Advertisement

ಫ‌ಲಿತಾಂಶದ ಹಬ್ಬಕ್ಕೆ ಭರ್ಜರಿ ಸಿದ್ಧತೆ

06:50 AM May 23, 2019 | Team Udayavani |

ನವದೆಹಲಿ: ‘ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸಿದರು’ ಎಂಬ ಮಾತಿನಂತೆಯೇ, ರಾಜಕೀಯ ಪಕ್ಷಗಳ ನಾಯಕರು, ಫ‌ಲಿತಾಂಶ ಪ್ರಕಟಕ್ಕೂ ಮುಂಚೆಯೇ ಸಂಭ್ರಮಾಚರಣೆಗೆ ಸಿದ್ಧತೆ ಆರಂಭಿಸಿದ್ದಾರೆ.

Advertisement

ತಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆಂಬ ಅತೀವ ಆತ್ಮವಿಶ್ವಾಸದಿಂದ ದೇಶಾದ್ಯಂತ ಅನೇರ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಸ್ಥಳೀಯ ಮಟ್ಟದ ನಾಯಕರು ವಿಜಯೋತ್ಸವಕ್ಕೆ 2 ದಿನಗಳ ಮುಂಚೆಯೇ ರೆಡಿಯಾಗಿದ್ದಾರೆ. ಅದರಲ್ಲೂ ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎ ಗೆಲುವು ನಿಚ್ಚಳ ಎಂದು ಭವಿಷ್ಯ ನುಡಿದಿರುವ ಕಾರಣ, ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

ವಿಜಯೋತ್ಸವದ ವೇಳೆ ಸಿಡಿಸಲು ಪಟಾಕಿಗಳು, ಹಂಚಲು ಸಿಹಿ ತಿಂಡಿಗಳು, ಪಕ್ಷದ ಧ್ವಜಗಳು… ಹೀಗೆ ಎಲ್ಲವೂ ರೆಡಿಯಾಗಿವೆ. ಲೋಕಸಭೆ ಚುನಾವಣೆಯ ಮತ ಎಣಿಕೆ ಗುರುವಾರ ನಡೆಯಲಿರುವಂತೆಯೇ, ಅದಕ್ಕೂ 2 ದಿನಗಳ ಮುಂಚಿತವಾಗಿಯೇ ವಿವಿಧ ರಾಜಕೀಯ ಪಕ್ಷಗಳು ಭಾರಿ ಪ್ರಮಾಣದ ಸಿಹಿ ತಿನಿಸುಗಳಿಗೆ ಆರ್ಡರ್‌ ಕೊಟ್ಟಿವೆ. ಇನ್ನು ಸುದ್ದಿವಾಹಿನಿಗಳಿಗಂತೂ ಮತ ಎಣಿಕೆಯ ದಿನವೆಂದರೆ ಹಬ್ಬ. ಉತ್ತಮ ಟಿಆರ್‌ಪಿ ಗಿಟ್ಟಿಸಿಕೊಳ್ಳಲು ವಿವಿಧ ಟಿವಿ ಚಾನೆಲ್ಗಳು ವೀಕ್ಷಕರಿಗೆ ಭರ್ಜರಿ ಆಫ‌ರ್‌ಗಳನ್ನು ಘೋಷಿಸಿವೆ. ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಫ‌ಲಿತಾಂಶದ ಮಾಹಿತಿ ನೀಡುವ ಭರವಸೆಯನ್ನು, ವಿಜೇತ ಅಭ್ಯರ್ಥಿಯನ್ನು ಸರಿಯಾಗಿ ಗೆಸ್‌ ಮಾಡಿದವರಿಗೆ ನಗದು ಬಹುಮಾನ ನೀಡುವ ಘೋಷಣೆಗಳನ್ನೂ ಕೆಲವು ವಾಹಿನಿಗಳು ಮಾಡಿವೆ.

