ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎರಡು ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನ ಶಿರ್ಲಾಲಿನ ಮಹಿಳೆಗೆ ಸೋಂಕು ದೃಢವಾಗಿದ್ದು, ಗ್ರಾಮವನ್ನು ಸೀಲ್ ಡೌನ್ ಮಾಡಲು ಸಿದ್ದತೆ ನಡೆಸಲಾಗುತ್ತಿದೆ.
ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ 34 ವರ್ಷದ ಮಹಿಳೆಗೆ ಕೋವಿಡ್-19 ಪಾಸಿಟಿವ್ ಕಂಡು ಬಂದಿದೆ. ಈಕೆಗೆ ಉಸಿರಾಟದ ಸಮಸ್ಯೆ ಇದ್ದು, ಗ್ರಾಮಸ್ಥರ ಒತ್ತಾಯದ ಕಾರಣದಿಂದ ಈಕೆ ಕೋವಿಡ್-19 ಪರೀಕ್ಷೆ ನಡೆಸಿದ್ದರು ಎನ್ನಲಾಗಿದೆ. ಈಕೆಗೆ ಸೋಂಕು ದೃಢಪಟ್ಟ ಕಾರಣ ಮಹಿಳೆಯನ್ನು ಇಂದು ಬೆಳಗ್ಗೆ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಿರ್ಲಾಲು ಗ್ರಾಮದಲ್ಲಿ ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಮುಂಬೈನಿಂದ ಆಗಮಿಸಿದ ಮತ್ತೋರ್ವನಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಖಾಸಗಿ ಲ್ಯಾಬ್ ನಲ್ಲಿ ಟೆಸ್ಟ್ ಮಾಡಿಸಿದ್ದ 30 ವರ್ಷದ ಯುವಕನಿಗೆ ಕೋವಿಡ್19 ಪಾಸಿಟಿವ್ ವರದಿ ಬಂದಿದೆ.
ಗುರುವಾರ ಜಿಲ್ಲೆಯ ಮೂಡಬಿದಿರೆಯ ಕಡಂದಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಗೂ ಕೋವಿಡ್-19 ಸೋಂಕು ದೃಢವಾಗಿದೆ. ಈತ ಮುಂಬೈನಿಂದ ಬಂದ ಕಡಂದಲೆ ಗ್ರಾಮದಲ್ಲಿ ಕ್ವಾರಂಟೈನ್ ನಲ್ಲಿದ್ದ.
ರಾಜ್ಯದಲ್ಲಿ ಇಂದು ಹೊಸ 196 ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1939ಕ್ಕೆ ಏರಿಕೆಯಾಗಿದೆ. 42 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇಬ್ಬರು ಸೋಂಕಿತರು ಕೋವಿಡ್-19 ಅಲ್ಲದ ಕಾರಣದಿಂದ ಮರಣಹೊಂದಿದ್ದಾರೆ.