ಆಳಂದ: ತಾಲೂಕಿನಲ್ಲಿ ಮಳೆಯಿಂದಾಗಿ ಯಾವುದಾದರೂ ಅನಾಹುತ ಸಂಭವಿಸಿದರೆ ತುರ್ತು ಪರಿಸ್ಥಿತಿ ಎದುರಿಸಲು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸನ್ನದ್ಧರಾಗಿರಬೇಕು. ಅಲ್ಲದೇ ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನ ಬಿಟ್ಟು ಹೋಗುವಂತಿಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ದಿಲೀಷ್ ಸಸಿ ಸೂಚಿಸಿದರು.
ಶುಕ್ರವಾರ ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ಪಿಡಿಒಗಳ ಕಾರ್ಯವೈಖರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಾಲೂಕಿನ ಕೊರಳ್ಳಿ ಗ್ರಾಪಂಗೆ ಭೇಟಿ ನೀಡಿದ ಸಿಇಒ ಅವರನ್ನು ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ ಸ್ವಾಗತಿಸಿದರು. ನಂತರ ಮಾತನಾಡಿದ ಸಿಇಒ ಗ್ರಾಪಂ ಆಡಳಿತ ಮಂಡಳಿ ಉದ್ಯೋಗ ಖಾತ್ರಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದೆ ವೇಳೆ ಗ್ರಾಪಂ ಸದಸ್ಯರು ಕೊರಳ್ಳಿ ಗ್ರಾಪಂ ಕಚೇರಿಗೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಉದ್ಯೋಗ ಖಾತ್ರಿಯಲ್ಲಿ ಕೈಗೊಳ್ಳಲು ಅನುಮತಿ ನೀಡಬೇಕು ಎಂದು ಕೋರಿದರು. ಕೊರಳ್ಳಿ ಗ್ರಾಪಂ ಅಧ್ಯಕ್ಷ ಸುಭಾಷ ರಾಠೊಡ, ಗ್ರಾಪಂ ಸದಸ್ಯರು, ಪಿಡಿಒ ಸಿದ್ದರಾಮ ಚಿಂಚೋಳಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು. ಇದಕ್ಕೂ ಮುನ್ನ ಯಳಸಂಗಿ ಗ್ರಾಪಂಗೆ ಭೇಟಿ ನೀಡಿದ ಅವರು, ಕಾಮಗಾರಿ ಅಸಮರ್ಪಕವಾಗಿ ಮಾಡಲಾಗಿದೆ ಎನ್ನುವ ಕುರಿತು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿದ ದೂರಿನ ಕುರಿತು ಪಿಡಿಒ ಅವರನ್ನು ವಿಚಾರಿಸಿದರು. ನಂತರ ಸ್ಥಳೀಯರಿಂದ ಅಹವಾಲು ಸ್ವೀಕರಿಸಿದರು.
ಬೋಧನ ಗ್ರಾಪಂ ವ್ಯಾಪ್ತಿಯ ಗುಂಜ ಬಬಲಾದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಹಿಂದೆ ಉದ್ಯೋಗ ಖಾತ್ರಿ ಅಡಿಯಲ್ಲಿ ಆವರಣ ಗೋಡೆ ಮತ್ತು ಆಟದ ಮೈದಾನ ಅಭಿವೃದ್ಧಿ ಪಡಿಸುವ ಪ್ರಸ್ತಾವನೆ ಬಂದ ಪ್ರಯುಕ್ತ ಸಿಇಒ ಖುದ್ದಾಗಿ ಪರಿಶೀಲಿಸಿದರು. ನಂತರ ಸ್ಥಳೀಯರೊಂದಿಗೆ ಚರ್ಚಿಸಿ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು. ಬೋಧನ ಗ್ರಾಪಂ ಅಧ್ಯಕ್ಷ ಸಾಗರ, ಪಿಡಿಒ ವಿಜಯ ಸನಗದಿ, ಮುಖ್ಯ ಶಿಕ್ಷಕ ನಿಂಗಪ್ಪ ಮಾಗೊಂಡ ಇತರರು ಇದ್ದರು. ಮಾಡಿಯಾಳ ಗ್ರಾಪಂಗೆ ಭೇಟಿ ನೀಡಿ, ಆಡಳಿತ ಕಾರ್ಯವೈಖರಿ ಮಾಹಿತಿ ಕಲೆಹಾಕಿದರು. ಯಳಸಂಗಿಯಲ್ಲಿ ಪಿಡಿಒ ಆನಂದ ದೊಡ್ಡಮನಿ ಇದ್ದರು, ಮಾಡಿಯಾಳ ಪಿಡಿಒ ಮಹೇಶ ಬೊರಟಗಿ, ನಿಂಬರಗಾದಲ್ಲಿ ಉಷಾ ಪಾಟೀಲ, ಜೆಇ ಲಿಂಗರಾಜ ಹಾಗೂ ತಾಪಂ ಇಒ ನಾಗಮೂರ್ತಿ ಕೆ. ಶೀಲವಂತ ಇದ್ದರು