ಏಳು ಕೆಜಿ ಲಡ್ಡು,ಕೇಕ್‌
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಗುರುವಾರ ಸಂಜೆ ವಿಜಯೋತ್ಸವ ಆಚರಿಸಲೆಂದು 7 ಕೆಜಿ ವಿಶೇಷ ಲಡ್ಡು ಕೇಕ್‌ಗಳು ಮತ್ತು 4-5 ಕೆಜಿಯ ಮತ್ತೂಂದು ಮಾದರಿಯ ಕೇಕ್‌ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಬೆಂಗಾಲಿ ಪೇಸ್ಟ್ರಿ ಮಳಿಗೆಗೆ ಬಿಜೆಪಿ ಚಿಹ್ನೆಯಾದ ಕಮಲದ ಆಕಾರದ ಸಿಹಿತಿಂಡಿಗಳಿಗೂ ಆರ್ಡರ್‌ ಕೊಡಲಾಗಿದೆ. ದೆಹಲಿ ಬಿಜೆಪಿ ವಕ್ತಾರ ಪ್ರವೀಣ್‌ ಶಂಕರ್‌ ಕಪೂರ್‌ ಅವರು, ಕೆಜಿಗೆ 2 ಸಾವಿರ ರೂ. ಬೆಲೆಯಿರುವಂಥ 50 ಕೆಜಿ ಪಿಸ್ತಾ-ಬಾದಾಮಿ ಬರ್ಫಿಗೆ ಆರ್ಡರ್‌ ಕೊಟ್ಟಿದ್ದಾರೆ. ಇನ್ನು ಮುಂಬೈನಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ಕೆಲವು ದಿನಗಳ ಹಿಂದೆಯೇ 2 ಸಾವಿರ ಕೆಡಿ ಲಡ್ಡುಗಳನ್ನು ಖರೀದಿಸಿದ್ದಾರೆ.

ಟಿವಿ ಚಾನೆಲ್ಗಳಿಗೆ ಸೂಚನೆ
ಟಿವಿ ಚಾನೆಲ್ಗಳು ಸುದ್ದಿ ಹಾಗೂ ಸುದ್ದಿಯೇತರ ವಿಭಾಗಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು ಎಂದು ಮಾಹಿತಿ ಮತ್ತು ವಾರ್ತಾ ಪ್ರಸಾರ ಸಚಿವಾಲಯವು ಎಲ್ಲ ಸುದ್ದಿವಾಹಿನಿಗಳಿಗೆ ಸೂಚನೆ ನೀಡಿದೆ. ಚುನಾವಣೆ ಫ‌ಲಿತಾಂಶಕ್ಕೂ ಮುನ್ನಾದಿನ ಈ ಸೂಚನೆಯನ್ನು ಸಚಿವಾಲಯ ಹೊರಡಿಸಿದ್ದು, ಮಹತ್ವ ಪಡೆದಿದೆ. ಸುದ್ದಿ ವಾಹಿನಿ ವಿಭಾಗದಲ್ಲಿ ನೋಂದಾಯಿಸಿಕೊಂಡ ಚಾನೆಲ್ಗಳು ಸುದ್ದಿಯನ್ನು ಬಿತ್ತರಿಸಬೇಕು. ಸುದ್ದಿಯೇತರ ವಾಹನಿ ವಿಭಾಗದಲ್ಲಿ ನೋಂದಾಯಿಸಿಕೊಂಡ ಚಾನೆಲ್ಗಳು ಸುದ್ದಿಯನ್ನು ಬಿತ್ತರಿಸುವಂತಿಲ್ಲ. ಇವು ಕೇವಲ ಮನರಂಜನೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾಗಿ ಈ ನಿಯಮಗಳನ್ನು ಟಿವಿ ಚಾನೆಲ್ಗಳು ಅನುಸರಿಸಬೇಕು ಎಂದು ಮಹಿತಿ ಮತ್ತು ವಾರ್ತಾ ಪ್ರಸಾರ ಸಚಿವಾಲಯವು ಸೂಚನೆಯಲ್ಲಿ ತಿಳಿಸಿದೆ.

