Advertisement

1000 ಕೋವಿಡ್ ಬೆಡ್‌ಗೆ ತಯಾರಿ!

01:50 PM Jun 27, 2020 | Suhan S |

ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸ ಮುಂದುವರಿದಿದ್ದು, ಇದು ಇನ್ನೂ ಹೆಚ್ಚಿನ ಗಂಭೀರತೆ ತಾಳುವ ಭೀತಿ ಎದುರಾಗಿದೆ. ಹೀಗಾಗಿ ಸೋಂಕು ಇನ್ನೂ ಹೆಚ್ಚಿನ ಜನರಿಗೆ ವಿಸ್ತರಣೆಯಾದಲ್ಲಿ ತಕ್ಷಣ ಚಿಕಿತ್ಸೆ ನೀಡಲು 1 ಸಾವಿರ ಬೆಡ್‌ಗಳ ಐಸೋಲೇಶನ್‌ ಗಳ ವಾರ್ಡ್‌ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತದ ಮೂಲಗಳು ಖಚಿತಪಡಿಸಿವೆ.

Advertisement

ಹೌದು, ಈವರೆಗೆ ಮಹಾರಾಷ್ಟ್ರದಿಂದ ಬಂದವರಿಗೆ ಕಾಣಿಸಿಕೊಳ್ಳುತ್ತಿದ್ದ ಈ ಸೋಂಕು, ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲದ ಸ್ಥಳೀಯ ವಾಸಿಗಳಿಗೂ ಅಂಟಿಕೊಂಡಿದೆ. ಇದೆಲ್ಲವನ್ನೂ ಗಮನಿಸಿದರೆ ಸೋಂಕು, ಸಮುದಾಯದಲ್ಲಿ ವಿಸ್ತರಿಸುವ ಭಾರಿ ಆತಂಕವಿದೆ. ಒಬ್ಬ ಸೋಂಕಿತನಿಂದ ಕನಿಷ್ಠ 5ರಿಂದ 8 ಜನರಿರಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ಹೀಗೆ ಮುಂದುವರಿದರೆ, ಇನ್ನೂ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುವ ಆತಂಕವಿದ್ದು, ಜನರು ಕಡ್ಡಾಯವಾಗಿ ಮಾಸ್ಕ್ ಬಳಕೆ, ಸ್ಯಾನಿಟೈಸರ್‌, ಸಾಮಾಜಿಕ ಅಂತರವನ್ನು ಸ್ವಯಂ ಪ್ರೇರಣೆಯಿಂದ ಅಳವಡಿಸಕೊಳ್ಳಲೇಬೇಕಿದೆ. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಡ್‌ಗಳೇ ಸಿಗುತ್ತಿಲ್ಲ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ. ನಮ್ಮ ಜಿಲ್ಲೆಯಲ್ಲೂ ಅಂತಹ ಪರಿಸ್ಥಿತಿ ಎದುರಾದರೆ, ಸೋಂಕಿತರಿಗೆ ತಕ್ಷಣ ಚಿಕಿತ್ಸೆ ನೀಡಲು, ಕಟ್ಟಡಗಳ ಗುರುತಿಸಲು ಜಿಲ್ಲಾಡಳಿತ ಮುಂದಾಗಿದೆ ಎನ್ನಲಾಗಿದೆ.

ಹೊಸ ಕಟ್ಟಡ ಗುರುತು: ಸದ್ಯ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್‌-19 ಆಸ್ಪತ್ರೆಯನ್ನಾಗಿ ಮಾಡಿದ್ದು, ಇಲ್ಲಿ 250 ಜನರಿಗೆ ಏಕಕಾಲಕ್ಕೆ ಚಿಕಿತ್ಸೆ ನೀಡಲು ಸಾಧ್ಯವಿದೆ. ಇದಕ್ಕಾಗಿ ವೈದ್ಯರು, ದಾದಿಯರು, ನರ್ಸ್‌ಗಳು ಹೆಚ್ಚುವರಿಯಾಗಿ ಬೇಕಾಗುತ್ತಾರೆ. ಅಂತಹ ಪರಿಸ್ಥಿತಿ ಉದ್ಭವಿಸಿದಲ್ಲಿ, ಖಾಸಗಿ ವೈದ್ಯರು, ನರ್ಸ್‌ಗಳ ಸೇವೆಯನ್ನೂ ಬಳಸಿಕೊಳ್ಳಲು ಅವಕಾಶವಿದೆ. ಅಲ್ಲದೇ ಜಿಲ್ಲೆಯ 28 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲು ಸರ್ಕಾರ ಒಪ್ಪಿಗೆ ನೀಡಿದೆಯಾದರೂ 28 ಆಸ್ಪತ್ರೆಗಳು ಸೇರಿ 500 ಬೆಡ್‌ಗಳಾಗುವುದಿಲ್ಲ. ಹೀಗಾಗಿ ಮುಂಜಾಗ್ರತವಾಗಿ ಜಿಲ್ಲಾ ಕೇಂದ್ರದಲ್ಲಿ ಇರುವ ಸರ್ಕಾರಿ ಖಾಲಿ ಕಟ್ಟಡಗಳನ್ನು ಗುರುತಿಸಿಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ನವನಗರದ ಅಬಕಾರಿ ಇಲಾಖೆಯ ಸುತ್ತ ಇರುವ ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರ, ಜಿಪಂನ ಜಿಲ್ಲಾ ಸಂಪನ್ಮೂಲ ಕೇಂದ್ರ ಸದ್ಯ ಖಾಲಿ ಇವೆ. ಅಲ್ಲಿಯೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಾಧ್ಯವಿದೆ. ಇವುಗಳ ಜತೆಗೆ ಹಲವು ಮಂಗಲ ಕಾರ್ಯಾಲಯ, ಸರ್ಕಾರಿ ಸಮುದಾಯ ಭವನಗಳನ್ನೂ ಬಳಸಿಕೊಳ್ಳುವ ಚಿಂತನೆ ಇದೆ ಎನ್ನಲಾಗಿದೆ.

