ನರೇಗಲ್ಲ: ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ಮೂಡಿದೆ. ರೈತರು ಬಿತ್ತನೆ ಬೀಜ, ಗೊಬ್ಬರ ಸಂಗ್ರಹಣೆ ಮಾಡುವುದರ ಜೊತೆಗೆ ಜಮೀನು ಸ್ವಚ್ಛತೆ ಸೇರಿದಂತೆ ಇನ್ನಿತರ ಕಾಯಕದಲ್ಲಿ ತೊಡಗಿದ್ದಾರೆ.
ನರೇಗಲ್ಲ ಹೋಬಳಿಯಾದ್ಯಂತ ಕಳೆದ ಐದು ವರ್ಷದಿಂದ ಹೇಳಿಕೊಳ್ಳುವಂತಹ ಮಳೆ ಆಗಿಲ್ಲ. ರೈತರು ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿಲ್ಲ. ಹೀಗಾಗಿ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದರೂ ಈ ವರ್ಷವಾದೂ ಉತ್ತಮ ಮಳೆ ಆಗಬಹುದೆನ್ನುವ ನಿರೀಕ್ಷೆಯಲ್ಲೇ ರೈತರು ಮತ್ತೆ ಬೆಳೆಗಳನ್ನು ಬೆಳೆಯಲು ಸಿದ್ಧತೆಯಲ್ಲಿದ್ದಾರೆ.
ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 44,820 ಹೆಕ್ಟೇರ್ ಕ್ಷೇತ್ರ ಹೊಂದಿದ್ದು, ಕಳೆದ ವರ್ಷ ರೈತರು ಕಡಿಮೆ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರು. ಮೆಕ್ಕೆಜೋಳ ನೀರಾವರಿ ಪ್ರದೇಶದಲ್ಲಿ 935 ಹೆಕ್ಟೇರ್, ಒಣಬೇಸಾಯದಲ್ಲಿ 2273 ಹೆಕ್ಟೇರ್ ಬಿತ್ತನೆ ಮಾಡಿದ್ದರು. ಹೆಸರು ಬೆಳೆಯನ್ನು 11,400 ಹೆಕ್ಟೇರ್ ಕ್ಷೇತ್ರ ಬಿತ್ತನೆ ಮಾಡಲಾಗಿತ್ತು. ತೊಗರಿ 76 ಹೆಕ್ಟೇರ್ ಕ್ಷೇತ್ರದಲ್ಲಿ, ಶೇಂಗಾ 256 ಹೆಕ್ಟೇರ್, ಸೂರ್ಯಕಾಂತಿ 22 ಹೆಕ್ಟೇರ್ ನೀರಾವರಿ ಹಾಗೂ 19 ಹೆಕ್ಟೇರ್ ಒಣಬೇಸಾಯದಲ್ಲಿ ಬಿತ್ತನೆ ಸೇರಿದಂತೆ 14,985 ಹೆಕ್ಟೇರ್ ಬಿತ್ತನೆ ಮಾಡಲಾಗಿತ್ತು.
ಆದರೆ, ಈ ವರ್ಷ ಅಲ್ಪ ಪ್ರಮಾಣದ ಮಳೆಯಾಗಿರುವುದರಿಂದ 4000 ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆ, 10 ಹೆಕ್ಟೇರ್ ಕ್ಷೇತ್ರದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಮುಂಗಾರು ಪ್ರಮುಖ ಬೆಳೆಗಳಾದ ಹೆಸರು ಸುಮಾರು 15 ಸಾವಿರ ಹೆಕ್ಟೇರ್, ತೊಗರಿ 25 ಹೆಕ್ಟೇರ್ ಸೇರಿದಂತೆ ಇತರೆ ಬೆಳೆ ಸೇರಿ ಒಟ್ಟು 21 ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾದರೆ ರೈತರಿಗೆ ಅನುಕೂಲವಾಗಲಿದೆ.
