Advertisement
ನಗರದ ಸರ್ಕಾರಿ ಅತಿಥಿಗೃಹದಲ್ಲಿ ಸಮ್ಮೇಳನದ ಹಿನ್ನೆಲೆಯಲ್ಲಿ ರಚಿಸಲಾಗಿರುವ 14 ಉಪ ಸಮಿತಿಗಳ ಕಾರ್ಯದರ್ಶಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರತಿಯೊಂದು ಉಪ ಸಮಿತಿಗಳಲ್ಲಿ ಈವರೆಗೆ ಆಗಿರುವ ಸಿದ್ಧತೆಗಳ ಮಾಹಿತಿ ಪಡೆದುಕೊಂಡರು.
Related Articles
Advertisement
ಜತೆಗೆ ಇನ್ನೂ ಉದ್ಘಾಟನೆಗೊಳ್ಳದ ಮಹಾರಾಣಿ ಕಾಲೇಜು ಹೊಸ ಕಟ್ಟಡದಲ್ಲಿ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಕೂಡಲೇ ಹೋಟೆಲ್ ಮಾಲಿಕರ ಸಭೆ ಕರೆದು ಕಡಿಮೆ ದರದಲ್ಲಿ ಕೊಠಡಿ ನೀಡುವಂತೆ ಕೇಳಿ ಎಂದು ಸಚಿವ ಮಹದೇವಪ್ಪ ಸಲಹೆ ನೀಡಿದರು.
ಅರಮನೆ ಝಗಮಗ: ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನ.22ರಿಂದ 26ರವರೆಗೆ 5 ದಿನಗಳ ಕಾಲ ಅರಮನೆ ವಿದ್ಯುತ್ ದೀಪಾಲಂಕಾರ ಇರಲಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದರು. ಈವರೆಗೆ 9471 ಮಂದಿ ಸಮ್ಮೇಳನದ ಪ್ರತಿನಿಧಿಗಳಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸಾಹಿತ್ಯ ಸಾಂಗತ್ಯ, ವಿಕಾಸ ಕರ್ನಾಟಕ ಹಾಗೂ ಮೈಸೂರು ಐಸಿರಿ ಎಂಬ 3 ಸ್ಮರಣ ಸಂಚಿಕೆ ಹೊರತರಲಾಗುತ್ತಿದೆ ಎಂದು ಸ್ಮರಣ ಸಂಚಿಕೆ ಉಪ ಸಮಿತಿಯವರು ಮಾಹಿತಿ ನೀಡಿದರು.
ಪ್ರಚಾರ ಸಮಿತಿಯಿಂದ 87 ಹೆದ್ದಾರಿ ಫಲಕ ಹಾಕಲಾಗಿದ್ದು, ಮೈಸೂರಿನ ಟ್ರಿಣ್ ಟ್ರಿಣ್ ಸೈಕಲ್ ಸ್ಟ್ಯಾಂಡ್‌ಗಳಲ್ಲೂ ಪ್ರಚಾರ ಫಲಕ ಹಾಕಲಾಗಿದೆ. ಇದಲ್ಲದೆ 600 ಕೆಸ್ಸಾರ್ಟಿಸಿ ಬಸ್ ಹಾಗೂ 1500 ಆಟೋಗಳಿಗೆ ಸ್ಟಿಕ್ಕರ್ ಹಾಕಲಾಗುತ್ತಿದೆ ಎಂದು ಪ್ರಚಾರ ಸಮಿತಿ ಕಾರ್ಯದರ್ಶಿ ಆರ್.ರಾಜು ಮಾಹಿತಿ ನೀಡಿದರು.
ಎಲ್ಲಾ ತಾಲೂಕುಗಳಲ್ಲಿ ನ.22, 23ರಂದು ಮೈಕ್ ಮೂಲಕ ಪ್ರಚಾರ ಮಾಡಿ, ಕರಪತ್ರ ವಿತರಿಸುವ ಮೂಲಕ ವ್ಯವಸ್ಥಿತವಾಗಿ ಪ್ರಚಾರ ಮಾಡಿ, ಸಾಹಿತ್ಯ ಸಮ್ಮೇಳನಕ್ಕೆ ಜನರನ್ನು ಆಹ್ವಾನಿಸಿ ಎಂದು ಸಚಿವರು ಸಲಹೆ ನೀಡಿದರು.
ಆಹಾರ ಸಮಿತಿ: ಸಾಹಿತಿಗಳು, ಅತಿಥಿಗಳು ಹಾಗೂ ಕಲಾವಿದರಿಗೆ ಮುಖ್ಯವೇದಿಕೆ ಪಕ್ಕದಲ್ಲಿ, ಪ್ರತಿನಿಧಿಗಳಿಗೆ ಮೈಸೂರು ವಿವಿಯ ಹಾಕಿ ಮೈದಾನದಲ್ಲಿ, ಸಾರ್ವಜನಿಕರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಸೇರಿದಂತೆ ಪ್ರತಿ ನಿತ್ಯ 1 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಆಹಾರ ಸಮಿತಿ ಕಾರ್ಯದರ್ಶಿ ಡಾ.ಕಾ.ರಾಮೇಶ್ವರಪ್ಪ ತಿಳಿಸಿದರು.
ಶಾಸಕ ಎಂ.ಕೆ.ಸೋಮಶೇಖರ್, ಕಾಡಾ ಅಧ್ಯಕ್ಷ ಎಸ್.ನಂಜಪ್ಪ, ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಬಿ.ಸಿದ್ದರಾಜು, ಜಿಲ್ಲಾಧಿಕಾರಿ ಡಿ.ರಂದೀಪ್ ಮತ್ತಿತರರಿದ್ದರು.