Advertisement

ಕೋವಿಡ್‌ ಮೂರನೇ ಅಲೆ ತಡೆಗೆ ಸಿದ್ಧತೆ ಕೈಗೊಳ್ಳಿ

05:29 PM Aug 14, 2021 | Team Udayavani |

ಬಳ್ಳಾರಿ: ಸಂಭಾವ್ಯ ಕೋವಿಡ್‌ 3ನೇ ಬಳ್ಳಾರಿ ಜಿಲ್ಲೆಗೆ ಯಾವುದೇ ಸಮಯದಲ್ಲಾದರೂ ಅಪ್ಪಳಿಸುವ ಸಾಧ್ಯತೆ ಇದೆ. ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಹಾಸಿಗೆಗಳು, ಆಕ್ಸಿಜನ್‌, ವೆಂಟಿಲೇಟರ್‌, ಔಷಧಿ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ| ಅಜಯ್‌ ನಾಗಭೂಷಣ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಪಂ ನೂತನ ಸಭಾಂಗಣದಲ್ಲಿ ನಡೆದ ಕೋವಿಡ್‌ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಟೆಸ್ಟಿಂಗ್‌ ಪ್ರಮಾಣ ಹೆಚ್ಚಿಸುವ ಹಾಗೂ ನಿಗದಿತ ಅವಧಿಯಲ್ಲಿ ಟೆಸ್ಟಿಂಗ್‌ ರಿಸಲ್ಟ್ ಹಾಗೂ ಚಿಕಿತ್ಸೆ ನೀಡುವ ಕಡೆ ವಿಶೇಷಗಮನಹರಿಸುವ ಕೆಲಸವನ್ನು
ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡಬೇಕು. ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಪೌಷ್ಟಿಕ ಮಕ್ಕಳ ಆರೋಗ್ಯದ ಕಡೆಗೆ ಗಮನಹರಿಸಿ ಮತ್ತು ಅವರಿಗೆ ಪೌಷ್ಟಿಕ ಆಹಾರ (ನ್ಯೂಟ್ರೀಷಿಯನ್‌ಫುಡ್‌) ಒದಗಿ ಎಂದರು.

50 ವೆಂಟಿಲೇಟರ್‌ ಹಾಸಿಗೆ ಮೀಸಲು: ಸಂಭಾವ್ಯ 3ನೇ ಅಲೆ ಮಕ್ಕಳಿಗೆ ಹೆಚ್ಚಿನ ಸಮಸ್ಯೆ ಉಂಟುಮಾಡುತ್ತದೆ ಎಂದು ತಜ್ಞರು ಅಂದಾಜಿಸಿದ ಹಿನ್ನೆಲೆ ಜಿಲ್ಲೆಯ ಕೋವಿಡ್‌ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿಯೇ 50 ವೆಂಟಿಲೇಟರ್‌ಗಳ ಹಾಸಿಗೆಯನ್ನು ಮೀಸಲಿಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ ಅವರು ತಿಳಿಸಿದರು.

ನಮ್ಮಲ್ಲಿ 154 ವೆಂಟಿಲೇಟರ್‌ಗಳಿದ್ದು, ಸರ್ಕಾರದಿಂದ ಕೆಲ ವೆಂಟಿಲೇಟರ್‌ಗಳು ಬರುತ್ತಿವೆ. ಎನ್‌ಎಂಡಿಸಿ ನೀಡಿದ ದೇಣಿಗೆ ಹಣದಿಂದಲೂ ವೆಂಟಿಲೇಟರ್‌ಗಳು ಖರೀದಿಸಲು ಉದ್ದೇಶಿಸಿದ್ದು, ಜಿಲ್ಲೆಯಲ್ಲಿ 154 ರಿಂದ 200ಕ್ಕೆ ವೆಂಟಿಲೇಟರ್‌ ಹಾಸಿಗೆಗಳು ಹೆಚ್ಚಾಗಲಿವೆ ಎಂದು ವಿವರಿಸಿದರು.

ಇದನ್ನೂ ಓದಿ:ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳವಿಗೆ ಯತ್ನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

Advertisement

46ಕೆ ಆಕ್ಸಿಜನ್‌ ಸಂಗ್ರಹ ಸಾಮರ್ಥ್ಯ: ವಿಮ್ಸ್‌,ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಉತ್ಪಾದನಾ ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದ ಡಿಸಿ ಮಾಲಪಾಟಿಯವರು, ಜಿಲ್ಲೆಯಲ್ಲಿ ಯಾವುದೇ ರೀತಿಯ ಆಕ್ಸಿಜನ್‌ ಸಮಸ್ಯೆ
ಇದುವರೆಗೆ ಉದ್ಭವಿಸಿಲ್ಲ ಎಂದು ಸ್ಪಷ್ಟಪಡಿಸಿದರು.

