾಗುವಂತೆ ಮಾಡಿದ್ದರು ಎನ್ನುತ್ತಾರೆ ಆರ್‌ಎಸ್‌ಎಸ್‌ ಹಿರಿಯ ಕಾರ್ಯಕರ್ತ ಎಂ. ಸೋಮಶೇಖರ್‌ ಭಟ್‌.

Advertisement

ಉದಯವಾಣಿಯೊಂದಿಗೆ ತಮ್ಮ ಆಂದಿನ ನೆನಪನ್ನು ಹಂಚಿಕೊಂಡ ಅವರು, ವಿಹಿಂಪ ಮುಂದಾಳು ಶಿವಮೊಗ್ಗದ ಹೊ.ನ. ನರಸಿಂಹ ಮೂರ್ತಿ ಅಯ್ಯಂಗಾರರು 60 ಮಂದಿ ಸ್ವಾಮೀಜಿಯವರನ್ನು ಸಂಪರ್ಕಿಸಿ ಪಾಲ್ಗೊಳ್ಳುವಂತೆ ಮಾಡಿದ್ದರು. ಪುರಸಭೆ ಅಧ್ಯಕ್ಷರಾಗಿದ್ದ ಡಾ| ವಿ.ಎಸ್‌. ಆಚಾರ್ಯ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚನೆಯಾಗಿತ್ತು.  ನಾನು ಪುರಸಭೆಯ ಸದಸ್ಯನೂ ಸ್ವಾಗತ ಸಮಿತಿಯ ಓರ್ವ ಕಾರ್ಯದರ್ಶಿಯೂ ಆಗಿದ್ದೆ. ಪೂರ್ಣಪ್ರಜ್ಞ ಕಾಲೇಜಿನ ಮೈದಾನದಲ್ಲಿ ಸಮ್ಮೇಳನ ನಡೆದರೆ ವೆಂಕಟರಮಣ ದೇವಸ್ಥಾನ, ಬೋರ್ಡ್‌ ಹೈಸ್ಕೂಲ್‌, ಕ್ರಿಶ್ಚಿಯನ್‌ ಹೈಸ್ಕೂಲ್‌, ವಳಕಾಡು ಶಾಲೆ, ಎಂಜಿಎಂ ಕಾಲೇಜಿನಲ್ಲಿ ವಸತಿ ವ್ಯವಸ್ಥೆ ಮಾಡಿದ್ದೆವು. ಸಂಸ್ಕೃತ ಕಾಲೇಜು ಗೋಡೌನ್‌ ಆಗಿತ್ತು. ವೆಂಕಟರಮಣ ದೇವಸ್ಥಾನದಲ್ಲಿ ಮಹಿಳೆಯರಿಗೆ ವಸತಿ ಇತ್ತು. ಅಲ್ಲಿಗೆ ಸಮ್ಮೇಳನ ನಡೆಯುವ ಸ್ಥಳ ಹತ್ತಿರದಲ್ಲೇ ಇದ್ದುದರಿಂದ ಮಹಿಳೆಯರಿಗೆ ಅನುಕೂಲವಾಗಿತ್ತು. 

ಅದಮಾರು ಮಠದ ಅತಿಥಿಗೃಹದಲ್ಲಿ ಸ್ವಾಗತ ಸಮಿತಿ ಕಾರ್ಯಾಲಯವಿತ್ತು. ಎಲ್ಲ ವಸತಿ ವ್ಯವಸ್ಥೆ ಇರುವಲ್ಲಿ ತಾತ್ಕಾಲಿಕ ಟೆಲಿಫೋನ್‌ ಸಂಪರ್ಕ ಇಟ್ಟುಕೊಂಡ ಪರಿಣಾಮ ನಿಭಾಯಿಸಲು ಅನುಕೂಲ ವಾಯಿತು. ಕಾರ್ಯಾಲಯದಲ್ಲಿ ನಾನೇ ನಿಂತು ವ್ಯವಸ್ಥೆ ನೋಡಿಕೊಂಡಿದ್ದೆ.

