Advertisement

ಮಳೆಗಾಗಿ ಪರ್ಜನ್ಯ ಹೋಮಕ್ಕೆ ಸರ್ಕಾರದ ಸಿದ್ಧತೆ

01:51 AM May 23, 2019 | Team Udayavani |

ಬೆಂಗಳೂರು: ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದೆ.

Advertisement

ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ಜೂನ್‌ನಲ್ಲಿಯೇ ಮೋಡ ಬಿತ್ತನೆ ಮಾಡಿ, ಓಡುವ ಮೋಡಗಳ ತಡೆದು, ಮಳೆ ತರಿಸುವ ಪ್ರಯತ್ನ ನಡೆಯುತ್ತಿದೆ. ಇನ್ನೊಂದೆಡೆ, ಮುಜರಾಯಿ ಇಲಾಖೆಯೂ ವರುಣ ದೇವನ ಕೃಪೆಗೆ ಪರ್ಜನ್ಯ ಜಪ ಹೋಮ ಮತ್ತು ವಿಶೇಷ ಪೂಜೆ ಏರ್ಪಡಿಸಲು ನಿರ್ಧರಿಸಿದೆ.

ಮುಜರಾಯಿ ಇಲಾಖೆ ಸಚಿವ ಪಿ.ಟಿ.ಪರಮೇಶ್ವರ್‌ ನಾಯ್ಕ ಈ ಕುರಿತಂತೆ ಮೇ 21ರಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಪತ್ರ ಬರೆದು ಮಳೆರಾಯನ ಕೃಪೆಗೆ ಒಳಗಾಗಲು ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಪರ್ಜನ್ಯ ಜಪ ಹಾಗೂ ವಿಶೇಷ ಪೂಜೆ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ರಾಜ್ಯದಲ್ಲಿ 156 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಬಹುತೇಕ ಎಲ್ಲ ಜಿಲ್ಲೆ ಗಳಲ್ಲಿಯೂ ಬರದ ಛಾಯೆ ಇದೆ. ಈ ವರ್ಷ ಬೇಸಿಗೆ ಯಲ್ಲಿ ಮುಂಗಾರು ಪೂರ್ವ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಾಕಷ್ಟು ತೊಂದರೆ ಅನುಭವಿಸು ವಂತಾಗಿದೆ. ಹೀಗಾಗಿ, ಅದರಿಂದ ಹೊರ ಬರಲು ಹೇಗಾದರೂ ಮಳೆ ತರಿಸುವ ಪ್ರಯತ್ನ ಮಾಡಲೇಬೇ ಕಾಗಿದೆ ಎಂಬ ಅಭಿಪ್ರಾಯ ಹೊಂದಿರುವ ಮುಜರಾಯಿ ಸಚಿವರು, ಪರ್ಜನ್ಯ ಜಪ ಮಾಡುವ ಮೂಲಕ ವರುಣ ದೇವನ ಕೃಪೆಗೆ ಒಳಗಾಗಿ ನಾಡಿನ ಜನರ ನೀರಿನ ಬವಣೆ ತೀರಿಸಲು ಮುಂದಾಗಿದ್ದಾರೆ.

ಈ ಕುರಿತಂತೆ ಮುಜರಾಯಿ ಇಲಾಖೆ ಈಗಾಗಲೇ ಕಾರ್ಯ ಪ್ರವೃತ್ತವಾಗಿದ್ದು, ಪರ್ಜನ್ಯ ಜಪ ಮಾಡಲು ಆಗಮ ಪಂಡಿತರ ಅಭಿಪ್ರಾಯ ಪಡೆಯಲಾಗಿದೆ. ಮೇ 29 ಹಾಗೂ ಜೂನ್‌ 6 ರಂದು ಪರ್ಜನ್ಯ ಜಪ ಹೋಮ ಮಾಡಲು ಪ್ರಶಸ್ತ ದಿನವಾಗಿದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಜೂನ್‌ 29ರಂದು ಉತ್ತರ ಭಾದ್ರಪದ ನಕ್ಷತ್ರ ಹಾಗೂ ಜೂನ್‌ 6 ರಂದು ಪುನರ್ವಸು ನಕ್ಷತ್ರ ಇದೆ.

Advertisement

ಎರಡೂ ನಕ್ಷತ್ರಗಳು ಒಳ್ಳೆಯದಾಗಿದ್ದು, ಆ ಎರಡು ದಿನಗಳಲ್ಲಿ ಮಳೆಗಾಗಿ ಪರ್ಜನ್ಯ ಜಪ, ಹೋಮ ಮಾಡಲು ಆಗಮ ಪಂಡಿತರಾದ ವಿದ್ವಾನ್‌ ವಿಜಯ್‌ಕುಮಾರ್‌ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ವರುಣ ದೇವನ ಕೃಪೆಗೆ ವಿಶೇಷವಾಗಿ ಸ್ವಾತಿ ನಕ್ಷತ್ರ ಅತ್ಯಂತ ಪ್ರಶಸ್ತವಾಗಿದ್ದು, ಈ ತಿಂಗಳಲ್ಲಿ ಈಗಾಗಲೇ ಸ್ವಾತಿ ನಕ್ಷತ್ರ ಮುಗಿದು ಹೋಗಿರುವುದರಿಂದ, ಮತ್ತೆ ಸ್ವಾತಿ ನಕ್ಷತ್ರಕ್ಕಾಗಿ ಮತ್ತೆ 25 ದಿನ ಕಾಯಬೇಕಿರುವುದರಿಂದ ಹತ್ತಿರದ ಒಳ್ಳೆಯ ನಕ್ಷತ್ರಗಳನ್ನು ಆಗಮ ಪಂಡಿತರು ಸರ್ಕಾರಕ್ಕೆ ಸೂಚಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಮುಜರಾಯಿ ಸಚಿವ ರಾಗಿದ್ದ ಸಂದರ್ಭದಲ್ಲಿ ಮಳೆಗಾಗಿ ಹೋಮ ಮಾಡಲು ಮುಂದಾಗಿದ್ದಾಗ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

34,554 ಮುಜರಾಯಿ ದೇಗುಲ
ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 34,554 ಮುಜರಾಯಿ ದೇವಸ್ಥಾನಗಳಿವೆ. ಆ ಪೈಕಿ, 175 ಎ ಗ್ರೇಡ್‌ ದೇವಸ್ಥಾನಗಳಿದ್ದು, (25 ಲಕ್ಷಕ್ಕಿಂತ ಹೆಚ್ಚಿನ ಆದಾಯ ಬರುವ ದೇವಸ್ಥಾನಗಳು) 163 ಬಿ ಗ್ರೇಡ್‌ ದೇವಸ್ಥಾನಗಳಿವೆ. (5 ರಿಂದ 25 ಲಕ್ಷದವರೆಗಿನ ಆದಾಯ ಬರುವ ದೇವಸ್ಥಾನಗಳು). ಉಳಿದಂತೆ, 34216 ದೇವಸ್ಥಾನಗಳಿವೆ. (5 ಲಕ್ಷದೊಳಗೆ ಆದಾಯ ಬರುವ ದೇವಸ್ಥಾನ). ಪ್ರಮುಖ ದೇವಸ್ಥಾನಗಳಲ್ಲಿ ಪರ್ಜನ್ಯ ಹೋಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಮುಜರಾಯಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next