ದೇಶಾದ್ಯಂತ ಅಲರ್ಟ್‌ ಘೋಷಣೆ; ಹಿಂಸಾಚಾರ ಸಾಧ್ಯತೆ
ಮತ ಎಣಿಕೆ ಮುನ್ನಾದಿನವಾದ ಬುಧವಾರವೇ ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತ ಅಲರ್ಟ್‌ ಘೋಷಣೆ ಮಾಡಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸೂಚನೆ ನೀಡಲಾಗಿದ್ದು, ಫ‌ಲಿತಾಂಶದ ದಿನವೇ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇದೆ ಎಂದು ಹೇಳಿದೆ. ದೇಶದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಮತ್ತು ತ್ರಿಪುರಾಗಳಲ್ಲಿ ಕೆಲವು ಸಂಘ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಹಿಂಸಾಚಾರಕ್ಕೆ ಕರೆ ನೀಡಿದ್ದು, ಫ‌ಲಿತಾಂಶದ ಬೆನ್ನಲ್ಲೇ ಹಿಂಸಾಚಾರ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ, ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳಿಗೆ‌ ಅಲರ್ಟ್‌ ಕಳುಹಿಸಲಾಗಿದೆ.
‘ಮಹಾ ಫ‌ಲಿತಾಂಶ’ಕ್ಕೆ ವಾಹಿನಿಗಳ ಮಹಾ ಸಿದ್ಧತೆ
ಮತ ಎಣಿಕೆಗೆ ದಿನದಂದು ಜನಸಾಮಾನ್ಯರ ‘ಫ‌ಲಿತಾಂಶ ದಾಹ’ವನ್ನು ತಣಿಸಲು ದೇಶದ ನಾನಾ ಟಿವಿ ಪರಸ್ಪರ ಪೈಪೋಟಿಯ ಮೇರೆಗೆ ಸಜ್ಜಾಗಿವೆ. ಇದಕ್ಕಾಗಿ ಭರದ ಸಿದ್ಧತೆಗಳನ್ನೂ ಮಾಡಿಕೊಂಡಿದ್ದು, ಈ ಕಾಲಕ್ಕೆ ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನಗಳನ್ನೂ ತಮ್ಮ ವರದಿ, ವಿಶ್ಲೇಷಣೆಗೆ ಬಳಸಿಕೊಳ್ಳುತ್ತಿವೆ ಎಂದು ಹೇಳಲಾಗಿದೆ. ಕೆಲವು ವಾಹಿನಿಗಳು, ಮತ ಎಣಿಕೆ ಕೇಂದ್ರಗಳು ಹಾಗೂ ಗೆಲ್ಲುವ ಅಭ್ಯರ್ಥಿಗಳ ಸಡಗರಗಳನ್ನು ಸೆರೆ ಹಿಡಿಯಲು ಡ್ರೋಣ್‌ಗಳನ್ನು ಬಳಸಲು ಮುಂದಾಗಿದ್ದರೆ, ಮತ್ತೂ ಕೆಲವು ವಾಹಿನಿಗಳು ತಮ್ಮ ಸ್ಟುಡಿಯೋದಲ್ಲಿ ನಡೆಯುವ ವಿಶ್ಲೇಷಣೆಗಾಗಿ ವಿಎಚ್ಎಫ್ ಮತ್ತು ಅತ್ಯಾಧುನಿಕ ಗ್ರಾಫಿಕ್ಸ್‌ ತಂತ್ರಜ್ಞಾನದ ಮೊರೆ ಹೋಗಿವೆ. ಮತ್ತೂ ಕೆಲವು, ಅಧಿಕಾರ ಹಿಡಿಯುವ ಪಕ್ಷ ಅಥವಾ ಮೈತ್ರಿಕೂಟವನ್ನು ಹಾಗೂ ಅವು ಗಳಿಸುವ ಸ್ಥಾನಗಳನ್ನು ಕರಾರುವಾಕ್ಕಾಗಿ ಅಂದಾಜಿಸುವ ಪ್ರೇಕ್ಷಕರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿ ಪ್ರೇಕ್ಷಕರನ್ನು ತಮ್ಮ ವಾಹಿನಿಯತ್ತ ಸೆಳೆಯಲು ಪ್ರಯತ್ನಿಸಿವೆ ಎಂದು ಮೂಲಗಳು ತಿಳಿಸಿವೆ.