ಕುಮಾರೇಶ್ವರ ಆಸ್ಪತ್ರೆಗೆ ಸರ್ಕಾರಿ ಆಸ್ಪತ್ರೆ: ನವನಗರದ ಸರ್ಕಾರಿ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ ಬಳಿಕ, ಜಿಲ್ಲಾ ಆಸ್ಪತ್ರೆಯಲ್ಲಿದ್ದ ಹೆರಿಗೆ ವಿಭಾಗವನ್ನು ಹಳೆಯ ಬಾಗಲಕೋಟೆಯ 50 ಹಾಸಿಗೆಯ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನು ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳ ರೋಗಿಗಳನ್ನು ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕುಮಾರೇಶ್ವರ ಆಸ್ಪತ್ರೆ ಜಿಲ್ಲಾಡಳಿತಕ್ಕೆ ನೆರವಾಗಿದೆ.

Advertisement

18 ಲಕ್ಷ ಜನಸಂಖ್ಯೆ: ಜಿಲ್ಲೆಯಲ್ಲಿ ಕಳೆದ 2011ರ ಜನಗಣತಿ ಪ್ರಕಾರ 18,89,752 ಜನಸಂಖ್ಯೆ ಇದೆ. 2020ರ ವೇಳೆಗೆ ಇದು ಶೇ.10ರಷ್ಟು ಹೆಚ್ಚುವರಿಯಾಗಿದೆ. ಹೀಗಾಗಿ ಸದ್ಯ ಜಿಲ್ಲೆಯಲ್ಲಿ ಗರಿಷ್ಠ 19ರಿಂದ 20 ಲಕ್ಷ ಜನಸಂಖ್ಯೆ ಇದ್ದು, ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.10ರಷ್ಟು ಜನರಿಗೆ ಸೋಂಕು ತಗುಲಿದರೂ ಜಿಲ್ಲೆಯಲ್ಲಿ ಚಿಕಿತ್ಸೆ ನೀಡಲು ಎಲ್ಲ ರೀತಿಯ ಸನ್ನದ್ಧು ಇರಬೇಕು ಎಂಬುದು ಜಿಲ್ಲಾಡಳಿತದ ಯೋಜನೆ. ಬುಧವಾರದವರೆಗೆ ಕಳುಹಿಸಿದ್ದ 977 ಜನರ ವರದಿ ಬರಬೇಕಿದೆ.

ಜಿಲ್ಲಾ ಕೋವಿಡ್‌-19 ಆಸ್ಪತ್ರೆಯಲ್ಲಿ 250 ಜನರಿಗೆ ಚಿಕಿತ್ಸೆ ನೀಡಲು ಅವಕಾಶವಿದೆ. ಅದಕ್ಕೂ ಹೆಚ್ಚಿನ ಸೋಂಕಿತರು ಪತ್ತೆಯಾದಲ್ಲಿ, ಕುಮಾರೇಶ್ವರ ಆಸ್ಪತ್ರೆಗೆ ಸ್ಥಳಾಂತರಿಸಲು ಸದ್ಯಕ್ಕೆ ಅವಕಾಶ ಮಾಡಿಕೊಳ್ಳಲಾಗಿದೆ. –ಡಾ|ಪ್ರಕಾಶ ಬಿರಾದಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ

ಸದ್ಯ ಕೋವಿಡ್‌-19 ಆಸ್ಪತ್ರೆಯಲ್ಲಿ 250 ಬೆಡ್‌ ಇವೆ. ಕೋವಿಡ್ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದು, ಜನರೂ ಸ್ವಯಂ ನಿಯಂತ್ರಣ ಹಾಕಿಕೊಂಡು ಸೋಂಕಿನ ಕುರಿತು ಎಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾದಲ್ಲಿ, ಬಿವಿವಿ ಸಂಘದ ವೈದ್ಯಕೀಯ ಕಾಲೇಜಿನಿಂದ 400 ಹಾಸಿಗೆಯ ಪ್ರತ್ಯೇಕ ಆಸ್ಪತ್ರೆ, ಕೋವಿಡ್‌-19 ಆಸ್ಪತ್ರೆಗಾಗಿ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೆ, ಚಿಕಿತ್ಸೆಗೆ ಯಾವುದೇ ಸಮಸ್ಯೆ ಇಲ್ಲ.  –ಡಾ|ಅನಂತ ದೇಸಾಯಿ, ಡಿಎಚ್‌ಒ

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next