Advertisement

ಉಪ ಚುನಾವಣೆಗೆ ಸಿದ್ಧತೆ: ಯಾರೇ ಬಂದರೂ ಸೇರಿಸಿಕೊಳ್ಳುತ್ತೇವೆ

09:46 AM Oct 13, 2019 | Team Udayavani |

ಬೆಂಗಳೂರು: ಚಳಿಗಾಲದ ಅಧಿವೇಶನ ಮುಕ್ತಾಯವಾಗುತ್ತಿರುವಂತೆ ಕಾಂಗ್ರೆಸ್‌ ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಶನಿವಾರ 15 ಕ್ಷೇತ್ರಗಳ ಉಪ ಚುನಾವಣೆ ಸಿದ್ದತೆ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವೀಕ್ಷಕರ ಸಭೆಯನ್ನು ವಿಧಾನಸೌಧ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ನಡೆಸಿದರು.

Advertisement

ಈಗಾಗಲೇ ಪಕ್ಷದ ವೀಕ್ಷಕರು ಉಪ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ತೆರಳಿ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದುಕೊಂಡು ಬಂದಿದ್ದರು. ಆದರೆ, ಚುನಾವಣೆ ಮುಂದೂಡಿಕೆಯಾಗಿದ್ದರಿಂದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮಗೊಳಿಸದೇ ಸ್ಥಗಿತಗೊಳಿಸಲಾಗಿತ್ತು.

ಈಗ ಡಿಸೆಂಬರ್‌ 5 ಕ್ಕೆ ಚುನಾವಣೆ ನಡೆಸಲು ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಈಗ ಮತ್ತೆ ಅನರ್ಹರ ಕ್ಷೇತ್ರಗಳಲ್ಲಿ ರಾಜಕೀಯ ಲೆಕ್ಕಾಚಾರಗಳು ಬದಲಾಗಿವೆ.

ಬಿಜೆಪಿಯವರು ಅನರ್ಹರ ಕ್ಷೇತ್ರಗಳಿಗೆ ಅವರಿಗೇ ಟಿಕೆಟ್‌ ನೀಡಲು ಮುಂದಾಗಿರುವುದರಿಂದ ಆ ಕ್ಷೇತ್ರಗಳಲ್ಲಿ 2018 ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳು ಪಕ್ಷದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವರನ್ನು ಸಮಾಧಾನ ಮಾಡಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದರು. ಆದರೆ, ಕೆಲವರನ್ನು ನೇರವಾಗಿಯೇ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್‌ ನೀಡದಿದ್ದರೆ, ಪಕ್ಷೇತರ ಅಥವಾ ಬೇರೆ ಪಕ್ಷದ ಬಾಗಿಲು ಬಡಿಯುವುದಾಗಿ ಘೋಷಿಸಿದ್ದಾರೆ ಇದೆಲ್ಲವನ್ನೂ ಗಮನಿಸಿ ಕಾರ್ಯತಂತ್ರ ರೂಪಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಹೇಳಲಾಗಿದೆ.

ಬಿಜೆಪಿ ಪರಾಜಿತ ಅಭ್ಯರ್ಥಿಗಳ ಈ ನಡೆಯಿಂದ ಕಾಂಗ್ರೆಸ್‌ ಹದಿನೈದು ಕ್ಷೇತ್ರಗಳಲ್ಲಿ ಲೆಕ್ಕಾಚಾರ ಬದಲಾಯಿಸಿಕೊಂಡಿದ್ದು, ಬಿಜೆಪಿಯಿಂದ ಅಸಮಾಧಾನಗೊಂಡು ಪಕ್ಷಕ್ಕೆ ಸೇರ ಬಯಸುವವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಕುರಿತಂತೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಅದೇ ಕಾರಣಕ್ಕೆ ಮತ್ತೂಂದು ಬಾರಿ ಅನರ್ಹ ಶಾಸಕರ ಕ್ಷೇತ್ರಗಳಿಗೆ ವೀಕ್ಷಕರನ್ನು ಕಳುಹಿಸಿ, ಅಭಿಪ್ರಾಯ ಪಡೆಯಲು ನಾಯಕರು ನಿರ್ಧರಿಸಿದ್ದಾರೆ.

Advertisement

ಹೊಸಕೋಟೆಯಲ್ಲಿ ಶರತ್‌ ಬಚ್ಚೇಗೌಡ, ಹಿರೇಕೆರೂರು ಕ್ಷೇತ್ರದಲ್ಲಿ ಯು.ಬಿ. ಬಣಕಾರ್‌, ಕಾಗವಾಡ ಕ್ಷೇತ್ರದಲ್ಲಿ ರಾಜು ಕಾಗೆ, ಮಸ್ಕಿ ಕ್ಷೇತ್ರದಲ್ಲಿ ಬಸನಗೌಡ ತುರುವಿಹಾಳ್‌ ಅವರು ಕಾಂಗ್ರೆಸ್‌ ಸೇರುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಅದೇ ಕಾರಣಕ್ಕೆ ಈಗ ಆ ಕ್ಷೇತ್ರಗಳಲ್ಲಿ ವೀಕ್ಷಕರು ಮತ್ತೂಂದು ಬಾರಿ ಪ್ರವಾಸ ಮಾಡಿ, ಆಯಾ ಜಿಲ್ಲಾ ಮುಖಂಡರು ಹಾಗೂ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಪಡೆಯುವಂತೆ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಒಂದು ವೇಳೆ, ಬಿಜೆಪಿಯಲ್ಲಿ ಟಿಕೆಟ್‌ ಸಿಗದೇ ಅತೃಪ್ತರಾಗುವ ಟಿಕೆಟ್‌ ಆಕಾಂಕ್ಷಿಗಳಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡುವ ಬಗ್ಗೆ ಕಾಂಗ್ರೆಸ್‌ ಚಿಂತನೆ ನಡೆಸಿದ್ದು, ಸ್ಥಳೀಯವಾಗಿ ಕಾರ್ಯಕರ್ತರು ಹಾಗೂ ಜಿಲ್ಲೆಯ ಮುಖಂಡರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದು, ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಆಯ್ಕೆ ಮಾಡಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯ ನಂತರ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಹದಿನೈದು ಕ್ಷೇತ್ರಗಳ ಉಪ ಚುನಾವಣೆಗೆ ಕುರಿತು ವೀಕ್ಷಕರ ಜೊತೆ ಸಭೆ ನಡೆಸಿದ್ದೇವೆ. ವೀಕ್ಷಕರು ಮತ್ತೂಂದು ಬಾರಿ ಕ್ಷೇತ್ರಗಳಿಗೆ ತೆರಳಿ ಸ್ಥಳೀಯವಾಗಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಪಡೆಯಲು ತೀರ್ಮಾನಿಸಲಾಗಿದೆ.

ಕಾಂಗ್ರೆಸ್‌ ಒಂದು ರಾಜಕೀಯ ಪಕ್ಷವಾಗಿ ನಮ್ಮ ತತ್ವ ಸಿದ್ದಾಂತ ಒಪ್ಪಿಕೊಂಡು ಯಾರೇ ಪಕ್ಷಕ್ಕೆ ಬರುವುದಿದ್ದರೂ, ಅವರನ್ನು ಸೇರಿಸಿಕೊಳ್ಳಲು. ಈ ಬಗ್ಗೆ ಸ್ಥಳೀಯವಾಗಿ ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next