Advertisement

ಪ್ರವಾಸಿ ಕ್ಷೇತ್ರಗಳ ವರ್ಚುವಲ್‌ 3ಡಿ ಸಿದ್ಧಪಡಿಸಿ: ಡಿಸಿ

10:31 PM Oct 23, 2021 | Team Udayavani |

ಉಡುಪಿ: ಉಡುಪಿ ಜಿಲ್ಲೆಯಲ್ಲಿನ ಎಲ್ಲ ಪ್ರವಾಸಿ ಕ್ಷೇತ್ರಗಳನ್ನು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಒಂದೇ ವೇದಿಕೆಯಲ್ಲಿ ಕಾಣುವಂತಹ ವರ್ಚುವಲ್‌ 3 ಡಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ ಹಾಲ್‌ನಲ್ಲಿ ಶುಕ್ರವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಜಿಲ್ಲೆಯ ಪ್ರಮುಖ 1 ಅಥವಾ 2 ಪ್ರವಾಸಿ ಕ್ಷೇತ್ರಗಳನ್ನು ಮಾತ್ರ ವೀಕ್ಷಣೆ ಮಾಡಿ ತೆರಳುತ್ತಿದ್ದು, ಅವರಿಗೆ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳು ನೈಜ ಚಿತ್ರಣ ತೋರುವಂತಹ ವರ್ಚುವಲ್‌ 3ಡಿ ಯೋಜನೆಯನ್ನು ಯಾವುದಾದರೂ ಒಂದು ಪ್ರಮುಖ ಸ್ಥಳದಲ್ಲಿ ನಿರ್ಮಿಸುವುದರಿಂದ ಎಲ್ಲ ತಾಣಗಳ ಚಿತ್ರಣ ಅವರಿಗೆ ದೊರೆಯಲಿದ್ದು ಈ ತಾಣಗಳಿಗೂ ಪ್ರವಾಸಿಗರು ಭೇಟಿ ನೀಡಲು ಸಾಧ್ಯವಾಗಲಿದೆ ಎಂದರು.

ಪ್ರಸ್ತಾವನೆ ಕಳುಹಿಸಲು ಸೂಚನೆ
ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸಬಹುದಾದ ಇನ್ನೂ ಹಲವು ಪ್ರವಾಸಿ ತಾಣಗಳಿದ್ದು, ಇವುಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ವಿವಿಧ ಸಂಸ್ಥೆಗಳಿಂದ ವರದಿ ಪಡೆಯಲು ಎಕ್ಸ್‌ಪ್ರೆಷನ್‌ ಆಫ್ ಇಂಟರೆಸ್ಟ್‌ ಕರೆದು ಈ ವರದಿಯೊಂದಿಗೆ ಸೂಕ್ತ ಪ್ರಸ್ತಾವನೆಯನ್ನು ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸುವಂತೆ ತಿಳಿಸಿದರು.

ಇದನ್ನೂ ಓದಿ:ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

Advertisement

ಪ್ರವಾಸಿ ಗೈಡ್‌ಗಳಿಗೆ ತರಬೇತಿ ನೀಡಿ
ಕಾಪು ಲೈಟ್‌ಹೌಸ್‌ ಬಳಿ ಬಂದರು ಇಲಾಖೆಗೆ ಸೇರಿದ 3 ಎಕ್ರೆ ಜಾಗವಿದ್ದು, ಇದರಲ್ಲಿ ಅಕ್ವೇರಿಯಂ ಸೇರಿದಂತೆ ವಿವಿಧ ವೈವಿಧ್ಯಮಯ ಚಟುವಟಿಕೆ ಕೈಗೊಳ್ಳಲು ಅವಕಾಶಗಳಿವೆ. ಈ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಪಡೆಯಲು ಪ್ರಸ್ತಾವನೆ ಸಲ್ಲಿಸಿ, ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿನ ಹೊಸ ಪ್ರವಾಸೋದ್ಯಮ ಯೋಜನೆ ಗುರುತಿಸಿ, ಸಮೀಕ್ಷೆ ನಡೆಸಬೇಕು. ಅದರ ಬ್ಲೂ ಪ್ರಿಂಟ್‌ ಸಿದ್ಧಪಡಿಸಿ, ಅಭಿವೃದ್ಧಿಗೊಳಿಸಬೇಕು. ಪ್ರವಾಸಿ ಸ್ಥಳಗಳ ಮಾಹಿತಿ, ಐತಿಹಾಸಿಕ ಹಿನ್ನೆಲೆಯನ್ನು ಪ್ರವಾಸಿಗರಿಗೆ ತಿಳಿಸಲು ಪ್ರವಾಸಿ ಗೈಡ್‌ಗಳಿಗೆ ತರಬೇತಿ ನೀಡಿ ಎಂದರು.

ಪ್ರವಾಸೋದ್ಯಮ ಇಲಾಖೆಯ ಮೂಲಕ ವಿವಿಧ ಅನುಷ್ಠಾನ ಸಂಸ್ಥೆಗಳಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಬೇಕು ಎಂದರು.

ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫ‌ರ್ಡ್‌ ಲೋಬೊ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಪ್ರವಾಸೋದ್ಯಮ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉಪಸಮಿತಿ ರಚನೆಗೆ ಸೂಚನೆ
ಜಿಲ್ಲೆಯಲ್ಲಿ ಕಯಾಕಿಂಗ್‌ ಜಲ ಸಾಹಸ ಕ್ರೀಡೆ ನಡೆಸಲು ಅರ್ಜಿ ಸಲ್ಲಿಸುವವರು, ಈ ಕ್ರೀಡೆಯಲ್ಲಿ ಪರಿಣತಿ ಹೊಂದಿರುವುದರ ಕುರಿತು ಸೇರಿದಂತೆ ನಿಯಮಾನುಸಾರ ಎಲ್ಲ ಅರ್ಹತೆ ಹೊಂದಿದ್ದರೆ, ಗರಿಷ್ಠ ಸುರಕ್ಷಾ ಸಾಧನ ಬಳಸಿಕೊಂಡು ಕಯಾಕಿಂಗ್‌ ನಡೆಸಲು ಅನುಮತಿ ನೀಡಿ, ಹೌಸ್‌ ಬೋಟಿಂಗ್‌ ನಿರಂತರವಾಗಿ ನಡೆಸಲು ಅಡ್ಡಿಯಾಗಿರುವ ಮರಳು ದಿಬ್ಬ ತೆರವುಗೊಳಿಸಲು ಈ ಭಾಗದಲ್ಲಿ ಡ್ರೆಜ್ಜಿಂಗ್‌ ನಡೆಸಲು ಪ್ರಸ್ತಾವನೆ ಸಲ್ಲಿಸಬೇಕು. ಪ್ರವಾಸೋದ್ಯಮ ಚಟುವಟಿಕೆಗಳಿಗೆ ಸಿ.ಆರ್‌.ಝಡ್‌. ನಿಯಮ ಅಡ ಚಣೆಯಾಗಿದ್ದಲ್ಲಿ ಅಂತಹ ಪ್ರಕರಣಗಳ ಬಗ್ಗೆ ಇದರ ಜಿಲ್ಲಾ ಸಮಿತಿ ಸಭೆಯ ಗಮನಕ್ಕೆ ತರಬೇಕು. ತಾಂತ್ರಿಕ ಸಮಸ್ಯೆ ಮತ್ತು ಇತರ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಉಪಸಮಿತಿ ರಚಿಸಿ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next