ಬೀಜ ತಯಾರಿಯಲ್ಲಿ ರೈತರು: ಮುಂಗಾರು ಹಂಗಾಮಿನಲ್ಲಿ ಹೆಸರು, ಶೇಂಗಾ, ಸೂರ್ಯಕಾಂತಿ, ತೊಗರಿ, ಮೆಕ್ಕೆಜೋಳ ಬೀಜ, ಗೊಬ್ಬರಗಳ ಸಂಗ್ರಹಣೆಯಲ್ಲಿ ರೈತರು ನಿರತರಾಗಿದ್ದು, ಮಹಿಳೆಯರು, ಮಕ್ಕಳು ಮನೆಯಂಗಳದಲ್ಲಿ ಕುಳಿತು ಶೇಂಗಾಕಾಳು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಕಳೆದ ಐದಾರೂ ವರ್ಷದಿಂದ ರೈತರು ಯಂತ್ರಗಳಲ್ಲಿ ಶೇಂಗಾ ಸಿಪ್ಪೆ ತೆಗೆಸಿಕೊಂಡು ಬರುತ್ತಿದ್ದು, ಈ ವರ್ಷ ಮನೆಯಲ್ಲಿ ಶೇಂಗಾ ಒಡೆಯುವ ಕಾಯಕ ಕಡಿಮೆಯಾಗಿದೆ.
ಬಿತ್ತನೆಗೆ ಸಕಲ ಸಿದ್ಧತೆ: ನರೇಗಲ್ಲ, ಅಬ್ಬಿಗೇರಿ, ಡ.ಸ. ಹಡಗಲಿ, ಗುಜಮಾಗಡಿ, ನಾಗರಾಳ, ಯರೇಬೇಲೇರಿ, ಕುರಡಗಿ, ಜಕ್ಕಲಿ, ಹೊಸಳ್ಳಿ, ನಿಡಗುಂದಿ, ನಿಡಗುಂದಿಕೊಪ್ಪ, ಹಾಲಕೆರೆ, ಮಾರನಬಸರಿ, ಬೂದಿಹಾಳ, ಕಳಕಾಪೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮುಂಗಾರು ಬಿತ್ತನೆಗಾಗಿ ಕಳೆದ ಎರಡು ತಿಂಗಳಿಂದ ರೈತರು ತಮ್ಮ ಜಮೀನಲ್ಲಿರುವ ಜಾಲಿಮುಳ್ಳುನ ಗಿಡ, ಕಸ ಸಂಪೂರ್ಣ ಸ್ವಚ್ಛ ಮಾಡಿದ್ದಾರೆ. ಎರಡರಿಂದ ಮೂರು ಸಾರಿ ಕುಂಟೆ ಒಡೆದು ಹರಗಿ ಭೂಮಿ ಹದ ಮಾಡಿದ್ದಾರೆ. ಇನ್ನೂ ಒಂದು ಸಾರಿ ಮಳೆ ಆದರೆ ಸಾಕು ರೈತರು ಹೆಸರು, ಶೇಂಗಾ ಇನ್ನಿತರ ಬೀಜ ಬಿತ್ತನೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ರೈತರ ಜೀವನಾಡಿಗೆ ಬೇಡಿಕೆ: ರೈತರ ಜೀವನಾಡಿ ಎತ್ತುಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಮುಂಗಾರು ಮಳೆ ಆದರೆ ಸಾಕು ಭೂಮಿ ಸಾಗುವಳಿ ಮಾಡಲು ರೈತರ ಜೀವನಾಡಿ ಎತ್ತುಗಳಿಗೆ ಸಾಕಷ್ಟು ಬೇಡಿಕೆ ಬರುತ್ತದೆ. ಬಿತ್ತನೆ ಮಾಡಲು ಎತ್ತುಗಳ ಸಹಾಯಬೇಕಾಗುತ್ತದೆ. ಜತೆಗೆ ಟ್ರ್ಯಾಕ್ಟರ್ ಬಾಡಿಗೆ ಮೂಲಕವೂ ಬಿತ್ತನೆ ಪ್ರಮಾಣ ಸದ್ಯ ಹೆಚ್ಚಾಗುವ ನಿರೀಕ್ಷೆಯಿದೆ.
•ಸಿಕಂದರ ಎಂ. ಆರಿ