Advertisement

17ರಿಂದ ಕಾಲೇಜು ಆರಂಭಕ್ಕೆ ಸಿದ್ಧತೆ: ಹಲಸೆ

07:38 PM Nov 14, 2020 | Suhan S |

ದಾವಣಗೆರೆ: ದಾವಣಗೆರೆ ವಿವಿ ವ್ಯಾಪ್ತಿಯ ಎಲ್ಲ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ನ.17ರಿಂದ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್‌-19ರ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದ ಜತೆಗೆ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.

Advertisement

ಶುಕ್ರವಾರ ಆನ್‌ಲೈನ್‌ನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಸಂಲಗ್ನ ಕಾಲೇಜುಗಳ ಪ್ರಾಚಾರ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್‌-19ರ ಎಲ್ಲ ಮೂಲ ಮತ್ತು ಸಾಮಾನ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷವನ್ನು 8 ತಿಂಗಳ ನಂತರ ಮತ್ತೆ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯ ಧನಸಹಾಯ ಆಯೋಗ ಮತ್ತು ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದ ಎಲ್ಲ ಸೂಚನೆ ಮತ್ತು ನಿಯಮಾವಳಿಗಳನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರಲು ಎಲ್ಲ ಕಾಲೇಜು ಮತ್ತು ವಿಶ್ವವಿದ್ಯಾನಿಲಯ ಆವರಣದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಆರೋಗ್ಯದ ನಿರಂತರ ಮೇಲ್ವಿಚಾರಣೆಯ ಉದ್ದೇಶದಿಂದ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರಗಳು ಮತ್ತು ಎಲ್ಲ ಕಾಲೇಜುಗಳಲ್ಲಿ ಕೋವಿಡ್‌ ನಿಯಂತ್ರಣ ಕೇಂದ್ರ ಸ್ಥಾಪಿಸಿ, ನೋಡಲ್‌ ಅಧಿಕಾರಿ ನೇಮಿಸಲಾಗುತ್ತಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳು ನಡೆಯಲಿವೆ. ಆನ್‌ಲೈನ್‌ನಲ್ಲೂ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.

ತರಗತಿಗೆ ಹಾಜರಾಗಲು ಇಚ್ಛಿಸುವ ವಿದ್ಯಾರ್ಥಿಗಳು ಕೋವಿಡ್‌-19 ಪರೀಕ್ಷೆಯ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ. ಮಾಸ್ಕ್ ಧಾರಣೆ, ಸ್ಯಾನಿಟೈಸರ್‌ ಬಳಕೆ, ಸಾಮಾಜಿಕ ಅಂತರ ಕಾಪಾಡುವುದರ ಜತೆಗೆ ವೈಯಕ್ತಿಕ ಜವಾಬ್ದಾರಿಯ ಬಗ್ಗೆ ಪಾಲಕರಿಂದ ಅನುಮತಿ ಪತ್ರವನ್ನೂ ಸಲ್ಲಿಸಬೇಕು. ಸರ್ಕಾರ ಮತ್ತು ವಿಶ್ವವಿದ್ಯಾಲಯದ ನಿಯಮ ಪಾಲಿಸುವುದಾಗಿ ವೈಯಕ್ತಿಕ ಮುಚ್ಚಳಿಕೆ ಪತ್ರ ಬರೆದುಕೊಡುವುದನ್ನು ಸಹ ಕಡ್ಡಾಯ ಮಾಡಲಾಗಿದೆ. ವಿದ್ಯಾರ್ಥಿಗಳು ಹಾಜರಾಗಲು ಸಾಧ್ಯವಾಗದಿದ್ದರೆ ಆನ್‌ಲೈನ್‌ನಲ್ಲಿ ಪಾಲ್ಗೊಳ್ಳಬಹುದು. ಹಾಜರಾತಿ ಕಡ್ಡಾಯಗೊಳಿಸಿಲ್ಲ ಎಂದು ತಿಳಿಸಿದರು.