ಭಯ ಬೇಡ: ರಾಹುಲ್
ಮತ ಎಣಿಕೆಗೆ ಮುನ್ನಾ ದಿನವಾದ ಬುಧವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಮತದಾನೋತ್ತರ ಸಮೀಕ್ಷೆಗಳು, ಇವಿಎಂ ಭದ್ರತೆ ಕುರಿತ ಆತಂಕದ ನಡುವೆಯೇ ಅವರು ಈ ಸಂದೇಶವನ್ನು ರವಾನಿಸಿದ್ದಾರೆ. ‘ಮುಂದಿನ 24 ಗಂಟೆಗಳು ಅತ್ಯಂತ ಮಹತ್ವದ್ದು. ಎಲ್ಲರೂ ಜಾಗೃತರಾಗಿರಿ. ಭಯ ಪಡಬೇಡಿ; ನೀವೆಲ್ಲರೂ ಸತ್ಯಕ್ಕಾಗಿ ಹೋರಾಡುತ್ತಿದ್ದೀರಿ. ನಕಲಿ ಮತಗಟ್ಟೆ ಸಮೀಕ್ಷೆಗಳಿಂದ ನಿರಾಸೆಗೊಳ್ಳಬೇಡಿ. ಜೈ ಹಿಂದ್‌’ ಎಂದು ರಾಹುಲ್ ಬುಧವಾರ ಟ್ವೀಟ್ ಮಾಡಿದ್ದಾರೆ. ಜತೆಗೆ, ‘ನಿಮ್ಮ ಪರಿಶ್ರಮವು ವ್ಯರ್ಥವಾಗುವು ದಿಲ್ಲ. ನಿಮ್ಮ ಮೇಲೆ ಮತ್ತು ಪಕ್ಷದ ಮೇಲೆ ವಿಶ್ವಾಸವಿಡಿ’ ಎಂದೂ ಅವರು ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
ಥ್ಯಾಂಕ್ಸ್‌ ಎಂದ ಸ್ಮೃತಿ ಇರಾನಿ
ಇನ್ನೊಂದೆಡೆ, ಕೇಂದ್ರ ಸಚಿವೆ ಹಾಗೂ ಅಮೇಠಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರೂ ಬುಧವಾರ ಟ್ವೀಟ್ ಮಾಡಿದ್ದಾರೆ. ‘ಇನ್ನು 24 ಗಂಟೆಗಳಷ್ಟೇ ಬಾಕಿ. ನಾವೆಲ್ಲರೂ ಟಿವಿ ಸೆಟ್‌ಗಳಿಗೆ ಅಂಟಿಕೊಂಡಿರುತ್ತೇವೆ. ಈಗ ನಾನು ನನ್ನ ಪಕ್ಷ ಮತ್ತು ನನ್ನ ನಾಯಕತ್ವಕ್ಕೆ ಆಶೀರ್ವದಿಸಿರುವ ಲಕ್ಷಾಂತರ ಮಂದಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಸ್ಮತಿ ಬರೆದುಕೊಂಡಿದ್ದಾರೆ. ಮತ್ತೂಂದು ಟ್ವೀಟ್‌ನಲ್ಲಿ, ‘ಯಾರೆಲ್ಲ ಭಾರತ್‌ಕೆ ತುಕ್ಡೇ ಹೋಂಗೆ(ಭಾರತವನ್ನು ವಿಭಜಿಸುತ್ತೇವೆ) ಎಂದು ಘೋಷಣೆ ಕೂಗಿದ್ದರೋ, ಅವರ ವಿರುದ್ಧ ದೇಶದ ಜನ ಬದ್ಧತೆಯಿಂದ ನಿಂತರು. ಭಾರತಾಂಬೆ ಮತ್ತು ಆಕೆಯ ಭವಿಷ್ಯದ ಮೇಲೆ ನಂಬಿಕೆಯಿರಿಸಿದಂಥ ನಾಗರಿಕರಿಗೆ ನಾನು ಅಭಿನಂದಿಸಬಯಸುತ್ತೇನೆ’ ಎಂದೂ ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ ಭಾಗಿಯೇ?
ಸುಪ್ರೀಂ ಕೋರ್ಟ್‌ ಕೂಡ ಇವಿಎಂ ತಿರುಚುವಿಕೆಯಲ್ಲಿ ಭಾಗಿಯಾಗಿದೆಯೇ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್‌ ನಾಯಕ ಉದಿತ್‌ ರಾಜ್‌ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ವಿವಿಪ್ಯಾಟ್‌ನ ಎಲ್ಲ ಸ್ಲಿಪ್‌ಗ್ಳನ್ನೂ ಎಣಿಕೆ ಮಾಡಬೇಕು ಎಂಬ ಪ್ರತಿಪಕ್ಷಗಳ ಮನವಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್‌ ಬಗ್ಗೆ ಕಿಡಿಕಾರಿದ ಉದಿತ್‌ ರಾಜ್‌, ‘ಇವಿಎಂ ತಿರುಚುವಿಕೆಯಲ್ಲಿ ಸುಪ್ರೀಂ ಕೋರ್ಟ್‌ ಕೂಡ ಭಾಗಿದಾರನೇ? ಇಡೀ ಚುನಾವಣಾ ಪ್ರಕ್ರಿಯೆಗಾಗಿ ಕಳೆದ 3 ತಿಂಗಳಿಂದ ಎಲ್ಲ ಸರ್ಕಾರಿ ಕೆಲಸಗಳೂ ಸ್ಥಗಿತವಾಗಿರುವಾಗ, ಎಣಿಕೆ ಕಾರ್ಯ 2-3 ದಿನ ತಡವಾದರೆ ಸಮಸ್ಯೆಯೇನು’ ಎಂದೂ ಪ್ರಶ್ನಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next