Advertisement

ಗೊಂದಲದ ನಡುವೆಯೇ ನಾಮಪತ್ರ ಸಲ್ಲಿಕೆಗೆ ಸಜ್ಜು

11:47 AM May 02, 2019 | Team Udayavani |

ಚನ್ನಪಟ್ಟಣ: ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಗೆ ತಾಲೂಕಿನಿಂದ ಸ್ಪರ್ಧಿಸಲು ಜೆಡಿಎಸ್‌ನಿಂದ ಒಮ್ಮತದ ಅಭ್ಯರ್ಥಿ ಆಯ್ಕೆಯ ಗೊಂದಲ ಮುಂದುವರಿದಿರುವ ನಡುವೆಯೇ, ಹಾಲಿ ಹಾಗೂ ಮಾಜಿ ನಿರ್ದೇಶಕರಿಬ್ಬರೂ ನಾಮಪತ್ರ ಸಲ್ಲಿಸಲು ಸಜ್ಜುಗೊಂಡಿದ್ದಾರೆ.

Advertisement

ಮೇ 2ರಂದು ನಾಮಪತ್ರ ಸಲ್ಲಿಸುವುದಾಗಿ ಹಾಲಿ ನಿರ್ದೇಶಕ ಎಸ್‌.ಲಿಂಗೇಶ್‌ಕುಮಾರ್‌ ಹಾಗೂ ಮಾಜಿ ನಿರ್ದೇಶಕ ಜಯಮುತ್ತು ಅವರು ತಮ್ಮ ಬೆಂಬಲಿಗರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿ ಕೊಂಡಿದ್ದಾರೆ. ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲು ಎರಡು ದಿನ ಕಾಲಾವಕಾಶ ನೀಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದ್ದಾರೆ. ಇದರಿಂದ ಸದ್ಯ ತಾಲೂಕು ಮುಖಂಡರ ಹೆಗಲಿಗೇ ಸಂಧಾನದ ಜವಾಬ್ದಾರಿ ಬಿದ್ದಿದೆ. ಇಬ್ಬರೂ ಸ್ಪರ್ಧಾಕಾಂಕ್ಷಿಗಳು ತಾವು ಸ್ಪರ್ಧೆ ಮಾಡಿಯೇ ತೀರುತ್ತೇವೆ ಎಂದು ಜಿದ್ದಿಗೆ ಬಿದ್ದಿರುವುದರಿಂದ ಸಂಧಾನದ ಫಲ ಸಿಗದೆ ಅವರೂ ಸಹ ಕೈಚೆಲ್ಲುವ ಪರಿಸ್ಥಿತಿ ಎದುರಾಗಿದೆ.

ಮನವೊಲಿಕೆ ಪ್ರಯತ್ನ ಅಸಾಧ್ಯ: ಮೇ 4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮೇ 2ರ ಗುರುವಾರ ಇಬ್ಬರೂ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ನಿಶ್ಚಿತವಾಗಿದೆ. ಈ ನಡುವೆ ಮಂಗಳವಾರವೂ ಒಂದು ಗುಂಪು ಇಬ್ಬರೂ ಆಕಾಂಕ್ಷಿಗಳ ಮನವೊಲಿಕೆ ಮಾಡಲು ಪ್ರಯತ್ನ ನಡೆಸಿತಾದರೂ ಅದು ಸಾಧ್ಯವಾಗಿಲ್ಲ. ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆಫ್, ಫೇಸ್‌ಬುಕ್‌ಗಳಲ್ಲಿ ಇಬ್ಬರೂ ಸ್ಪರ್ಧಾಕಾಂಕ್ಷಿಗಳ ಆಯ್ಕೆ ಸಂಬಂಧಿತ ಹೇಳಿಕೆಗಳು ಹರಿದಾಡುತ್ತಿವೆ.

ಬಿಜೆಪಿಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ: ಇನ್ನು ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ ಎಂದೇ ನಿರೀಕ್ಷಿಸಲಾಗಿದ್ದ ಬಿಜೆಪಿ ಸಭೆಯಲ್ಲಿ ಯಾವುದೇ ಅಭ್ಯರ್ಥಿ ಘೋಷಣೆ ಮಾಡಲಾಗಿಲ್ಲ. ಮೂಲಗಳ ಪ್ರಕಾರ ಕೇವಲ 8-10 ಸಂಘಗಳಲ್ಲಿ ಬೆಂಬಲಿತ ಮತದಾರರನ್ನು ಹೊಂದಿರುವ ಬಿಜೆಪಿ, ಅದರಲ್ಲೂ ಮಾಜಿ ಶಾಸಕ ಯೋಗೇಶ್ವರ್‌ ಅವರು ಇದೇ ಮೊದಲ ಬಾರಿಗೆ ಬಮೂಲ್ ಅಂಗಳಕ್ಕೆ ಬಂದಿದ್ದರಾದರೂ ಅವರಿಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ತಮ್ಮ ಸಹೋದರ ಸಿ.ಪಿ.ರಾಜೇಶ್‌ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುತ್ತಾರೆ ಎನ್ನುವ ಮಾತುಗಳೂ ಹರಿದಾಡಿದ್ದವು. ಆದರೆ, ಕಾದುನೋಡುವ ತಂತ್ರಕ್ಕೆ ಅವರು ಮೊರೆಹೋಗಿದ್ದಾರೆ ಎನ್ನಲಾಗುತ್ತಿದೆ.

