ಲಕ್ನೋ/ಹೊಸದಿಲ್ಲಿ: ಅಪ್ಪನ ಸೈಕಲ್ ಕಸಿದು, ಭಾರೀ ರೇಸ್‌ನಲ್ಲಿರುವ ಉತ್ತರ ಪ್ರದೇಶ ಮುಖ್ಯ ಮಂತ್ರಿ ಅಖೀಲೇಶ್ ಯಾದವ್, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು, ಮಹಾಮೈತ್ರಿಕೂಟ ರಚಿಸಿ ಚುನಾವಣೆ ಎದುರಿಸುವ ಸಿದ್ಧತೆಯಲ್ಲಿದ್ದಾರೆ.
ವಿಶೇಷವೆಂದರೆ ಮೈತ್ರಿ ಬಗ್ಗೆ ಅಧಿಕೃತ ವಾಗಿ ಅಖೀಲೇಶ್ ಯಾದವ್ ಹೇಳುವ ಮುನ್ನವೇ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ, ಮೈತ್ರಿ ಮುಗಿದಿದೆ ಎಂಬ ಧಾಟಿಯಲ್ಲಿ ಮಾತನಾಡಿದೆ. ಎಲ್ಲ ಪ್ರಕ್ರಿಯೆಗಳು ಮುಗಿದಿದ್ದು, ಇನ್ನೆರಡು ದಿನಗಳಲ್ಲಿ ಮಹಾಮೈತ್ರಿ ಅಂತಿಮವಾಗಲಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಬಿಹಾರ ಮಾದರಿಯಲ್ಲೇ ಜಾತ್ಯತೀತ ಪಕ್ಷಗಳು ಒಗ್ಗೂಡಿ ಚುನಾ ವಣೆ ಎದುರಿಸಬೇಕು ಎಂಬ ನಿಲುವಿ ನೊಂದಿಗೆ ಅಖೀಲೇಶ್ ಕೂಡ, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಇರಾದೆ ಯಲ್ಲಿದ್ದಾರೆ. ಈ ಬಗ್ಗೆ ಮಂಗಳವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ಇನ್ನು ಒಂದು ಅಥವಾ ಎರಡು ದಿನದಲ್ಲಿ ಮೈತ್ರಿ ಅಂತಿಮವಾಗಿ ಘೋಷಣೆ ಮಾಡಲಿದ್ದೇವೆ ಎಂದರು. ಈ ಎರಡು ಪಕ್ಷಗಳ ಜತೆಗೆ ಅಜಿತ್ ಸಿಂಗ್ ಅವರ ಆರ್‌ಎಲ್‌ಡಿ ಕೂಡ ಸೇರುವ ಎಲ್ಲ ಸಾಧ್ಯತೆಗಳಿವೆ.
ಪಕ್ಷ, ಕಚೇರಿ, ಚಿಹ್ನೆ ಸಮರದಲ್ಲಿ ಗೆದ್ದಿರುವ ಅಖೀಲೇಶ್ ಯಾದವ್, ಅಪ್ಪನ ಜತೆ ಕದನವಿರಾಮ ಘೋಷಿಸಿ ಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಒಂದು ಪ್ರಕಾರ, ಮುಲಾಯಂ ಸಿಂಗ್ ಯಾದವ್ ಬಣದ ಕೆಲವರಿಗೆ ಅಖೀಲೇಶ್ ಯಾದವ್ ಟಿಕೆಟ್ ಕೊಡುವ ಸಾಧ್ಯತೆ ಇದೆ. ಹೀಗಾಗಿ ಮುಲಾಯಂ ಕೂಡ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುವ ಸಂಭವ ಕಡಿಮೆ. ಅಪ್ಪನ ಮಾರ್ಗದರ್ಶನದಲ್ಲೇ ಅಖೀಲೇಶ್ ಚುನಾವಣೆ ಎದುರಿಸಲಿದ್ದಾರೆ ಎಂದು ಬಲ್ಲ ಮೂಲಗಳು ಹೇಳಿವೆ.
ಮೈತ್ರಿ ಮಾತು ಅಂತಿಮ: ಚಿಹ್ನೆ ಕಲಹ ಮುಗಿದ ಕೂಡಲೇ ಸಮಾಜವಾದಿ ಪಕ್ಷಕ್ಕಿಂತ ಹೆಚ್ಚಿನ ಉತ್ಸಾಹ ತೋರಿದ್ದು ಕಾಂಗ್ರೆಸ್. ಸೋಮವಾರವೇ ಅಖೀಲೇಶ್ ಯಾದವ್‌ರನ್ನು ಅಭಿನಂದಿಸಿದ್ದ ಕಾಂಗ್ರೆಸ್, ಆಯೋಗದ ನಿರ್ಧಾರವನ್ನೂ ಸ್ವಾಗತಿಸಿತ್ತು. ಇದರ ಮುಂದುವರಿದ ಭಾಗವಾಗಿ ಮಂಗಳವಾರ ಹೊಸದಿಲ್ಲಿಯಲ್ಲೇ ಕುಳಿತು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಗುಲಾಂ ನಬಿ ಆಜಾದ್ ಮೈತ್ರಿಯ ಕುರಿತಂತೆ ಚರ್ಚೆ ನಡೆಸಿದರು. ಕಡೆಗೆ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ಇದರ ನಡುವೆಯೇ ಇನ್ನೆರಡು ದಿನದಲ್ಲಿ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಅವರ ಹೇಳಿದರು.
ಇದೇ ವೇಳೆ ಬಿಹಾರದ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ಮಹಾ ಮೈತ್ರಿ ಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ತಾನು ಮತ್ತು ಪುತ್ರ ತೇಜಸ್ವಿ ಯಾದವ್ ಎಸ್‌ಪಿ ಪರ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಳ್ಳಲಿದೆ. ಅಲ್ಲಿ ನಾವೇ ಸರಕಾರ ರಚಿಸಲಿದ್ದೇವೆ. ಮೈತ್ರಿಯ ಅಂತಿಮ ಮಾತು ಇನ್ನೆರಡು ದಿನಗಳಲ್ಲಿ ಹೊರಬೀಳಲಿದೆ.