Advertisement

ಜಿಪಂ ಕೈ ಸದಸ್ಯರು ಅಜ್ಞಾತ ಸ್ಥಳಕ್ಕೆ

05:15 PM May 15, 2020 | Suhan S |

ಕೊಪ್ಪಳ: ಇಲ್ಲಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರಡ್ಡಿ ಅವರನ್ನು ಅಧ್ಯಕ್ಷ ಗಾದಿಯಿಂದ ಕೆಳಗಿಳಿಸಲು ಆಡಳಿತ ಪಕ್ಷದ ಸದಸ್ಯರೇ ಸಜ್ಜಾಗಿದ್ದಾರೆ. ಅವಿಶ್ವಾಸಕ್ಕೆ ಬೇಕಾದ ತಯಾರಿ ನಡೆದಿದೆ. ಆದರೆ ಆಪರೇಷನ್‌ ಮಾತು ಕೇಳಿಬರುವಾಗಲೇ ಗುರುವಾರ ಕೈ ಸದಸ್ಯರು ಅಜ್ಞಾತ ಸ್ಥಳಕ್ಕೆ ತೆರಳಿರುವುದು ರಾಜಕೀಯ ಚಟುವಟಿಕೆ ಬಿರುಸುಗೊಂಡಿವೆ.

Advertisement

ಒಂದೆಡೆ ಕೋವಿಡ್ ದ ಆರ್ಭಟ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ ಜಿಪಂ ರಾಜಕೀಯದ ಆರ್ಭಟವೂ ಬಿರುಸುಗೊಂಡಿದೆ. ತಮಗೆ ಬಹುಮತ ಇದೆ. ಹೇಗಾದರೂ ಮಾಡಿ ಅಧ್ಯಕ್ಷ ವಿಶ್ವನಾಥರಡ್ಡಿ ಅವರನ್ನು ಕೆಳಗಿಳಿಸಬೇಕೆಂದು ಕಾಂಗ್ರೆಸ್‌ ಪಣ ತೊಟ್ಟಿದೆ. ಆದರೆ ಅಧ್ಯಕ್ಷ ಗಾದಿ ಉಳಿಸಿಕೊಳ್ಳಲು ಅಧ್ಯಕ್ಷ ವಿಶ್ವನಾಥರಡ್ಡಿ ಅವರು ಹಲವು ಕಸರತ್ತು ನಡೆಸುತ್ತಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿ ಬೆನ್ನು ಬಿದ್ದಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಈ ಮಧ್ಯೆ ಗುರುವಾರ ಕಾಂಗ್ರೆಸ್‌ ಬಿರುಸಿನ ಚಟುವಟಿಕೆ ನಡೆದಿವೆ. ಬಿಜೆಪಿ ತನ್ನ ಸದಸ್ಯರನ್ನು ಸೆಳೆಯುವ ಪ್ರಯತ್ನ ನಡೆಸಬಹುದು ಎಂದು ಪಕ್ಷದ ಎಲ್ಲ ಸದಸ್ಯರನ್ನು ಒಂದೆಡೆ ಭದ್ರವಾಗಿರಿಸಿಕೊಳ್ಳಲು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದೀರ್ಘ‌ ಸಭೆ ನಡೆಸಿತು. ಯಾವುದೇ ಕಾರಣಕ್ಕೂ ಅವಿಶ್ವಾಸದಲ್ಲಿ ಹಿನ್ನಡೆಯಾಗಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್‌ ಎಲ್ಲ ಸದಸ್ಯರನ್ನು ಅಜ್ಞಾತ ಸ್ಥಳಕ್ಕೆ ಕಳುಹಿಸಿಕೊಟ್ಟಿದೆ. ಪ್ರಸ್ತುತ ಕೋವಿಡ್ ಹಿನ್ನೆಲೆಯಲ್ಲಿ ದೇಶವೇ ಲಾಕ್‌ ಡೌನ್‌ನಲ್ಲಿದೆ. ಈ ವೇಳೆ ಎಲ್ಲ ರೆಸಾರ್ಟ್‌ಗಳು ಬಂದ್‌ ಆಗಿದ್ದು, ಇಂತಹ ಸಂದರ್ಭದಲ್ಲಿ ತನ್ನೆಲ್ಲ ಸದಸ್ಯರನ್ನು ಅಜ್ಞಾತ ಸ್ಥಳಕ್ಕೆ ರವಾನೆ ಮಾಡುವ ಮೂಲಕ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ರಾಜಕೀಯ ರಣತಂತ್ರ ಹೆಣೆದಿದ್ದಾರೆ.