4180 ಮಕ್ಕಳಿಗೆ ಕೋವಿಡ್‌ ಸೋಂಕು: ಜಿಲ್ಲೆಯಲ್ಲಿ 4180 ಮಕ್ಕಳಿಗೆ ಕೋವಿಡ್‌ ಸೊಂಕು ತಗುಲಿದ್ದು, ಅವರಲ್ಲಿ 3 ಮಕ್ಕಳು ಚಿಕಿತ್ಸೆಗೆ ಸ್ಪಂದಿಸದೇ ಕೋವಿಡ್‌ಗೆ ತುತ್ತಾಗಿದ್ದಾರೆ. ಮಿಸ್ಸಿ ಸೋಂಕು ಪ್ರಕರಣಗಳು ಹಾಗೂ ಕೋವಿಡ್‌ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವ
ನಿಟ್ಟಿನಲ್ಲಿ ಸಕಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಅಗತ್ಯ ತರಬೇತಿ ನೀಡಲಾಗಿದೆ ಎಂದು ಡಿಎಚ್‌ಒ ಡಾ| ಜನಾರ್ಧನ್‌ ಸಭೆಗೆ ಮಾಹಿತಿ ನೀಡಿದರು. 3ನೇ ಅಲೆಗೆ ಸಂಬಂಧಿಸಿದಂತೆ ಮಾಸ್ಕ್, ಗ್ಲೌಸ್‌, ಅಗತ್ಯ ಔಷಧಗಳನ್ನು, ಮಕ್ಕಳ ಹೋಂ ಐಸೋಲೇಶನ್‌ ಔಷಧಗಳು ಮತ್ತು ಪರಿಕರಗಳನ್ನು ಈಗಾಗಲೇ ಸಂಗ್ರಹ ಮಾಡಿಕೊಳ್ಳಲಾಗಿರುವುದನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ಅಜಯ್‌ ನಾಗಭೂಷಣ ಅವರ ಗಮನಕ್ಕೆ ತಂದರು.

25 ಆಮ್ಲಜನಕ ಸಾಂದ್ರಕಗಳ ವಿತರಣೆ: ಜಿಲ್ಲೆಯಲ್ಲಿರುವ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ತಲಾ 25 ರಿಂದ 27, ಸಮುದಾಯ ಆರೋಗ್ಯ ಕೇಂದ್ರಗಳಿಗೆ 4, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 2ರಂತೆ ಆಕ್ಸಿಜನ್‌ ಕಾನ್ಸಂಟ್ರೆಟರ್‌ಗಳನ್ನು ವಿತರಿಸಲಾಗಿದೆ. ಯಾವುದೇ ರೀತಿಯ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳ ಕೊರತೆ ಇಲ್ಲ ಎಂದು ಡಿಎಚ್‌ಒ ಡಾ| ಜನಾರ್ಧನ್‌ ಅವರು ತಿಳಿಸಿದರು. ಜಿಲ್ಲಾಡಳಿತದ ವತಿಯಿಂದ 3800 ಪಲ್ಸ್‌ ಆಕ್ಸಿಮಿಟರ್‌ಗಳನ್ನು ಆಸ್ಪತ್ರೆಗಳಿಗೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ವಿತರಿಸಲಾಗಿದ್ದು, ಇನ್ನೂ ಸಮರ್ಪಕ ಸಂಗ್ರಹ ನಮ್ಮಲ್ಲಿದೆ ಎಂದು ತಿಳಿಸಿದರು. ಬಳ್ಳಾರಿ ಜಿಪಂ ವತಿಯಿಂದ ನರೇಗಾ ಅನುದಾನದ ಅಡಿ 2300 ಪಲ್ಸ್‌ ಆಕ್ಸಿಮಿಟರ್‌ಗಳನ್ನು ಖರೀದಿಸಿ ವಿತರಿಸಲಾಗಿದೆ ಎಂದು ಜಿಪಂ ಸಿಇಒ ಕೆ.ಆರ್‌. ನಂದಿನಿ ಅವರು ತಿಳಿಸಿದರು.

