ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಗೆ ಒಟ್ಟು 24,500 ಅಭ್ಯರ್ಥಿಗಳು ಹಾಜರಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದ 61 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 12 ವೀಕ್ಷಕರು ಹಾಗೂ ಆಯುಧ ಹೊಂದಿದ ಪೊಲೀಸ್ ಸಿಬ್ಬಂದಿಯನ್ನೊಳಗೊಂಡ 12 ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು. ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಯು ಬೆಳಗ್ಗೆ 10:00 ರಿಂದ ಮಧ್ಯಾಹ್ನ 12:00ರ ವರೆಗೆ ಹಾಗೂ ಮಧ್ಯಾಹ್ನ 2:00 ರಿಂದ ಸಂಜೆ 4:00ಗಂಟೆ ವರೆಗೆ ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕು. ಜವಾಬ್ದಾರಿಯಿಂದ ಪರೀಕ್ಷೆ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಪರೀಕ್ಷೆಗಾಗಿ ನೇಮಕಗೊಂಡ ಮಾರ್ಗಾಧಿಕಾರಿಗಳು ನಿಗದಿತ ಸಮಯದಲ್ಲಿ ಖಜಾನೆಗಳಲ್ಲಿ ಹಾಜರಿದ್ದು, ಪ್ರಶ್ನೆ ಪತ್ರಿಕೆ ಪಡೆದುಕೊಂಡು ಪರೀಕ್ಷಾ ಕೇಂದ್ರಗಳಿಗೆ ತೆರಳಬೇಕು. ಪ್ರಶ್ನೆ ಪತ್ರಿಕೆ ಬಂಡಲ್‌ಗಳನ್ನು ಪಡೆಯುವ ಮುನ್ನ ಬಂಡಲ್ ಭದ್ರಪಡಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು. ಮಾರ್ಗಾಧಿಕಾರಿಗಳು, ವೀಕ್ಷಕರು ತಮ್ಮ ವಾಹನದಲ್ಲಿ
ಪೊಲೀಸ್ ಅಧಿಕಾರಿಗಳನ್ನು ಕರೆದುಕೊಂಡು ನಿಗದಿತ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಪೂರ್ಣಗೊಳ್ಳುವವರೆಗೆ ಕೇಂದ್ರದಲ್ಲಿಯೇ ಇದ್ದು, ಮಾನಿಟರ್ ಮಾಡಬೇಕೆಂದು ಹೇಳಿದರು. ಮಾರ್ಗಾಧಿಕಾರಿಗಳು ಮುಂಚಿತವಾಗಿಯೇ ಸಂಬಂಧಪಟ್ಟ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಆ ಕೇಂದ್ರದ ಪ್ರಾಚಾರ್ಯರನ್ನು ಸಂಪರ್ಕಿಸಿ ಆಸನ, ಕುಡಿಯುವ ನೀರು, ಭದ್ರತೆ, ಮಹಿಳೆಯರಾಗಿ ಪ್ರತ್ಯೇಕ ತಪಾಸಣಾ ಕೋಣೆ, ಮೊಬೈಲ್ ಠೇವಣಿ ಕೋಣೆ, ಸಾಕಷ್ಟು ಬೆಳಕಿನ ಮತ್ತು ಶೌಚಾಲಯ ವ್ಯವಸ್ಥೆ ಬಗ್ಗೆ ಖಾತರಿಪಡಿಸಿಕೊಳ್ಳಬೇಕು.
ಮಹಿಳಾ ಪರೀಕ್ಷಾರ್ಥಿಗಳ ತಪಾಸಣೆಯನ್ನು ಕಡ್ಡಾಯವಾಗಿ ಮಹಿಳಾ ಪೊಲೀಸರೇ ಮಾಡುವಂತೆ ಎಚ್ಚರಿಕೆ ವಹಿಸಬೇಕು
ಎಂದರು. ಪ್ರತಿ ಕೇಂದ್ರದಲ್ಲಿ ವಿಡಿಯೋಗ್ರಾಫಿ ಮಾಡುವುದು ಕಡ್ಡಾಯವಾಗಿದೆ. ಪರೀಕ್ಷಾ ಕೇಂದ್ರದ ನಿಯೋಜಿತ ಅಧಿಕಾರಿ
ಮತ್ತು ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ಮೊಬೈಲ್ ಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ತರುವಂತಿಲ್ಲ ಎಂದು ಸೂಚಿಸಿದರು. ಪರೀಕ್ಷಾ ಕೇಂದ್ರದ ಆವರಣ ಮತ್ತು ಕೊಠಡಿಯಲ್ಲಿ ಮೊಬೈಲ್, ವಿದ್ಯುತ್ ಉಪಕರಣ, ಯಾವುದೇ ತರಹದ ಗಡಿಯಾರ, ಕೈ ಗಡಿಯಾರ ಬಳಸುವುದನ್ನು ನಿಷೇಧಿ ಸಲಾಗಿದೆ ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾ ಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಕರ್ನಾಟಕ ಲೋಕ ಸೇವಾ ಆಯೋಗದ ಉಪ ಕಾರ್ಯದರ್ಶಿ ರಾಮಕೃಷ್ಣಯ್ಯ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್ ಮತ್ತಿತರರ ಅಧಿಕಾರಿಗಳು ಹಾಜರಿದ್ದರು.
Advertisement