Advertisement

ಆಪರೇಷನ್‌ ಕಮಲಕ್ಕೂ ಸಿದ್ಧತೆ

06:00 AM Sep 05, 2018 | |

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ ದೂರ ಇಡಲು ಸ್ಥಳೀಯ ಮಟ್ಟದಲ್ಲಿ ಆಪರೇಷನ್‌ ಕಮಲ ಕಾರ್ಯಾಚರಣೆಗೆ ಬಿಜೆಪಿ ಮುಂದಾಗಿದೆ. 30 ಅತಂತ್ರ ಸ್ಥಳೀಯ ಸಂಸ್ಥೆಗಳಲ್ಲಿ 11 ಕಡೆಯಾದರೂ ಅಧಿಕಾರ ಹಿಡಿಯುವಂತಾಗಬೇಕು ಎಂಬುದು ಬಿಜೆಪಿ ಗುರಿಯಾಗಿದ್ದು, ಪಕ್ಷೇತರರ ಸೆಳೆಯಲು ಈಗಾಗಲೇ ಜಿಲ್ಲಾ ನಾಯ ಕರಿಗೆ ಸೂಚನೆ ನೀಡಲಾಗಿದೆ. ಶ್ರೀರಾಮುಲು, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಸವರಾಜ ಬೊಮ್ಮಾಯಿ, ಮುರುಗೇಶ್‌ ನಿರಾಣಿ, ಉಮೇಶ್‌ ಕತ್ತಿ ಅವರಿಗೆ ಇದರ ಉಸ್ತುವಾರಿ ನೀಡಲಾಗಿದೆ. ಚಾಮರಾಜನಗರ, ಚಿತ್ರದುರ್ಗ ನಗರಸಭೆ, ಮೂಡಲಗಿ, ಕಾರ್ಕಳ ಪುರಸಭೆ ಹಾಗೂ ಕೇರೂರು ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಪಕ್ಷೇತರರ ಬೆಂಬಲ ಅಗತ್ಯವಾಗಿದ್ದು, ಸ್ಥಳೀಯ ಶಾಸಕರು, ಸಂಸದರ ಮತದಾನ ಹಾಕುವ ಅವಕಾಶ ಇರುವುದರಿಂದ ಪರಿಸ್ಥಿತಿ ನೋಡಿಕೊಂಡು ಆಪರೇಷನ್‌ ಕಮಲ ಕಾರ್ಯಾಚರಣೆಗೆ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. 

Advertisement

ಜತೆಗೆ, ನಿಪ್ಪಾಣಿ ನಗರಸಭೆ, ಚಿಕ್ಕೋಡಿ ಪುರಸಭೆಯಲ್ಲೂ ಸ್ಥಳೀಯವಾಗಿ ಮಾಡಿಕೊಂಡಿದ್ದ ಸಂಯುಕ್ತ ಮೈತ್ರಿ ಕೂಟ ಹೆಚ್ಚು ಸ್ಥಾನ ಗಳಿಸಿದ್ದರೂ ಅದರಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಾಗಿರುವುದರಿಂದ ಅಲ್ಲಿ ಅಧಿಕಾರ ಹಿಡಿಯಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಕಾಂಗ್ರೆಸ್‌-ಜೆಡಿಎಸ್‌ ಕಡೆ ಪಕ್ಷೇತರರು ವಾಲದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಒಂದೊಮ್ಮೆ ಪಕ್ಷೇತರರ ಒಕ್ಕೂಟಕ್ಕೆ ಅಧಿಕಾರ ಹಿಡಿಯಲು ಕೆಲವೆಡೆ ಒಂದೆರಡು ಸ್ಥಾನ ಕಡಿಮೆ ಬಿದ್ದರೆ ಬಿಜೆಪಿ ಬಾಹ್ಯ ಬೆಂಬಲಕ್ಕೆ ನಿರ್ದೇಶನ ನೀಡಲಾಗಿದೆ ಎನ್ನಲಾಗುತ್ತಿದೆ.

ಇದೇ ರೀತಿ, ಸಂಕೇಶ್ವರ ಮತ್ತು ತೇರದಾಳ ಪುರಸಭೆಯಲ್ಲಿ ಬಿಜೆಪಿ ಅಧಿಕಾರ ಪಡೆಯಲು ಒಂದು ಸ್ಥಾನ ಮಾತ್ರ ಬೇಕು. ರಾಯಚೂರು ನಗರಸಭೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸೇರಿ 14 ಸ್ಥಾನ ಗಳಿಸಿದ್ದು ಬಿಜೆಪಿ 12 ಸ್ಥಾನ ಪಡೆದಿದೆ. ಪಕ್ಷೇತರರು 9 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಮುದ್ದೇಬಿಹಾಳ ಪುರಸಭೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ 8 ಸ್ಥಾನ ಗಳಿಸಿದ್ದು, ಪಕ್ಷೇತರರು 5 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಕಾರವಾರ ನಗರಸಭೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸೇರಿ 15 ಸ್ಥಾನ ಗೆದ್ದಿವೆ. ಬಿಜೆಪಿ 11 ಸ್ಥಾನ ಗೆದ್ದಿದೆ. ಐವರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಇಲ್ಲೂ ಆಪರೇಷನ್‌ ಕಮಲ ಕಾರ್ಯಾಚರಣೆ ಆಗುವ ಸಾಧ್ಯತೆಯಿದೆ. ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ನಿಗದಿ ಹಿನ್ನಲೆಯಲ್ಲಿ ಕೆಲವೆಡೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸೇರಿದರೂ ಸ್ಥಳೀಯ ರಾಜಕಾರಣದ ಹಿನ್ನೆಲೆಯಲಿಲ್ಲ ಅಧಿಕಾರ ಹಿಡಿಯುವುದು ಕಷ್ಟವಾಗಬಹುದು ಎಂಬ ಮಾಹಿತಿಯೂ ಇದ್ದು ಅಂತಹ ಕಡೆ ಬಿಜೆಪಿ ಪರಿಸ್ಥಿತಿ ನೋಡಿಕೊಂಡು ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಹೊರಬಂದು ಪ್ರತ್ಯೇಕ ಬಣ ಮಾಡಿಕೊಂಡರೆ ಬಿಜೆಪಿ ಬೆಂಬಲ ಕೊಡುವ
ಬಗ್ಗೆಯೂ ರಹಸ್ಯ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಬಿಎಸ್‌ವೈ ಸೂಚನೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಈಗಾಗಲೇ ಜಿಲ್ಲಾಧ್ಯಕ್ಷರು ಹಾಗೂ ಬಿಜೆಪಿ ಶಾಸಕರಿಗೆ ಈ ಕುರಿತು ಸೂಚನೆ ನೀಡಿದ್ದು, ಬಿಜೆಪಿ ಶಾಸಕರು ಇಲ್ಲದ ಕಡೆ ಮಾಜಿ ಶಾಸಕರಿಗೆ ಹೊಣೆಗಾರಿಕೆ ನೀಡಲಾಗಿದೆ. ಬಿಜೆಪಿ ಸ್ವಂತ ಬಲದ ಮೇಲೆ 27 ಕಡೆ ಅಧಿಕಾರಕ್ಕೆ ಬಂದಿದ್ದು, ಇನ್ನೂ 11 ಕಡೆ ಅಧಿಕಾರ ಹಿಡಿಯುವ ಅವಕಾಶ ಇರುವುದರಿಂದ ಒಟ್ಟು 38 ಕಡೆ ಅಧಿಕಾರ ಹಿಡಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next