ಕೇವಲ ಆರೋಪ ಮಾಡಲಿಕ್ಕೋಸ್ಕರವೇ ಸಭೆಯನ್ನು ಮೀಸಲಿಟ್ಟಿದ್ದ ಯೋಗೇಶ್ವರ್‌, ಚುನಾವಣೆ ಎದುರಿಸುವ ಮಾತುಗಳನ್ನಾಡಲಿಲ್ಲ, ಇದು ಪರೋಕ್ಷವಾಗಿ ಅವರು ತಮ್ಮ ಅಭ್ಯರ್ಥಿಯನ್ನು ಹಾಕುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದಂತಿತ್ತು. ಈ ಸಭೆಗೆ ಸಂಬಂಧಿಸಿದಂತೆ ತಮ್ಮದೇ ಆದ ಮತಬ್ಯಾಂಕ್‌ ಹೊಂದಿರುವ ಜೆಡಿಎಸ್‌ನ ಇಬ್ಬರೂ ಅಭ್ಯರ್ಥಿಗಳು ತಲೆಕೆಡಿಸಿ ಕೊಂಡಿಲ್ಲ ಎನ್ನುವುದು ಮಾತ್ರ ವಾಸ್ತವವಾಗಿದೆ.

Advertisement

ಮೂರನೇ ಅಭ್ಯರ್ಥಿ ಲೆಕ್ಕಕ್ಕಿಲ್ಲ?: ಇನ್ನು ಜೆಡಿಎಸ್‌ನ ಇಬ್ಬರೂ ಅಭ್ಯರ್ಥಿಗಳು ಒಮ್ಮತದಿಂದ ತಾವೇ ನಿರ್ಧಾರ ಮಾಡಿಕೊಂಡು ಸ್ಪರ್ಧೆ ಮಾಡಿ, ಇಲ್ಲದಿದ್ದರೆ ಮೂರನೇ ಅಭ್ಯರ್ಥಿ ಸ್ಪರ್ಧೆಗೆ ಅವಕಾಶ ನೀಡಲಾಗುವುದು ಎಂದು ವರಿಷ್ಠ ಎಚ್.ಡಿ.ದೇವೇಗೌಡ ಗುಟುರು ಹಾಕಿದ್ದರು. ಆದರೆ, ಮೂರನೇ ಅಭ್ಯರ್ಥಿ ಈ ಇಬ್ಬರ ನಡುವೆ ಸ್ಪರ್ಧೆ ಮಾಡುತ್ತಾರೆಯೇ ಎಂಬುದು ಇದೀಗ ನಿಗೂಡ ಪ್ರಶ್ನೆಯಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಪ್ರತಿ ಮತಕ್ಕೆ 5 ಲಕ್ಷ ರೂ.ವರೆಗೂ ಖರ್ಚು ಮಾಡಲು ಸ್ಪರ್ಧಾಕಾಂಕ್ಷಿಗಳು ಸಿದ್ಧವಾಗಿದ್ದಾರೆ. ಬಮೂಲ್ನ ಪ್ರತಿ ಪಟ್ಟುಗಳೂ ಅವರಿಗೆ ಕರಗತವಾಗಿವೆ. ಅವರ ನಡುವೆ ಬಮೂಲ್ನ ಗಂಧ ಗಾಳಿಯೇ ತಿಳಿಯದ ಮೂರನೇ ಅಭ್ಯರ್ಥಿ ಹೇಗೆ ಚುನಾವಣೆ ಎದುರಿಸುತ್ತಾರೆ ಎಂಬ ಮಾತುಗ‌ಳು ಜೆಡಿಎಸ್‌ ವಲಯದಲ್ಲಿ ಕೇಳಿ ಬರುತ್ತಿದೆ. ತೆರೆಮರೆಯಲ್ಲಿದ್ದ ವ್ಯಕ್ತಿಯೊಬ್ಬರನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುನ್ನೆಲೆಗೆ ತಂದು, ಅವರ ರಾಜಕೀಯ ಜೀವನವನ್ನೂ ಹಾಳು ಮಾಡುತ್ತಿರುವುದು ಏತಕ್ಕೆ ಎಂದು ಮುಖಂಡರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮನವೊಲಿಕೆ ಜೋರು: ಮತದಾನದ ಹಕ್ಕು ಹೊಂದಿರುವ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರ ಮನವೊಲಿಕೆ ಜೋರಾಗಿ ನಡೆಯುತ್ತಿದೆ. ಪ್ರತಿ ಮತದಾರರನ್ನು ಖುದ್ದಾಗಿ ಭೇಟಿ ಮಾಡುತ್ತಿರುವ ಆಕಾಂಕ್ಷಿಗಳು, ತಮ್ಮನ್ನು ಬೆಂಬಲಿಸುವಂತೆ ದುಂಬಾಲು ಬಿದ್ದಿದ್ದಾರೆ. ಪ್ರತಿನಿತ್ಯ ಮತದಾರರನ್ನು ಸಂಪರ್ಕಿಸುತ್ತಿರುವ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ತಮ್ಮ ಸಾಧನೆಗಳನ್ನು ಬಿಚ್ಚಿಡುವ ಜತೆಗೆ ಮತದಾರರ ಕುಟುಂಬದವರು, ಸಂಬಂಧಿಗಳ ಮೂಲಕವೂ ಶಿಫಾ ರಸ್ಸು ಮಾಡಿಸುತ್ತಿದ್ದಾರೆ. ಒಟ್ಟಾರೆ ಬಮೂಲ್ ಚುನಾ ವಣೆ ದಿನ ಸಮೀಪಿಸುತ್ತಿದ್ದಂತೆಯೇ ರಂಗೇರುತ್ತಿದೆ. ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನೂ ಮೀರಿ ಸುತ್ತಿವೆ. ಈ ಜಿದ್ದಾಜಿದ್ದಿಯಲ್ಲಿ ಯಾರು ನಿರ್ದೇಶಕ ಸ್ಥಾನ ಅಲಂಕರಿಸುತ್ತಾರೆಯೋ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next