Advertisement

ಮಾಯಕೊಂಡ ವ್ಯಾಪ್ತಿಯಲ್ಲಿ ಪಾರದರ್ಶಕ ಚುನಾವಣೆಗೆ ಸಕಲ ಸಿದ್ಧತೆ

05:23 PM Apr 02, 2019 | pallavi |

ದಾವಣಗೆರೆ: ಏ.23 ರಂದು ನಡೆಯಲಿರುವ ದಾವಣಗೆರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ, ಪಾರದರ್ಶಕ ಚುನಾವಣೆಗೆ ಸಕಲ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 240 ಮತಗಟ್ಟೆಗಳಿವೆ. 95,554 ಗಂಡು, 92,676 ಮಹಿಳೆಯರು, ಐವರು ತೃತೀಯ ಲಿಂಗಿ, 121 ಸೇವಾ ಮತದಾರರು ಸೇರಿದಂತೆ ಒಟ್ಟು 1,88,229 ಮತದಾರರು ಇದ್ದಾರೆ. ಪ್ರತಿ ಮತದಾರರು ಅತ್ಯಂತ ಮುಕ್ತವಾಗಿ ಮತದಾನ ಮಾಡಲು ಅನುಕೂಲವಾಗುವಂತೆ ಆಡಳಿತ ಯಂತ್ರ ಸರ್ವ ರೀತಿ ಸನ್ನದ್ಧವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಯಕೊಂಡ ವಿಧಾನ ಸಭಾ ಕ್ಷೇತ್ರದಲ್ಲಿ 240 ಮತಗಟ್ಟೆಗಳಲ್ಲಿ 75 ಸೂಕ್ಷ್ಮ ಮತ್ತು 7 ಅತಿಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಸೂಕ್ತ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸುವುದರೊಂದಿಗೆ ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಒಟ್ಟು 2,529 ವಿಕಲಚೇತನ ಮತದಾರರು ಮತಗಟ್ಟೆಗಳಿಗೆ ಬರಲು ಅನುಕೂಲವಾಗುವಂತೆ ವೀಲ್‌ಚೇರ್‌ ವ್ಯವಸ್ಥೆ ಮಾಡಲಾಗುವುದು. ವಿಶೇಷ ಚೇತನ ಮತ್ತು ವೃದ್ಧ ಮತದಾರರನ್ನು ಮತಗಟ್ಟೆಗೆ ಕರೆತರಲು 18 ವರ್ಷ ವಯೋಮಾನದ ಒಳಗಿನ ಸ್ವಯಂ ಸೇವಕರನ್ನು ನೇಮಿಸಲಾಗುವುದು. ಈ ಬಾರಿ ವಿದ್ಯುನ್ಮಾನ ಮತಯಂತ್ರಗಳಲ್ಲಿ ಅಂಧ ವಿಕಲಚೇತನರು ಮತದಾನ ಮಾಡಲು ಅನುಕೂಲವಾಗುವಂತೆ ಇನ್‌ಬಿಲ್ಟ್ ಬ್ರೈಲ್‌ ಲಿಪಿ ಅಳವಡಿಸಲಾಗಿದೆ ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಇ.ಡಿ.ಸಿ (ಎಲೆಕ್ಷನ್‌ ಡ್ನೂಟಿ ಸರ್ಟಿಕೇಟ್‌)ಮೂಲಕ ಮತದಾನ ಮಾಡಲು ಅವಕಾಶ ನೀಡಲಾಗಿದೆ.

Advertisement

ಚುನಾವಣಾ ಕರ್ತವ್ಯ ಆದೇಶ ಪ್ರತಿಯೊಂದಿಗೆ 12ಎ ಅರ್ಜಿ ತುಂಬಿ ಸಹಾಯಕ ಚುನಾವಣಾಧಿಕಾರಿಗಳಿಗೆ ನೀಡಿದರೆ ಇಡಿಸಿ ದೊರೆಯುತ್ತದೆ ಹಾಗೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ನೂತನವಾಗಿ ಇಟಿಬಿಎಸ್‌ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಬೇರೆ ಲೋಕಸಭೆ ಕ್ಷೇತ್ರದ ಸಿಬ್ಬಂದಿಗಳಿಗೆ ಸಂಬಂಧಿ ಸಿದಂತೆ ಅಂಚೆ, ಐಟಿ ಸ್ವೀಕರಿಸಲು ತಾಲೂಕು ಕಚೇರಿಯಲ್ಲಿ ಮತದಾರರ ಸೇವಾ ಕೇಂದ್ರ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಮತಗಟ್ಟೆ ಅಧಿಕಾರಿಗಳಿಗೆ ಏ.5 ರಂದು ಮೊದಲನೇ ಹಂತದ ತರಬೇತಿ, 2ನೇ ಹಂತದ ತರಬೇತಿಯನ್ನು ಏ. 16 ರಂದು ತರಳಬಾಳು ಜಗದ್ಗುರು ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಮೋತಿ ವೀರಪ್ಪ ಕಾಲೇಜುನಲ್ಲಿ ಏ.22 ರಂದು ಮಸ್ಟರಿಂಗ್‌, 23 ರಂದು ಡಿ-ಮಸ್ಟರಿಂಗ್‌ ನಡೆಯಲಿದೆ ಎಂದು ತಿಳಿಸಿದರು.

ಅಣಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಣಜಿ ಮತ್ತು ತ್ಯಾವಣಿಗೆಯ ಸರ್ಕಾರಿ ಪ್ರೌಢಶಾಲೆ ಪಿಂಕ್‌ ಸಖೀ ಮತಗಟ್ಟೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು. ತಹಶೀಲ್ದಾರ್‌ ಕೆ.ವಿಜಯಕುಮಾರ್‌ ಸುದ್ದಿಗೋಷ್ಠಿಯಲ್ಲಿದ್ದರು.

ಸಿ-ವಿಜಿಲ್‌ ಮೂಲಕ ಮಾಹಿತಿ ಕೊಡಿ
ಎಲ್ಲಾ ರೀತಿಯ ಚುನಾವಣಾ ಅಕ್ರಮ ತಡೆಗಟ್ಟಲು ಚುನಾವಣಾ ಆಯೋಗ ಮೊದಲ ಬಾರಿಗೆ ನಾಗರಿಕ ಸ್ನೇಹಿ ಸಿ-ವಿಜಿಲ್‌ ಎಂಬ ಆ್ಯಪ್‌ ಪರಿಚಯಿಸಿದೆ. ಆಂಡ್ರಾಯ್ಡ ಮೊಬೈಲ್‌ ನಲ್ಲಿರುವ ಗೂಗಲ್‌ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮಗಳ ಬಗ್ಗೆ ನಡೆಯುವ ಘಟನೆಯ ಕೋಟೊ ಅಥವಾ ವಿಡಿಯೋ ತೆಗೆದು ಸಿವಿಲ್‌ ತಂತ್ರಾಂಶದ ಮೂಲಕ ವರದಿ ಮಾಡಬಹುದು. ವರದಿ ನೀಡುವವರ ಸ್ವಂತ ವಿವರ ನೀಡುವುದು ಕಡ್ಡಾಯವಲ್ಲ. ಹಾಗೂ ಹೀಗೆ ವರದಿ ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ವರದಿ ದಾಖಲಾದ 100 ನಿಮಿಷಗಳಲ್ಲಿ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next