ಹೀಗೊಂದು ಪ್ರಸಂಗ
ಮೇವಾಡದ ಮಹಾರಾಜರು ವಿಹಿಂಪ ಅಧ್ಯಕ್ಷರಾಗಿದ್ದರು. ಅವರಿಗೆ ನಗರಸಭೆಯಿಂದ ಪೌರ ಸಮ್ಮಾನ ನೀಡಿದಾಗ ಮಣಿ ಪಾಲದ ಶಿಲ್ಪಿ ಡಾ| ಟಿಎಂಎ ಪೈ ಅವರು ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್‌ ಸರಸಂಘಚಾಲಕ್‌ ಗುರೂಜಿ ಗೋಳವಲ್ಕರ್‌ ಅವರು ವೇದಿಕೆಯ ಕೆಳಗೆ ಕುಳಿತಿದ್ದರು. (ಸಂಘದ ಹಿರಿಯರು ಪೌರ ಸಮ್ಮಾನದಂತಹ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕುಳಿತುಕೊಳ್ಳುವುದಿಲ್ಲ) ಇದನ್ನು ನೋಡಿದ ಡಾ| ಟಿಎಂಎ ಪೈಯವರು ಕೆಳಗೆ ಬಂದು ಗುರೂಜಿ ಯವರನ್ನು ಒತ್ತಾಯಿಸಿ ವೇದಿಕೆಯ ಮೇಲಕ್ಕೆ ಕರೆದರು. “ನಾನು ಮಾತನಾಡುವುದಿಲ್ಲ’ ಎಂಬ ಷರತ್ತಿನ ಮೇರೆಗೆ ಮೇಲೆ ಬರಲು ಒಪ್ಪಿ ವೇದಿಕೆ ಏರಿದರು.

ಹೊಟೇಲಿನವರ ಸಹಕಾರ ಹೀಗಿತ್ತು
ಆರು ಕಡೆ ವಸತಿ ವ್ಯವಸ್ಥೆ ಕಲ್ಪಿಸಿದ್ದೆವು. ಎಲ್ಲ ವಸತಿ ಇರುವಲ್ಲಿ ಊಟದ ವ್ಯವಸ್ಥೆಯನ್ನೂ ಮಾಡಿದ್ದೆವು. ಎಲ್ಲರೂ ಅವರವರ ವಸತಿಗೆ ಹೋಗಿಯೇ ಊಟ ಮಾಡಬೇಕಿತ್ತು. ಬೆಳಗ್ಗೆ ಮಾತ್ರ ಸಕಾರಣ ಬೆಲೆಯಲ್ಲಿ (ರೀಸನೇಬಲ್‌) ಕಾಫಿ, ತಿಂಡಿ ಕೊಡಬೇಕೆಂದು ಹೊಟೇಲಿನವರಲ್ಲಿ ಮನವಿ ಮಾಡಿದಂತೆ ಹೊಟೇಲಿನವರು ಸಹಕರಿಸಿದ್ದರು. ಬೆಳಗ್ಗೆ 5.30ಕ್ಕೆ ಹೊಟೇಲು ತೆರೆದು ಸಹಕರಿಸಿದರು. ಇದೊಂದು ಸ್ಮರಣೀಯ ವಿಷಯ.

Advertisement

ನೀರಿನ ನಿಭಾವಣೆ ಹೀಗಿತ್ತು 
ಆಗ ಸ್ವರ್ಣಾ ಯೋಜನೆ ಇರಲಿಲ್ಲ. ನೀರಿಗಾಗಿ ಬಾವಿಗಳನ್ನೇ ನಂಬ ಬೇಕಿತ್ತು. 8-10 ಬಾವಿಗಳಲ್ಲಿ ಪಂಪಿಂಗ್‌ ನಡೆಸಿ ನೀರಿನ ವ್ಯವಸ್ಥೆ ಮಾಡಿದ್ದೆವು. ಡಿಸೆಂಬರ್‌ ಆದ ಕಾರಣ ನೀರಿನ ಸಮಸ್ಯೆ ಅಷ್ಟು ತಲೆದೋರಲಿಲ್ಲ.

ಹಣ ಸಂಗ್ರಹದಲ್ಲಿ ಉಳಿಕೆ
ಗ ಪ್ರತಿನಿಧಿ ಶುಲ್ಕ 35 ರೂ. ಇತ್ತು. ಅವಿಭಜಿತ ದ.ಕ. ಜಿಲ್ಲೆಯವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿ ಶುಲ್ಕ ಕೊಟ್ಟು ಬೆಳಗ್ಗೆ ಬಂದು ರಾತ್ರಿ ವಾಪಸಾಗುತ್ತಿದ್ದರು. ಆದ್ದರಿಂದ ಅವರಿಗೆ ವಸತಿ ವ್ಯವಸ್ಥೆ ಮಾಡುವ ಅಗತ್ಯ ಬರಲಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಶುಲ್ಕ ತೆತ್ತು ಪ್ರತಿನಿಧಿಗಳನ್ನು ನೋಂದಾಯಿಸಿದ ಪರಿಣಾಮ 1 ಲ.ರೂ. ಮೊತ್ತವನ್ನು ವಿಹಿಂಪ ನಿಧಿಗೆ ಕೊಡಲು ಸಾಧ್ಯವಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next