Advertisement

ಪ್ರಾರಂಭಿಕ ಹಂತದಲ್ಲಿ ಬೋಧನೆಗೆ ಮಾತ್ರ ತರಗತಿಗಳ ಸೀಮಿತಗೊಳಿಸಿದ್ದು, ಹಂತ ಹಂತವಾಗಿ ಪ್ರಾಯೋಗಿಕ ತರಬೇತಿಗೆ ಆದ್ಯತೆ ನೀಡಲಾಗುವುದು. ಕ್ಯಾಂಟೀನ್‌, ಹಾಸ್ಟೆಲ್‌, ಕಾಲೇಜು ಕೊಠಡಿಗಳಲ್ಲಿ ಪ್ರತಿದಿನವೂ ಸ್ಯಾನಿಟೈಸೇಷನ್‌ ಮಾಡುವುದು, ಕಿಟಕಿ, ಬಾಗಿಲುಗಳನ್ನು ಸ್ವತ್ಛಗೊಳಿಸುವುದು, ಸ್ಪರ್ಶಿಸಲು ಅವಕಾಶವಿರದ ಕಸದ ತೊಟ್ಟಿಯ ವ್ಯವಸ್ಥೆ ಮಾಡಲಾಗುತ್ತಿದೆ. ಕುಡಿಯುವ ನೀರನ್ನು ವಿದ್ಯಾರ್ಥಿಗಳೇ ತರಬೇಕು. ಊಟ-ಉಪಾಹಾರದ ಸಂದರ್ಭದಲ್ಲೂ ಸರ್ಕಾರದ ನಿಮಯ ಪಾಲಿಸಲೇಬೇಕು.ಯಾವುದೇ ಲೋಪವಾದರೂ ಕಾಲೇಜಿನ ಪ್ರಾಚಾರ್ಯರು ಮತ್ತು ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು ಎಂದು ಸೂಚಿಸಿದರು.

ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಕಾಲಕಾಲಕ್ಕೆ ಧ್ವನಿವರ್ಧಕ ಬಳಸಿ ಸರ್ಕಾರದ ಆದೇಶ, ಸೂಚನೆ ನೀಡಬೇಕು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅಗತ್ಯವಿರುವ ಪೂರಕ ಮಾಹಿತಿ ಒದಗಿಸಲು ಪ್ರಾಧ್ಯಾಪಕರು ಗಮನ ನೀಡಲು ತಿಳಿಸಲಾಗಿದೆ ಎಂದರು.

ಕುಲಸಚಿವ ಪ್ರೊ.ಬಸವರಾಜ ಬಣಕಾರ, ವಿವಿ ಕೋವಿಡ್‌ ನೋಡಲ್‌ ಅಧಿಕಾರಿ ಡಾ| ಶರತ್‌, ವಿವಿಧ ಕಾಲೇಜುಗಳ ಪ್ರಾಚಾರ್ಯರು, ನೋಡಲ್‌ ಅಧಿಕಾರಿಗಳು ಭಾಗವಹಿಸಿದ್ದರು.

ಕೋವಿಡ್‌ ತಪಾಸಣೆ ಮಾಡಿಸಿಕೊಳ್ಳಿ :

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜು, ಸ್ನಾತಕೋತ್ತರ ಪದವಿ ತರಗತಿಗಳು ನ.17 ರಿಂದ ಪ್ರಾರಂಭವಾಗುವುದರಿಂದ ತರಗತಿಗೆ ಹಾಜರಾಗುವ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರ್‌ಟಿಪಿಸಿಆರ್‌ ಕೋವಿಡ್‌-19 ಟೆಸ್ಟ್‌ ಮಾಡಿಸಿಕೊಂಡು, ನೆಗೆಟಿವ್‌ ವರದಿಯೊಂದಿಗೆ ಕಾಲೇಜಿಗೆ ಹಾಜರಾಗಬೇಕು. ಈಗಾಗಲೇ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಪಡೆದಿರುವ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳಲ್ಲಿ ಹಾಜರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next