ಧಾರವಾಡ: ಅಪೌಷ್ಟಿಕತೆ ಎಂಬುದನ್ನು ಬೇರಿನಿಂದಲೇ ಸರಿಪಡಿಸುವ ನಿಟ್ಟಿನಲ್ಲಿ ರೂಪಿಸಿರುವ ಮಾತೃಪೂರ್ಣ ಯೋಜನೆಯ ಅನುಷ್ಠಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು. ನಗರದ ಕಲಾಭವನದಲ್ಲಿ ಜರುಗಿದ ಮಾತೃ ಪೂರ್ಣ ಯೋಜನೆ ಕುರಿತಂತೆ ಬೆಳಗಾವಿ ವಿಭಾಗಮಟ್ಟದ ಕಾರ್ಯಾಗಾರದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈಗಾಗಲೇ ಜಮಖಂಡಿ ಸೇರಿದಂತೆ ವಿವಿಧ ಕಡೆ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನ ಗೊಳಿಸಲಾಗಿದೆ. ಇದೀಗ ಅ.2ರಿಂದ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಲು ಈಗಾಗಲೇ ಪೂರ್ವ ಸಿದ್ಧತೆ ಕೈಗೊಂಡು ಸಕಲ ತಯಾರಿಯನ್ನು ಇಲಾಖೆ ಮಾಡಿಕೊಂಡಿದೆ ಎಂದರು.
ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಶೇ.40 ರಷ್ಟು ಗರ್ಭಿಣಿ ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿರುವುದು ಕಂಡು ಬಂದಿದ್ದು, ಇದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮಾತೃಪೂರ್ಣ ಯೋಜನೆ ರೂಪಿಸಿದೆ. ಈ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಪೋಷಕಾಂಶಯುಕ್ತ ಬಿಸಿಯೂಟ ಲಭ್ಯವಾಗಲಿದೆ ಎಂದರು.
ಅಂಗನವಾಡಿ ಕೇಂದ್ರಗಳಿಗೆ ಬಂದು ಊಟ ಮಾಡುವ ನಿಟ್ಟಿನಲ್ಲಿ ಮನೆ-ಮನೆಗೆ ತೆರಳಿ ಮಾಹಿತಿ ನೀಡಲಾಗುತ್ತಿದ್ದು, ಈಗಾಗಲೇ ಈ ಕುರಿತಂತೆ ಬೆಂಗಳೂರು ವಿಭಾಗಮಟ್ಟದ ಸಭೆ ಕೈಗೊಳ್ಳಲಾಗಿದೆ. ಬೆಳಗಾವಿ ವಿಭಾಗಮಟ್ಟದ ಈ ಸಭೆಯ ಬಳಿಕ ಮೈಸೂರು, ಕಲಬುರ್ಗಿ ವಿಭಾಗ ಮಟ್ಟದಲ್ಲೂ ಸಭೆ ನಡೆಸಲಾಗುವುದು.
ಈ ಸಭೆಗಳಲ್ಲಿ ಯೋಜನೆ ಅನುಷ್ಠಾನದಲ್ಲಿ ಇರುವ ಸಮಸ್ಯೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದು, ಈ ಸಮಸ್ಯೆಗಳ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಸಲಹೆ-ಸೂಚನೆ ನೀಡಲಾಗುತ್ತಿದೆ ಎಂದರು. ತಾಯಿ ಆರೋಗ್ಯದ ಮೇಲೆ ಮಗುವಿನ ಆರೋಗ್ಯ ನಿಂತಿದ್ದು, ಹೀಗಾಗಿ ಈ ತಾಯಿ ಬೇರಿನ ಆರೋಗ್ಯ ಸಮಸ್ಯೆ ಮೊದಲು ಸರಿಪಡಿಸಬೇಕಿದೆ.
ಇದಕ್ಕಾಗಿ ಈ ಯೋಜನೆ ಮೂಲಕ ಬಿಸಿ ಅನ್ನ, ಸಾಂಬಾರು, ಮೊಟ್ಟೆ, ಹಾಲು, ಶೇಂಗಾ ಉಂಡೆ ನೀಡಲಾಗುವುದು. ಈ ಯೋಜನೆಯ ಅನುಷ್ಠಾನದಲ್ಲಿ ಕೆಲ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಲು ಸೂಚಿಸಿದ್ದು, ಇದಕ್ಕಾಗಿ ಅಂಗನವಾಡಿ ಮಟ್ಟದ ಬಾಲ ವಿಕಾಸ ಸಮಿತಿಗಳನ್ನು ಬಳಸಿಕೊಳ್ಳಲು ತಿಳಿಸಲಾಗಿದೆ. ಕೆಲ ಗಂಭೀರ ಸಮಸ್ಯೆಗಳನ್ನು ಬಗೆಹರಿಸಲು ಡಿಸಿ ಮತ್ತು ಸಿಇಒ ಅವರಿಗೆ ಸೂಚನೆ ನೀಡಲಾಗಿದೆ.
ಹಂತ-ಹಂತವಾಗಿ ಕೆಲ ಸಮಸ್ಯೆಗಳನ್ನು ಬಗೆಹರಿಸಬೇಕಿದೆ ಎಂದರು. ಬೇರೆಯವರು ಮಾಡಿದ ಊಟ ನಾವೇಕೆ ಮಾಡಬೇಕೆಂಬ ಮನೋಭಾವ ಕೆಲವರಲ್ಲಿದ್ದು, ಇವುಗಳನ್ನು ವೈಜ್ಞಾನಿಕವಾಗಿ ಆಪ್ತ ಸಮಾಲೋಚನೆ ಮೂಲಕ ಬಗೆಹರಿಸುವ ಕೆಲಸ ಮಾಡುತ್ತಿದೆ. ಒಟ್ಟಿನಲ್ಲಿ ಯೋಜನೆ ಯಶಸ್ವಿ ಅನುಷ್ಠಾನಕ್ಕಾಗಿ ಕೆಳಹಂತದಿಂದ ಮೇಲು ಹಂತದವರಿಗೆ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ ಎಂದರು.