ಇನ್ನೂ ಇತ್ತ ಬಿಜೆಪಿ ತಮಗೆ ಬೆಂಗಾವಲಾಗಲಿದೆ ಎಂಬ ಭರವಸೆಯಿಂದಲೇ ಅಧ್ಯಕ್ಷರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಇದಲ್ಲದೇ, ಬಿಜೆಪಿಯಲ್ಲೂ ಈಗ ಬಿರುಸಿನ ಚಟುವಟಿಕೆಗಳು ಚುರುಕುಗೊಂಡಿವೆ. ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್‌ ಅವರು, ಜಿಪಂನ 11 ಸದಸ್ಯರ ಸಭೆ ಕರೆದಿದ್ದು, ಸಭೆಗೆ ಎಷ್ಟು ಜನರು ಹಾಜರಾಗಲಿದ್ದಾರೆ ಎನ್ನುವ ಆಧಾರದ ಮೇಲೆ ಅವಿಶ್ವಾಸದ ನಿಲುವಳಿ ಗೊತ್ತಾಗಲಿದೆ. ಬಿಜೆಪಿಯ 6-8 ಸದಸ್ಯರನ್ನು ಕಾಂಗ್ರೆಸ್‌ ಆಪರೇಷನ್‌ ಮಾಡಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಆದರೆ ಕೈ ಪಾಳೆಯ ಮಾತ್ರ ಆಪರೇಷನ್‌ ಮಾಡುವುದು ನಮ್ಮ ಸಂಸ್ಕೃತಿಯಲ್ಲ. ಅದು ಬಿಜೆಪಿಯದ್ದು ಎನ್ನುವ ಮಾತನ್ನಾಡುತ್ತಿದೆ.

ಕುತೂಹಲ: ಜಿಪಂನ ರಾಜಕೀಯ ಭಾರಿ ಕುತೂಹಲ ಕೆರಳಿಸಿದೆ. ಕೆಲವರು ಆಪರೇಷನ್‌ ಕಮಲ ಎನ್ನುತ್ತಿದ್ದರೆ ಇನ್ನೂ ಕೆಲವರು ಆಪರೇಷನ್‌ ಹಸ್ತ ಎನ್ನುತ್ತಿದ್ದಾರೆ. ಆದರೆ ಅವರವರ ಸುರಕ್ಷತೆಯಲ್ಲೇ ಎಲ್ಲರೂ ಇದ್ದಾರೆ ಎನ್ನುವ ಮತ್ತೂಂದು ಮಾತು ಕೇಳಿ ಬಂದಿವೆ. ಕೈ ಸದಸ್ಯರು ಮುಂಜಾಗ್ರತೆಯಿಂದ ಅಜ್ಞಾತ ಸ್ಥಳಕ್ಕೆ ತೆರಳಿರುವುದು ಮಾತ್ರ ಪಕ್ಕಾ ಆಗಿದೆ. ಪ್ರಾದೇಶಿಕ ಆಯುಕ್ತರ ಸಮ್ಮತಿಗಾಗಿ ಕಾಂಗ್ರೆಸ್‌ ಪಾಳೆಯ ಕಾದು ಕುಳಿತಿದೆ.

Advertisement

ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ವಿಷಯದಲ್ಲಿ ನಮ್ಮ ಸದಸ್ಯರಿಗೆ ಕಾಂಗ್ರೆಸ್‌ ನಾಯಕರು ಆಮಿಷ ಒಡ್ಡುತ್ತಿರುವ ಸುದ್ದಿಯೂ ಇದೆ.ಆದರೆ ನಮ್ಮ ಸದಸ್ಯರು ಅವರ ಆಮಿಷಕ್ಕೆ ಒಳಗಾಗಲ್ಲ. ಜಿಪಂ ಅಧ್ಯಕ್ಷರೇ ಬೆಂಬಲ ನೀಡುವಂತೆ ಕೇಳಿಕೊಂಡಿದ್ದರು. ಹಾಗಾಗಿ ಅವರಿಗೆ ನಾವು ಬೆಂಬಲ ನೀಡುವ ಭರವಸೆ ವ್ಯಕ್ತಪಡಿಸಿದ್ದೇವು. ನಮ್ಮ ಸದಸ್ಯರ ಜೊತೆ ಚರ್ಚೆ ನಡೆಸಲು ಸಭೆ ನಡೆಸಲಿದ್ದೇನೆ. ನಮ್ಮ ಸದಸ್ಯರು ಎಲ್ಲೂ ಹೋಗಿಲ್ಲ. –ದೊಡ್ಡನಗೌಡ ಪಾಟೀಲ್‌, ಬಿಜೆಪಿ ಜಿಲ್ಲಾಧ್ಯಕ್ಷ

ನಾವು ಯಾವುದೇ ಸದಸ್ಯರನ್ನು ಆಪರೇಷನ್‌ ಮಾಡಿಲ್ಲ. ಆಪರೇಷನ್‌ ಮಾಡುವುದು ಬಿಜೆಪಿಯವರ ಸಂಸ್ಕೃತಿ. ನಮ್ಮ ಸಂಸ್ಕೃತಿಯಲ್ಲ. ಅವರಲ್ಲಿಯೇ ನಮಗೆ ಸ್ವಯಂ ಬೆಂಬಲ ಕೊಡುವವರು ತುಂಬಾ ಜನ ಇದ್ದಾರೆ. ನಾನು ನಮ್ಮ ಸದಸ್ಯರ ಸಭೆ ಕರೆದು ಚರ್ಚಿಸಿದ್ದೇನೆ. ಅವರ ಸಮಸ್ಯೆಗಳ ಕುರಿತು ಸಮಾಲೋಚಿಸಿದ್ದೇನೆ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ಏನಾಗುತ್ತೋ ಕಾದು ನೋಡೋಣ. ನಮ್ಮೆಲ್ಲ ಸದಸ್ಯರು ಒಂದೆಡೆ ಇದ್ದಾರೆ. –ಶಿವರಾಜ ತಂಗಡಗಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

 

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next