Advertisement

ವಿಕಲಚೇತನರಿಗೆ ವಾಹನ ವಿತರಿಸಲು ಸಿದ್ಧತೆ

02:44 PM Jul 27, 2018 | |

ಬಳ್ಳಾರಿ: ಜಿಲ್ಲೆಯ ವಿಕಲಚೇತನರಿಗೆ ವಿತರಿಸಲಾಗುವ ತ್ರಿಚಕ್ರ ವಾಹನಗಳು ನಗರದ ವಿಕಲಚೇತರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆವರಣದಲ್ಲಿ ಸಿದ್ಧವಾಗಿದ್ದು, ಆ.15ರಂದು ನಡೆಯುವ ಸ್ವಾತಂತ್ರ್ಯೋತ್ಸವ ದಿನದಂದು ಫಲಾನುಭವಿಗಳಿಗೆ ವಿತರಿಸುವ ಸಾಧ್ಯತೆಯಿದೆ.

Advertisement

ಹಿಂದಿನ ಕಾಂಗ್ರೆಸ್‌ ಸರ್ಕಾರ ಕಳೆದ 2015-16ನೇ ಸಾಲಿನಲ್ಲಿ ಮೊದಲ ಬಾರಿಗೆ ವಿಕಲಚೇತನರಿಗೆ (ದೈಹಿಕ ನ್ಯೂನ್ಯತೆಯುಳ್ಳ) ತ್ರಿಚಕ್ರ ವಾಹನಗಳನ್ನು ವಿತರಿಸುವಂತೆ ಆದೇಶ ಹೊರಡಿಸಿತ್ತು. ಅದರಂತೆ ಮೊದಲ ವರ್ಷ (2015-16) ಮೊದಲ ಹಂತದಲ್ಲಿ 38 ತ್ರಿಚಕ್ರ ವಾಹನಗಳನ್ನು ವಿಕಲಚೇತನರಿಗೆ ಇಲಾಖೆಯು ವಿತರಿಸಿತ್ತು. ಆದರೆ, ಆಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಉಮಾಶ್ರೀ ಅವರು, ಮಹಿಳಾ ವಿಕಲಚೇತನರಿಗೂ ಹೆಚ್ಚಿನ ಪ್ರಮಾಣದಲ್ಲಿ ವಿತರಿಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಪುನಃ 14 ವಾಹನಗಳನ್ನು ಖರೀದಿಸಿ ವಿಶೇಷ ಮಹಿಳೆಯರಿಗೆ ವಿತರಿಸಲಾಗಿತ್ತು. ಬಳಿಕ 2016-17ರಲ್ಲಿ 72 ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದ್ದು, ಇದೀಗ 2017-18ನೇ ಸಾಲಿನ ಒಟ್ಟು 135 ತ್ರಿಚಕ್ರ ವಾಹನಗಳು ಇಲಾಖೆಯ ಕಚೇರಿ ಆವರಣದಲ್ಲಿ ಫಲಾನುಭವಿಗಳ ಕೈ ಸೇರಲು ಸಿದ್ಧವಾಗಿವೆ. ಅಂದು ಧ್ವಜಾರೋಹಣದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಇಲಾಖೆಗೆ ಸಂಬಂಧಪಟ್ಟ ಸಚಿವರ ಸಮಕ್ಷಮದಲ್ಲಿ ವಾಹನಗಳ ಬೀಗವನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ಮೂಲಕ ವಾಹನಗಳನ್ನು ವಿತರಿಸಲಾಗುತ್ತದೆ.

ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ ಬಳ್ಳಾರಿ (ನಗರ ಕ್ಷೇತ್ರ ಬಿಟ್ಟು) ಗ್ರಾಮೀಣ 27, ಹಡಗಲಿ 21, ಸಂಡೂರು 8, ಹೊಸಪೇಟೆ 63, ಹ.ಬೊ.ಹಳ್ಳಿ 20, ಕಂಪ್ಲಿ 40, ಕೂಡ್ಲಿಗಿ 23, ಸಿರುಗುಪ್ಪ 28 ಸೇರಿ ಒಟ್ಟು 230 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಕೇವಲ 135 ವಾಹನಗಳಿಗೆ ಮಾತ್ರ ಬೇಡಿಕೆ ಇರುವುದರಿಂದ ವಾಹನ ಪಡೆದು ಎರಡನೇ ಬಾರಿಗೆ ಸಲ್ಲಿಸಿದ ಒಟ್ಟು 44 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, ಈ ಪೈಕಿ ವಿಜಯನಗರ (ಹೊಸಪೇಟೆ) ಕ್ಷೇತ್ರದ್ದೇ 24 ಅರ್ಜಿಗಳಾಗಿವೆ. ಒಟ್ಟು 135 ವಾಹನಗಳನ್ನು ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೂ ತಲಾ 15 ವಾಹನಗಳನ್ನು ವಿತರಿಸಲಾಗುತ್ತದೆ ಎನ್ನುತ್ತವೆ ಇಲಾಖೆಯ ಮೂಲಗಳು.

