Advertisement

ವಿಪತ್ತು ಎದುರಿಸಲು ಸನ್ನದ್ಧ: ಹರ್ಷವರ್ಧನ್‌

02:02 AM May 10, 2020 | Sriram |

ಹೊಸದಿಲ್ಲಿ: ಇತರ ಅನೇಕ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೋವಿಡ್-19 ತೀರಾ ಗಂಭೀರವಾಗಿಲ್ಲ. ಆದರೂ ಮುಂಬರುವ ವಿಪತ್ತನ್ನು ಎದುರಿಸಲು ದೇಶ ಸನ್ನದ್ಧವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಭರವಸೆ ನೀಡಿದ್ದಾರೆ.

Advertisement

ದೇಶದ ಜನತೆ ಇನ್ನು ಮುಂದೆ ಕೋವಿಡ್-19 ಜತೆಗೆ ಜೀವಿಸಲು ಕಲಿಯಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ ಮಾರನೇ ದಿನವೇ ಸಚಿವ ಹರ್ಷವರ್ಧನ್‌ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ವಾಗುತ್ತಿದ್ದು, ಮುಂದೆ ಅಪಾಯ ಕಾದಿದೆ ಎಂಬ ಸುಳಿವನ್ನೂ ಸಚಿವರು ನೀಡಿದಂತಿದೆ.

ಕೋವಿಡ್-19 ಸ್ಥಿತಿಗತಿ ಕುರಿತು ಶನಿವಾರ ಈಶಾನ್ಯ ರಾಜ್ಯಗಳ ಆರೋಗ್ಯ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಚಿವ ಹರ್ಷವರ್ಧನ್‌ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರು, ಅಮೆರಿಕ, ಇಟಲಿ ಮತ್ತು ಅಭಿವೃದ್ಧಿ ಹೊಂದಿರುವ ಇತರ ಐರೋಪ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಗಂಭೀರ ಎನ್ನುವಂಥ ಪರಿಸ್ಥಿತಿ ಇಲ್ಲ. ಆದರೂ ನಾವು ಇಡೀ ದೇಶವನ್ನು ಮುಂದೆ ಬರುವ ಪರಿಸ್ಥಿತಿಗೆ ಸಜ್ಜಾಗಿಸಿದ್ದೇವೆ ಎಂದಿದ್ದಾರೆ.

ಶುಕ್ರವಾರವಷ್ಟೇ ಮಾತನಾಡಿದ್ದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌, ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಜನರು ಮತ್ತೆ ಎಂದಿನಂತೆ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಮುಂದೆ ನಾವು ಕೊರೊನಾ ಜತೆಗೆ ಜೀವಿಸಬೇಕಾಗುತ್ತದೆ. ಮಾಸ್ಕ್ ಧಾರಣೆ, ಕೈ ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಂತಾದ ವೈಯಕ್ತಿಕ ನಡವಳಿಕೆಗಳು ನಮ್ಮ ಜೀವನ ಶೈಲಿಯಲ್ಲಿ ಸೇರಿಕೊಳ್ಳಬೇಕಾಗಿದೆ ಎಂದಿದ್ದರು.

ಮರಣ ಪ್ರಮಾಣ ಹೆಚ್ಚಾಗಿಲ್ಲ
ಕೋವಿಡ್-19 ವಿರುದ್ಧ ಭಾರತವು ಸಮರ್ಥ ಹೋರಾಟ ನಡೆಸುತ್ತಿದೆ. ನಮ್ಮ ದೇಶದಲ್ಲಿ ಮರಣ ಪ್ರಮಾಣ ಶೇ.3.3ರಲ್ಲೇ ಮುಂದುವರಿದಿದೆ. ಗುಣ ಹೊಂದುವ ಪ್ರಮಾಣ ಕೂಡ ಶೇ.29.9ಕ್ಕೆ ಏರಿದೆ. ಇವೆಲ್ಲವೂ ಉತ್ತಮ ಸೂಚನೆಗಳು ಎಂದು ಹರ್ಷವರ್ಧನ್‌ ಹೇಳಿದ್ದಾರೆ. ಮೂರು ದಿನಗಳಲ್ಲಿ ಸೋಂಕು ದ್ವಿಗುಣ ಅವಧಿ 11 ದಿನಗಳಾಗಿದ್ದವು. ಕಳೆದ 7 ದಿನಗಳಲ್ಲಿ ಇದು 9.9 ದಿನಗಳಾಗಿದ್ದವು ಎಂದೂ ಅವರು ಮಾಹಿತಿ ನೀಡಿದ್ದಾರೆ.

Advertisement

32.76 ಲಕ್ಷ ಪಿಪಿಇ ವಿತರಣೆ
ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯ ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರತೀ ದಿನದ ದತ್ತಾಂಶಗಳ ಮೇಲೆ ನಿಗಾ ಇರಿಸಿದೆ ಎಂದೂ ಹರ್ಷವರ್ಧನ್‌ ಹೇಳಿದ್ದಾರೆ. ದೇಶದಲ್ಲಿ ಒಟ್ಟಾರೆ 843 ಕೋವಿಡ್-19 ಕೇಂದ್ರಿತ ಆಸ್ಪತ್ರೆಗಳಿದ್ದು, 1,65,991 ಹಾಸಿಗೆಗಳನ್ನು ಹೊಂದಿವೆ. ಒಟ್ಟು 7,745 ಕ್ವಾರಂಟೈನ್‌ ಕೇಂದ್ರಗಳಿವೆ. ನಾವು 69 ಲಕ್ಷ ಎನ್‌-95 ಮಾಸ್ಕ್ಗಳನ್ನು ವಿತರಿಸಿದ್ದೇವೆ. ಕೇಂದ್ರ ಸರಕಾರದ ವತಿಯಿಂದ 32.76 ಲಕ್ಷ ಪಿಪಿಇ (ವೈಯಕ್ತಿಕ ಸುರಕ್ಷಾ ಉಡುಗೆ) ಗಳನ್ನು ಕೂಡ ರಾಜ್ಯ ಸರಕಾರಗಳಿಗೆ ನೀಡಲಾಗಿದೆ. ಪುಣೆಯಲ್ಲಿ ಹೊಸದಾಗಿ ಪ್ರಯೋಗಾಲಯ ನಿರ್ಮಿಸಲಾಗಿದ್ದು, ಈಗ ಒಟ್ಟು 453 ಲ್ಯಾಬ್‌ಗಳು ದೇಶದಲ್ಲಿವೆ ಎಂದೂ ಹರ್ಷವ ರ್ಧನ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next