24 ಗಂಟೆಗಳಲ್ಲಿ 485 ಜನರ ಸಾವು: ಕೋವಿಡ್‌ ಬಾಧಿತರಾಗಿ ಆಸ್ಪತ್ರೆಗೆ ದಾಖಲಾದ 24 ಗಂಟೆಯೊಳಗೆ ಮೊದಲ ಅಲೆ ಮತ್ತು ಎರಡನೇ ಅಲೆ ಸಂದರ್ಭದಲ್ಲಿ 485 ಜನರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. 48 ಗಂಟೆಯೊಳಗೆ 200, 72 ಗಂಟೆಯೊಳಗೆ 187,72 ಗಂಟೆಯ ನಂತರ 765, ಹೋಂ ಐಸೋಲೇಶನ್‌ ನಲ್ಲಿ 48 ಜನರು ಸೇರಿದಂತೆ ಒಟ್ಟು 1685 ಜನರು ಸಾವನ್ನಪ್ಪಿದ್ದಾರೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಎಸ್ಪಿ ಸೈದುಲು ಅಡಾವತ್‌, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ,
ಜಿಪಂ ಮುಖ್ಯ ಯೋಜನಾ ಧಿಕಾರಿ ಚಂದ್ರಶೇಖರ ಗುಡಿ, ಜಿಪಂ ಉಪಕಾರ್ಯದರ್ಶಿ ಜಾನಕಿರಾಮ್‌ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಮನೆಗಳ ನಿರ್ಮಾಣ ಫಾಲೋ ಅಪ್‌ ಮಾಡಿ
ಬಳ್ಳಾರಿ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಾನಿಗೊಳಗಾದ 296 ಮನೆಗಳಿಗೆ ನಿಗದಿಪಡಿಸಿದ ಅವಧಿಯೊಳಗೆ ಪರಿಹಾರ ವಿತರಿಸಬೇಕು. ಅವರು ಈ ಪರಿಹಾರದ ಹಣವನ್ನು ಬಳಸಿಕೊಂಡು ಪುನಃ ಮನೆ ಕಟ್ಟಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಫಾಲೋಆಪ್‌ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ| ಅಜಯ್‌ ನಾಗಭೂಷಣ್‌ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳೆ ಹಾನಿಯಾಗಿರುವ 337 ಹೆಕ್ಟೇರ್‌ ಪ್ರದೇಶದ ರೈತರಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದರು. ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಇಬ್ಬರು ಕುಟುಂಬಗಳಿಗೆ ನಿಯಮಾನುಸಾರ ಪರಿಹಾರ ವಿತರಿಸಲಾಗಿದೆ. ಮನೆ ಹಾನಿಗೊಳಗಾದವರಿಗೆ ಹಾಗೂ ಬೆಳೆಹಾನಿಯಾದವರಿಗೆ ಪರಿಹಾರ ವಿತರಿಸಲು ಕ್ರಮವಹಿಸಲಾಗುವುದು ಎಂದು ಅಪರ ಜಿಲ್ಲಾಕಾರಿ ಪಿ.ಎಸ್‌. ಮಂಜುನಾಥ ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ 4.73 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಇದುವರೆಗೆ 3.10 ಲಕ್ಷ ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ನೀರಾವರಿ ಪ್ರದೇಶದಲ್ಲಿ ಭತ್ತ ನಾಟಿಯಾಗಿದೆ. ಈ ಬಾರಿ ಮೆಣಸಿನಕಾಯಿ ಪ್ರದೇಶ ಜಾಸ್ತಿ ವಿಸ್ತರಣೆಯಾಗಿರುವುದರಿಂದ ಭತ್ತ ಮತ್ತು ಹತ್ತಿ ಬೆಳೆ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. 21 ಸಾವಿರ ಕ್ವಿಂಟಲ್‌ ಬೀಜಗಳು ಲಭ್ಯವಿತ್ತು; ಅದರಲ್ಲಿ 19500 ಕ್ವಿಂಟಲ್‌ ಬೀಜ ವಿತರಣೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌ ಅವರು ತಿಳಿಸಿದರು.

ಬಳ್ಳಾರಿ ಪ್ರಥಮ: ನರೇಗಾ ಪರಿಣಾಮಕಾರಿ ಅನುಷ್ಠಾನದಲ್ಲಿ ಇಡೀ ರಾಜ್ಯದಲ್ಲಿ ಬಳ್ಳಾರಿ ಪ್ರಥಮ ಸ್ಥಾನ ಪಡೆದಿದೆ. ವಾರ್ಷಿಕ ಗುರಿಯಲ್ಲಿ ಶೇ. 84ರಷ್ಟು ಪ್ರಗತಿ ಸಾಧಿಸಲಾಗಿದೆ. 8361172 ಮಾನವ ದಿನಗಳನ್ನು ಇದುವರೆಗೆ ಸೃಜನೆ ಮಾಡಲಾಗಿದೆ ಎಂದು ಜಿಪಂ ಸಿಇಒ ಕೆ.ಆರ್‌.ನಂದಿನಿ ಅವರು ಸಭೆಗೆ ವಿವರಿಸಿದರು.

ಗ್ರಾಪಂ, ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜಲಶಕ್ತಿ ಅಭಿಯಾನದ ಅಡಿ ಕೆರೆ ಹೂಳೆತ್ತುವಿಕೆ, ನಾಲಾ ಪುನರ್‌ ನವೀಕರಣ, ಸಮಗ್ರ ಕೆರೆ ಅಭಿವೃದ್ಧಿ, ಕಲ್ಯಾಣಿ ಪುನರ್‌ ನವೀಕರಣ, ಮಳೆಕೊಯ್ಲು ನೀರು ಸದ್ಬಳಕೆ, ಚೆಕ್‌ ಡ್ಯಾಂ, ಗೋಕಟ್ಟೆ ಅಭಿವೃದ್ಧಿ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ನಂತರ ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆಯನ್ನು ಸಹ ಇದೇ ಸಂದರ್ಭದಲ್ಲಿ ಅವರು ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್‌, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಜಿಪಂ ಮುಖ್ಯ ಯೋಜನಾಧಿ ಕಾರಿ
ಚಂದ್ರಶೇಖರ ಗುಡಿ, ಜಿಪಂ ಉಪಕಾರ್ಯದರ್ಶಿ ಜಾನಕಿರಾಮ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next