ಪ್ರತಿ ವಾಹನಕ್ಕೆ ಅಂದಾಜು 64500 ರೂ. ವೆಚ್ಚವಾಗಿದ್ದು, 135 ವಾಹನಗಳಿಗೆ ಒಟ್ಟು ಅಂದಾಜು 87 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ. ಕಳೆದ ಜೂನ್‌ ತಿಂಗಳಾಂತ್ಯದಲ್ಲಿ ತ್ರಿಚಕ್ರ ವಾಹನಗಳನ್ನು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಖರೀದಿಸಿದೆ. ಜಿಲ್ಲೆಯಲ್ಲಿ ಬುದ್ಧಿಮಾಂದ್ಯರು, ಕಿವುಡರು, ಮೂಗರು, ಅಂಧರು, ದೈಹಿಕ ನ್ಯೂನ್ಯತೆಯುಳ್ಳವರು ಸೇರಿ ಒಟ್ಟು 21 ಸಾವಿರಕ್ಕೂ ವಿಕಲಚೇತನರಿದ್ದು, ಈ ಪೈಕಿ ದೈಹಿಕ ನ್ಯೂನ್ಯತೆಯುಳ್ಳ ಅಂಗವಿಕಲರಿಗೆ ಮಾತ್ರ ಇಲಾಖೆಯಿಂದ ತ್ರಿಚಕ್ರ ವಾಹನವನ್ನು ವಿತರಿಸಲಾಗುತ್ತದೆ ಎಂದು ಇಲಾಖೆಯ ಸಬಲೀಕರಣ ಅಧಿಕಾರಿ ಮಹಾಂತೇಶ್‌ ತಿಳಿಸಿದ್ದಾರೆ.

ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಂದ ತ್ರಿಚಕ್ರ ವಾಹನಕ್ಕಾಗಿ ಅರ್ಜಿ ಸಲ್ಲಿಸಿದ್ದ 230 ಫಲಾನುಭವಿಗಳಲ್ಲಿ 44 ತಿರಸ್ಕರಿಸಲಾಗಿದೆ. ಇನ್ನುಳಿದ 186 ಫಲಾನುಭವಿಗಳಲ್ಲಿ ಸದ್ಯ ಖರೀದಿಸಿರುವ ವಾಹನಗಳು 135 ಜನರಿಗೆ ಮಾತ್ರ ಸಾಲಲಿದ್ದು, ಇನ್ನುಳಿದ 51 ಫಲಾನುಭವಿಗಳಿಗೆ ಜಿಲ್ಲಾ ಖನಿಜ ನಿಧಿಯಿಂದ ಖರೀದಿಸಿ ವಿತರಿಸುವ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಸೂಚನೆ ಬಂದಲ್ಲಿ ಉಳಿದ 51 ಫಲಾನುಭವಿಗಳಿಗೂ ಪ್ರಸಕ್ತ ವರ್ಷವೇ ತ್ರಿಚಕ್ರ ವಾಹನ ಭಾಗ್ಯ ದೊರೆಯಲಿದೆ.

Advertisement

ವಿಕಲಚೇತನರಿಗಾಗಿ ಇಲಾಖೆಯಿಂದ ಒಟ್ಟು 135 ವಾಹನಗಳನ್ನು ಖರೀದಿಸಲಾಗಿದೆ. ಆ.15 ರಂದು ವಿತರಿಸಲು ಸಿದ್ಧತೆ ನಡೆಸಿದ್ದು, ಎಲ್ಲ ವಾಹನಗಳಿಗೂ ಆರ್‌ ಟಿಒ ಕಚೇರಿಯಲ್ಲಿ ಫಲಾನುಭವಿಗಳ ಹೆಸರಲ್ಲಿ ನೋಂದಣಿ ಮಾಡಿಸಿ, ಬೀಗದ ಕೈ ಜತೆಗೆ ಆರ್‌ಸಿ ಬುಕ್‌ ಕೊಟ್ಟು ಕಳುಹಿಸಲಾಗುವುದು. ಆದರೆ, ಫಲಾನುಭವಿಗಳು ವಾಹನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. 135 ವಾಹನಗಳನ್ನು ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ತಲಾ 15 ಫಲಾನುಭವಿಗಳಿಗೆ ವಾಹನ ವಿತರಿಸಲಾಗುತ್ತದೆ.
ಮಹಾಂತೇಶ್‌,
ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.

Advertisement

Udayavani is now on Telegram. Click here to join our channel and stay updated with the latest news.

Next